Thursday, September 19, 2024

ಪ್ರಾಯೋಗಿಕ ಆವೃತ್ತಿ

”ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಉತ್ತಮ ಕಾರ್ಯಕ್ರಮ

”ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮ ಸರ್ಕಾರ ಜಾರಿಗೆ ತಂದಿರುವುದು ಉತ್ತಮ ಕೆಲಸವಾಗಿದ್ದು, ಮಳವಳ್ಳಿ ತಾಲ್ಲೂಕಿನಲ್ಲಿ ಈವರೆಗೂ ನಡೆದ 10 ಕಾರ್ಯಕ್ರಮಗಳಲ್ಲೂ ತಪ್ಪದೇ ಭಾಗವಹಿಸಿದ್ದೇನೆ. ಸವಲತ್ತುಗಳನ್ನು ಜನರ ಬಳಿಗೆ ಬಂದು ಅಧಿಕಾರಿಗಳು ತಲುಪಿಸುತ್ತಾರೆ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಳವಳ್ಳಿ ತಾಲ್ಲೂಕಿನ ಬಂಡೂರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಗ್ರಾಮಸ್ಥರ ಬಳಿ ಬಂದು ಅವರ ಕಷ್ಟಗಳನ್ನು ಕೇಳುತ್ತಿದ್ದಾರೆ. ಮೊದಲು ಒಬ್ಬ ವಿಕಲಚೇತನ ಮಾಶಾಸನ ಮಂಜೂರಾತಿಗಾಗಿ ಹಲವು ಬಾರಿ ಸರ್ಕಾರಿ ಕಚೇರಿಗೆ ಅಲೆದಾಡಬೇಕಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ ಎಂದರು.

ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ಫಲಾನುಭವಿಗೂ ತಲುಪಬೇಕು. ತಲುಪಿರುವುದು ಆಧಿಕಾರಿಗಳಿಗೆ ಖಾತ್ರಿಯಾಬೇಕು ಎಂಬುದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.

ರೈತರು ಹಾಗೂ ಬಡ ಜನರ ಕೆಲಸವನ್ನು ಕಂದಾಯ ಇಲಾಖೆ ನಿರ್ವಹಿಸುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅವರಿಗೆ ಸರ್ಕಾರದ ಆದೇಶಗಳು, ಸುತ್ತೋಲೆ ಹಾಗೂ ಯೋಜನೆಗಳ ಕುರಿತು ರೈತರಿಗೆ ನಿಖರ ಮಾಹಿತಿ ನೀಡಿ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಜನರ ಸಮಸ್ಯೆಗಳನ್ನು ಕಡಿಮೆ ಮಾಡಬೇಕು. ಈ ಹಿನ್ನಲೆಯಲ್ಲಿ 15 ದಿನಗಳಿಂದ ಬಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಸ್ಥಳದಲ್ಲೇ 200 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಲವು ಅರ್ಜಿಗಳನ್ನು ಸ್ಥಳದಲೇ ಹಾಗೂ ಜಿಲ್ಲಾ ಹಂತದಲ್ಲಿ ಪರಿಹರಿಸಬಹುದು. ಕೆಲವು ಸರ್ಕಾರದ ಹಂತದಲ್ಲಿ ಆಗಬೇಕಿದ್ದು ಅವುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ: ಎಚ್.ಎಲ್.ನಾಗರಾಜು ಮಾತನಾಡಿ, ಸರ್ಕಾರ ಆಯುಷ್ಮಾನ್ ಆರೋಗ್ಯ  ಯೋಜನೆಯಡಿ ಎಪಿಎಲ್ ಪಡಿತರ ಚೀಟಿದಾರರಿಗೆ 1.5 ಲಕ್ಷ ರೂ., ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಲಕ್ಷ ರೂ.ವರೆಗೂ ಚಿಕಿತ್ಸೆ ನೀಡಲಾಗುವುದು. ಎಲ್ಲರೂ ಈ ಯೋಜನೆಯಡಿ ನೊಂದಾಯಿಸಿಕೊಳ್ಳಿ. ಪೌತಿ ಖಾತೆಗೆ ಸಂಬಂಧಿಸಿದಂತೆ 2005  ಕ್ಕೂ ಹಿಂದೆ ಮೃತಪಟ್ಟಿದ್ದಲ್ಲಿ ಮರಣ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ ನಿಗದಿತ ನಮೂನೆಯಲ್ಲಿ ಪಂಚನಾಮೆ ಮಾಡಿಕೊಂಡರೆ ಸಾಕು ಎಂದರು.

ಕಂದಾಯ ಇಲಾಖೆ ವತಿಯಿಂದ ಮಾಶಾಸನ ಮಂಜೂರಾತಿ ಪತ್ರ ಹಾಗೂ ಇನ್ನಿತರ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕೀರ್ತನಾ, ತಹಶೀಲ್ದಾರ್ ವಿಜಿಯಣ್ಣ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!