Thursday, September 19, 2024

ಪ್ರಾಯೋಗಿಕ ಆವೃತ್ತಿ

ಟನ್ ಕಬ್ಬಿಗೆ ₹ 100 ಹೆಚ್ಚಳ ಮಾಡಿದ್ದೇನೆ : ಬಸವರಾಜ ಬೊಮ್ಮಾಯಿ

ಕಬ್ಬಿಗೆ ಬೆಲೆ ಹೆಚ್ಚಳ ಮಾಡಬೇಕೆಂದು ರೈತರು ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ನಾನು ಟನ್ ಕಬ್ಬಿಗೆ 100 ರೂ.ಹೆಚ್ಚಳ ಮಾಡಿ, ಆದೇಶವನ್ನು ಮಾಡಿಯೇ ಈ ಸಮಾವೇಶಕ್ಕೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಬಿಜೆಪಿ ಪಕ್ಷದ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಹೋರಾಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದ್ದು, ಬಹುತೇಕ ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಘಟಕ ಇಲ್ಲದಿದ್ದರೂ ನೂರು ರೂ. ಹೆಚ್ಚಳ ಮಾಡಿದ್ದೇನೆ. ಮಾತು ಕೊಟ್ಟಂತೆ ನಡೆಯುವ ಸರ್ಕಾರ ನಮ್ಮದು ಎಂದರು.

ಅಭಿವೃದ್ಧಿ ಮಾಡಲು ವಿಫಲ

ಮಂಡ್ಯ ಜಿಲ್ಲೆಯ ಜನರ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ – ಜೆಡಿಎಸ್ ಈ ಭಾಗದ ಅಭಿವೃದ್ಧಿ ಮಾಡಲು ವಿಫಲವಾಗಿವೆ. ಈ ಹಿಂದೆ ಆಡಳಿತ ನಡೆಸಿದ ಪಕ್ಷಗಳು, ಮಂಡ್ಯ ಭಾಗದ ಮುಖ್ಯವಾಗಿ ನೀರಾವರಿ ಹಾಗೂ ಮೈಷುಗರ್ ಕಾರ್ಖಾನೆಗೆ ಅನುದಾನ ನೀಡದೆ ವಂಚನೆ ಮಾಡಿವೆ. ಆದರೆ ಬಿಜೆಪಿ ಸರ್ಕಾರ ಮುಚ್ಚಿದ್ದ ಮೈಷುಗರ್ ಕಾರ್ಖಾನೆಗೆ ಅನುದಾನ ನೀಡಿ ಆರಂಭಿಸಿ ರೈತರಿಗೆ ಅನುಕೂಲ ಮಾಡಿದೆ. ಕೆ ಆರ್ ಎಸ್ ಕ್ರೆಸ್ಟ್ ಗೇಟುಗಳನ್ನು ಹಾಕಿಸಿದೆ. ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದರೆ ಮಳವಳ್ಳಿ, ಮದ್ದೂರು ಕೊನೆ ಭಾಗಕ್ಕೆ ಕಾವೇರಿ ನೀರು ಹರಿಸಲಾಗುವುದು ಎಂದರು.

ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಆರಂಭಿಸಿ ಕಾರ್ಖಾನೆಯನ್ನ ಎಂದಿಗೂ ಮುಚ್ಚದಂತೆ ನೋಡಿಕೊಳ್ಳುತ್ತೇವೆ. ಸಾಮಾಜಿಕ ನ್ಯಾಯ, ನ್ಯಾಯ ಅಂತಾ ಹೇಳಿಕೊಂಡು ಅಧಿಕಾರಕ್ಕೆ ಬಂದದ್ದು ಕಾಂಗ್ರೆಸ್ ಸರ್ಕಾರ. ಸಾಮಾಜಿಕವಾಗಿ ಎಲ್ಲಾ ವರ್ಗಕ್ಕೂ ನ್ಯಾಯ ಕೊಡುವಂತ ಕೆಲಸ ನಾನು ಮಾಡುತ್ತಿದ್ದೇನೆ ಎಂದರು.

ಬಂಗಾರ ಮಾಡ್ತೇವೆ  

ಇದುವರೆಗೂ ನೀವು ಕಾಂಗ್ರೆಸ್ ,ಜೆಡಿಎಸ್ ಬ್ಲಾಕ್ ಅಂಡ್ ವೈಟ್ ಸಿನಿಮಾ ನೀವೆಲ್ಲರೂ ನೋಡಿದ್ದೀರಿ.
ಬಿಜೆಪಿ ಸುವರ್ಣ ಕರ್ನಾಟಕ ಮಾಡುವಂತಹ ಸಂಕಲ್ಪ ತೊಟ್ಟಿದೆ.ಕಾವೇರಿ ಮಕ್ಕಳ ಬದುಕು ಬಂಗಾರ ಮಾಡಲು ನಾವು ಬಂದಿದ್ದೇವೆ.

ನಿಮ್ಮ ಸೇವೆ ,ನಿಮ್ಮ ವಿಶ್ವಾಸಕ್ಕೆ ಎಲ್ಲಿಯೂ ಚ್ಯುತಿ ತರದಂತೆ ಈ ಭಾಗವನ್ನು ಅಭಿವೃದ್ಧಿ ಪಡಿಸಿ ,ನವ ಕರ್ನಾಟಕವನ್ನ ಕಟ್ಟೋಣ ಬನ್ನಿ .ಭತ್ತ, ಕಬ್ಬು ಬೆಳೆಯುವ ಈ ನಾಡನ್ನು ಸುವರ್ಣ ಕರ್ನಾಟಕ ಮಾಡೋಣ ಬನ್ನಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕೇಂದ್ರ ಗೃಹ ಸವಿವ ಅಮಿತ್ ಶಾ, ಪ್ರಲ್ಹಾದ್ ಜೋಶಿ, ಸಚಿವರಾದ ಕೆ.ಗೋಪಾಲಯ್ಯ, ಅಶ್ವಥ್ ನಾರಾಯಣ್,ನಾರಾಯಣಗೌಡ, ಸಿ.ಟಿ.ರವಿ, ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!