Wednesday, May 15, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ| ಚಾಮರಾಜನಗರ- ಮಂಡ್ಯ ಜಿಲ್ಲಾಧಿಕಾರಿಗಳ ಸಭೆ: ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ

ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಜಿಲ್ಲೆಗಳ ಗಡಿಭಾಗಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣಾ ಕಾರ್ಯವನ್ನು ಕೈಗೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯ ಮಯೂರ ಸಭಾಂಗಣದಲ್ಲಿಂದು ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ನಡೆದ ಅಂತರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಉಭಯ ಜಿಲ್ಲಾಧಿಕಾರಿಗಳು ಮಾತನಾಡಿದರು.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಟ್ಟುನಿಟ್ಟಾಗಿ ಮಾದರಿ ನೀತಿಸಂಹಿತೆ ಪಾಲನೆ ಮಾಡಬೇಕಿದೆ. ಚಾಮರಾಜನಗರ, ಮಂಡ್ಯ ಜಿಲ್ಲೆಗಳನ್ನು ಸಂಪರ್ಕಿಸುವ ಗಡಿಭಾಗಗಳ ಚೆಕ್‌ ಪೋಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪರಸ್ಪರ ಸಮನ್ವಯ ಸಹಕಾರದಿಂದ ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಿಳಿಸಿದರು.

ಚೆಕ್‌ ಪೋಸ್ಟ್ ಗಳು 24 X 7 ಕಾರ್ಯನಿರ್ವಹಣೆ

ಜಿಲ್ಲೆಗಳ ಗಡಿ ಭಾಗದಲ್ಲಿ ಬರುವ ಚೆಕ್‌ ಪೋಸ್ಟ್ ಗಳು 24 X 7 ಅವಧಿಯಲ್ಲೂ ಕಾರ್ಯನಿರ್ವಹಿಸಬೇಕು. ವ್ಯಾಪಕವಾಗಿ ವಾಹನಗಳ ತಪಾಸಣೆ ಮಾಡಬೇಕು. ಗೂಡ್ಸ್ ವಾಹನಗಳಲ್ಲಿ ಸಾಗಿಸಲಾಗುವ ಸಾಮಗ್ರಿಗಳನ್ನು ಪರಿಶೀಲಿಸಬೇಕು. ಸೂಕ್ತ ದಾಖಲೆಗಳು ಇವೆಯೇ ಎಂದು ಪರಿಶೀಲಿಸಬೇಕು. ವಾಣಿಜ್ಯ ತೆರಿಗೆ ಅಧಿಕಾರಿಗಳ ತಂಡ ಸಹ ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಾಹೀರಾತು

ಚೆಕ್‌ ಪೋಸ್ಟ್ ಗಳಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುವ ಹಣ, ಅಕ್ರಮ ಮದ್ಯ, ಆಮಿಷ ಉಡುಗೊರೆ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಕ್ರಮ ಜರುಗಿಸಬೇಕು. ಎರಡು ಜಿಲ್ಲೆಗಳ ಅಧಿಕಾರಿಗಳು ಸೂಕ್ತ ಮಾಹಿತಿ ವಿನಿಮಯ ಮಾಡಿಕೊಂಡು ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಉಭಯ ಜಿಲ್ಲೆಗಳ ಗಡಿ ಭಾಗಗಳಲ್ಲಿ ವಿಶೇಷ ಕಣ್ಗಾವಲು ಇರಬೇಕು. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ಪೂರಕವಾಗುವಂತೆ ಹಾಗೂ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತ್ತು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದರು.

ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪವಿಭಾಗಾಧಿಕಾರಿ ಎಂ. ಶಿವಮೂರ್ತಿ, ಮಂಡ್ಯ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಉಭಯ ಜಿಲ್ಲೆಗಳ ಅಬಕಾರಿ, ಕಂದಾಯ, ಪೊಲೀಸ್, ಸಹಾಯಕ ಚುನಾವಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!