“ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ. ಪ್ರಾರ್ಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ” ಎಂದರು.
“ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು” ಎಂದು ಹೇಳಿದರು.
ಕೃಪೆ: ಈದಿನ.ಕಾಂ