Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸ್ವ-ಸಹಾಯ ಸಂಘಗಳಿಗೆ 9 ಲಕ್ಷ ಮೀನು ಮರಿಗಳ ವಿತರಣೆ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಯೋಜನೆಯಡಿ ಮತ್ಸ್ಯ ಸಂಜೀವಿನಿ, ಕುಕ್ಕುಟ ಸಂಜೀವಿನಿ, ಕ್ಷೀರ ಸಂಜೀವಿನಿಯಂತಹ ಕಾರ್ಯಕ್ರಮಗಳು ಲಭ್ಯವಿದ್ದು, ಸದರಿ ಚಟುವಟಿಕೆಗಳನ್ನು ಬಳಸಿಕೊಂಡು ಸ್ವ-ಸಹಾಯ ಸಂಘಗಳ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್.‌ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್‌ ನ ಕಾವೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಸಮಗ್ರ ಮೀನು ಸಾಕಾಣಿಕೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು ಸ್ವ-ಸಹಾಯ ಸಂಘಗಳ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಭಾಗವಹಿಸಬೇಕು ಆ ಮೂಲಕ ಉದ್ಯಮದ ಮಾದರಿಯಲ್ಲಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಉತ್ತಮ ಪ್ರೋಟೀನ್

ಬಾಣಂತಿ, ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರೋಟೀನ್‌ ಮತ್ತು ವಿಟಮಿನ್‌ ಅವಶ್ಯಕತೆ ಇದ್ದು, ಮೀನು ಸೇವನೆಯಿಂದ ಅತ್ಯಧಿಕ  ಪ್ರೋಟೀನ್‌ಮತ್ತು ವಿಟಮಿನ್‌  ದೊರೆಯುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಜಂಟಿಯಾಗಿ ಅರಿವು ಮೂಡಿಸಲು ಕ್ರಮವಹಿಸಬೇಕು ಎಂದು ಸಿಇಓ ಸೂಚಿಸಿದರು.

೦೯ ಲಕ್ಷ ಮೀನು ಮರಿಗಳ ವಿತರಣೆ: ಜಿಲ್ಲೆ ಆಸಕ್ತ ೪೯ ಸ್ವ-ಸಹಾಯ ಸಂಘಗಳಿಗೆ ೪೯ ಕೆರೆಗಳಲ್ಲಿ ಮೀನು ಸಾಕಾಣಿಕೆಗಾಗಿ ೯ ಲಕ್ಷ ಮೀನು ಮರಿಗಳನ್ನು ವಿತರಿಸಲಾಗುತ್ತಿದ್ದು, ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ಮೀನುಗಾರಿಕೆ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆದು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಯೋಜನೆಯಡಿ ಅಂದಾಜು ೨೪೫ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಸಲಹೆ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಯೋಜನೆಯಡಿ ನೀಡಲಾಗುವ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳದೆ ಆದಾಯೋತ್ಪನ್ನ ಚಟುವಟಿಕೆಗಳಿಗೆ ಮಾತ್ರ ಬಳಕೆ ಮಾಡಿಕೊಂಡು ಇತರ ಸಂಘಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಮೀನು ಸೇವನೆಯಿಂದ ಆರೋಗ್ಯಕ್ಕೆ ಆನೇಕ ಲಾಭಗಳಿದ್ದು, ಮೀನುಗಳಲ್ಲಿನ ಒಮೆಗಾ ಫ್ಯಾಟ್‌ – ೩ ಇಂದ ಮೆದುಳಿನ ಆರೋಗ್ಯ ಉತ್ತಮಗೊಳ್ಳುತ್ತದೆ. ನಿಯಮಿತವಾದ ಮೀನು ಸೇವನೆಯು ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗೆ ಹತ್ತು ಹಲವು ಪ್ರಯೋಜನಗಳಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮೀನು ಸೇವನೆಯ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ವ್ಯಾಪಕ ಮಾಹಿತಿ ನೀಡಲು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮೀನುಗಾರಿಕೆ ಒಂದು ಲಾಭದಾಯಕ ಚಟುವಟಿಕೆಯಾಗಿದ್ದು, ತರಬೇತಿಯಲ್ಲಿ ತಿಳಿಸಲಾಗುವ ಮಾಹಿತಿಗಳನ್ನು ಪಡೆದು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಮೀನುಗಾರಿಕೆಯಲ್ಲಿ ಯಶಸ್ಸು ಗಳಿಸುವಂತೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಶುಭ ಕೋರಿದರು.
ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ (ಅಭಿವೃದ್ದಿ)ಯವರಾದ ಲಕ್ಷ್ಮಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಬಾಬಾ ಸಾಬ್‌ ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ