Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಮಾಚಲ ಪ್ರದೇಶಕ್ಕೆ ಡಿಕೆ ಶಿವಕುಮಾರ್ ಎಂಟ್ರಿ| ವಿಧಾನಸಭೆಯಿಂದ 15 ಬಿಜೆಪಿ ಶಾಸಕರ ಅಮಾನತು

ಹಿಮಾಚಲ ಪ್ರದೇಶ ಸುಖ್ವಿಂದರ್ ಸಿಂಗ್‌ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಅಲ್ಲಿ ಉಂಟಾಗಿರುವ ಭಿನ್ನಮತದ ವಿದ್ಯಮಾನವನ್ನು ಶಮನಗೊಳಿಸಲು ರಾಜ್ಯದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಭೂಪೇಂದರ್‌ ಸಿಂಗ್‌ ಹೂಡ ಅವರನ್ನು ಎಐಸಿಸಿ ಹಿಮಾಚಲ ಪ್ರದೇಶಕ್ಕೆ ಕಳುಹಿಸಿ ಕೊಟ್ಟಿದೆ.

ಈ ನಡುವೆ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ 15 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ವಿಕ್ರಮಾದಿತ್ಯ ಸಿಂಗ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರರಾಗಿದ್ದಾರೆ.

ವಿಧಾನಸಭೆಯಲ್ಲಿ ಗದ್ದಲ ಉಂಟು ಮಾಡಿದ್ದಕ್ಕೆ ಮಾಜಿ ಸಿಎಂ ವಿಪಕ್ಷ ನಾಯಕ ಜೈರಾಮ್ ಠಾಕೂರ್‌ ಸೇರಿದಂತೆ 15 ಶಾಸಕರನ್ನು ಅಮಾನತುಗೊಳಿಸಲಾಗಿದೆ. ವಿಧಾನಸಭೆಯ ಸ್ಪೀಕರ್ ಕುಲ್‌ದೀಪ್‌ ಸಿಂಗ್‌ ಪಟಾನಿಯಾ ಅವರು ಅಮಾನತುಗೊಳಿಸಿದ್ದಾರೆ.

ನಿನ್ನೆ(ಫೆ.27) ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಭಿಷೇಕ್ ಮನು ಸಿಂಘ್ವಿ ಅವರನ್ನು ಬಿಜೆಪಿ ಅಭ್ಯರ್ಥಿ ಸೋಲಿಸಿದ್ದರು. ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಗೆಲುವಿನಲ್ಲಿ ಕಾಂಗ್ರೆಸ್‌ನ 6 ಶಾಸಕರ ಅಡ್ಡ ಮತದಾನ ಪ್ರಮುಖ ಕಾರಣವಾಗಿತ್ತು. ಉಭಯ ಪಕ್ಷಗಳ ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದಾಗ ಚುನಾವಣಾ ಅಧಿಕಾರಿ ಚೀಟಿ ಎತ್ತುವುದರ ಮೂಲಕ ವಿಜೇತ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದರು.

ಅತೃಪ್ತ 6 ಶಾಸಕರನ್ನು ಸಮಾಧಾನಪಡಿಸಿ ಭಿನ್ನಮತವನ್ನು ಸರಿಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾದ ಭೂಪೇಂದರ್‌ ಸಿಂಗ್‌ ಹೂಡ ಹಾಗೂ ಡಿ ಕೆ ಶಿವಕುಮಾರ್‌ ಅವರನ್ನು ನೇಮಿಸಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾತನಾಡಿದ ವಿಕ್ರಮಾದಿತ್ಯ ಸಿಂಗ್, “ಪ್ರಸ್ತುತ ವಿದ್ಯಮಾನಗಳ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ. ಸರ್ಕಾರದ ಭಾಗವಾಗಿ ಮುಂದುವರಿಯಲು ನನಗೆ ಸರಿಯನಿಸುತ್ತಿಲ್ಲ. ಹಾಗಾಗಿ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ನನ್ನ ಜನರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!