ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಮತ್ತು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಪರಿಸರ ಅರಿವು ಮತ್ತು ಗ್ರಾಮಸ್ಥರಿಗೆ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಮರಗಳು ಮನುಷ್ಯರಿಗೆ ನೀಡಿರುವ ಪ್ರಕೃತಿಯೇ ಒಂದು ವರದಾನವಾಗಿದೆ. ಕಾಡು ಇದ್ದರೆ ವ್ಯವಸಾಯ ಸಾಧ್ಯವಾಗುತ್ತದೆ. ಮರಗಳಿದ್ದರೆ ಮಳೆ ಬೆಳೆಯಾಗಿ ಮನುಷ್ಯನ ಜೀವನ ಸಾಧ್ಯವಾಗುತ್ತದೆ ಎಂಬುದನ್ನು ಮನಗಂಡು ಕಾಡು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಾಳಿ,ನೀರು, ಆಹಾರವು ಸಮೃದ್ಧಿಯಾಗಿ ಸಿಗಬೇಕಾದರೆ ಮರಗಳು ಅತ್ಯವಶ್ಯಕವಾಗಿದೆ. ಹೇರಳವಾಗಿ ನೀರನ್ನು ನಿರಂತರವಾಗಿ ಸಂಗ್ರಹಿಸಿಟ್ಟುಕೊಳ್ಳುವ ಗುಣ ಇರುವುದು ಮರಗಳಿಗೆ ಮಾತ್ರ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಮರಗಳು ಭೂಲೋಕದ ಕಲ್ಪ ವೃಕ್ಷಗಳಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಮಾರಮ್ಮ ದೇವಾಲಯದ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡುವ ಮೂಲಕ ಪ್ರತಿ ಮನೆಗೂ ಎರಡು ತೆಂಗಿನ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಚಂದ್ರಶೇಖರಯ್ಯ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪಿ.ಎನ್.ಗೀತಾಮಣಿ, ರಮ್ಯಾ, ರೆಡ್‌ಕ್ರಾಸ್ ಸಂಸ್ಥೆಯ ರಾಮು ಸೇರಿದಂತೆ ಇತರರು ಭಾಗವಹಿಸಿದ್ದರು.




