ಹನಿಯಂಬಾಡಿ ಜಗದೀಶ್
ಮಂಡ್ಯನಗರದ ಮಹಾವೀರ ವೃತ್ತದಿಂದ ಪೇಟೆಬೀದಿಗೆ ಹಾದು ಹೋಗುವ ರೈಲ್ವೇ ಕೆಳಸೇತುವೆ ಅಕ್ಷರಶಃ ಅದ್ವಾನಗೊಂಡು ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಹಿಡೀ ಶಾಪ ಹಾಕುವಂತಾಗಿದೆ.
ಕೆಲವೇ ನಿಮಿಷಗಳ ಮಳೆಗೆ ಸೇತುವೆಯ ಕೆಳಭಾಗದಲ್ಲಿ ನೀರು ಬಂದು ನಿಲ್ಲುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಈ ಸೇತುವೆಯು ರೈಲ್ವೇ ಇಲಾಖೆಯ ಸುಪರ್ದಿಯಲ್ಲಿದ್ದು, ‘L’ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಅವೈಜ್ಞಾನಿಕ ಸೇತುವೆ ಕಾಮಗಾರಿಯಿಂದ ತಾವು ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದೇವೆಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಈ ಸೇತುವೆ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಕೊಂಡಿದ್ದೇವು, ಆದರೆ ಸೇತುವೆ ನಿರ್ಮಾಣದಿಂದ ಮೊತ್ತೊಂದು ಸಮಸ್ಯೆ ಸೃಷ್ಠಿಯಾಗಿದೆ. ಮಂಡಿಯುದ್ದ ಬಂದು ನಿಲ್ಲುವ ನೀರಿನಲ್ಲಿ ವಾಹನ ಓಡಿಸಿಕೊಂಡು ಹೋಗುವುದೇ ಸವಾಲಿನ ಕೆಲಸವಾಗಿದೆ. ಅಲ್ಲದೇ ರಾತ್ರಿ ವೇಳೆಯಲ್ಲಿ ಸೇತುವೆ ಕೆಳಭಾಗದಲ್ಲಿ ವಿದ್ಯುತ್ ದೀಪಗಳೇ ಇರುವುದಿಲ್ಲ, ಇದರಿಂದ ಸೇತುವೆ ಮೂಲಕ ಹೆಂಗಸರು, ಮಕ್ಕಳು ಪ್ರಯಾಣಿಸುವುದೇ ಕಷ್ಟವಾಗಿದೆ. ಈ ಬಗ್ಗೆ ರೈಲ್ವೇ ಇಲಾಖೆಯು ಗಮನಹರಿಸುತ್ತಿಲ್ಲ ಎಂದು ಸ್ಥಳೀಯ ವ್ಯಾಪಾರಿ ವೆಂಕಟೇಶ್ ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ಸಂಸದ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ರವಿಕುಮಾರ್ ಅವರು ಹಾಗೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ, ಸೇತುವೆ ಲೋಪದೋಷಗಳನ್ನು ಸರಿಪಡಿಸಿ ಎಲ್ಲರಿಗೂ ಮುಕ್ತವಾಗಿ ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ದೊಡ್ಡ ಅನಾಹುತಗಳು ನಡೆದು ಸಾವು ನೋವುಗಳ ಸಂಭವಿಸುವ ಮೊದಲೇ ಸಂಬಂಧಪಟ್ಟವರು ಎಚ್ಚೆತ್ತು ಈ ರೈಲ್ವೇ ಕೆಳಸೇತುವೆಯಲ್ಲಿ ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಬೇಕೆಂಬುದು ‘ನುಡಿಕರ್ನಾಟಕ.ಕಾಂ’ ನ ಆಶಯವಾಗಿದೆ.




