ಈ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರಿಗಿಂತ ಒಕ್ಕಲಿಗ ನಾಯಕರು ಯಾರಿದ್ದಾರೆ, ಅವರಿಗಿಂತ ದೊಡ್ಡ ನಾಯಕರು ನಿಮಗೆ ಬೇಕಾ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ, ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ಮಳವಳ್ಳಿಯಲ್ಲಿ ಶನಿವಾರ ಸಂಜೆ ನಡೆದ ‘ಪ್ರಜಾಧ್ವನಿಯಾತ್ರೆ’ಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದವರೆ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿಯ ಸಾರಥ್ಯ ವಹಿಸಿದ್ದಾರೆ. ಹಲವು ಭಾಗ್ಯಗಳು ನೀಡಿದ ಸಿದ್ದರಾಮಯ್ಯ ರಾಜ್ಯದ ಜನರ ಮನಸ್ಸಿನಲ್ಲಿ ನೆಲೆಗೊಂಡಿದ್ದಾರೆ. ಇಷ್ಟೆ ಅಲ್ಲದೆ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ನೇತೃತ್ವವಹಿಸಿದ್ದಾರೆ. ಈ ಮೂವರು ನಾಯಕರನ್ನು ಕಟ್ಟಿಹಾಕುವ ಸಾಮರ್ಥ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗಿದೆಯೇ’ ಎಂದು ಸವಾಲು ಹಾಕಿದರು.
ಎಲ್ಲಾ ಜಾತಿ, ಜನಾಂಗದ ಜನರಿಗೆ ಸಮಾನ ಅವಕಾಶಗಳನ್ನು ನೀಡಿ, ಅಭಿವೃದ್ದಿ ಮಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ, ಬೇರೆ ಯಾವುದೇ ಪಕ್ಷಗಳನ್ನು ನಂಬಬೇಡಿ, ಕಳೆದ ಬಾರಿ ಜೆಡಿಎಸ್ ಗೆಲ್ಲಿಸಿ ಏನಾಗಿದೆ ಎಂಬುದನ್ನೂ ನೋಡಿದ್ದೀರಿ, ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ನಿಮ್ಮನ್ನು ರಕ್ಷಣೆ ಮಾಡಿ, ಅಭಿವೃದ್ಧಿಪಡಿಸುವ ಉದ್ಧೇಶ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟರೆ ಬೇರಾವ ಪಕ್ಷಕ್ಕೂ ಇಲ್ಲ ಎಂದರು.
ಈ ಜಿಲ್ಲೆಯ ರಾಜಕಾರಣ ರಾಜ್ಯದ ರಾಜಕಾರಣಕ್ಕೆ ದಿಕ್ಸೂಚಿಯಾಗಿದೆ. ಅದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಧಿಕಾರಕ್ಕೆ ಬಂದು ನಿಮ್ಮ ಋಣ ತೀರುಸುವ ಕೆಲಸ ಮಾಡುತ್ತೇವೆ, ನಾನು ಮಂತ್ರಿ ಆಗಿದ್ದಾಗ ಮಂಡ್ಯ ಮೆಡಿಕಲ್ ಕಾಲೇಜು ಬಂತು, ನಂತರ ಏನಾದ್ರೂ ಆಗಿದ್ಯಾ ? ಮಂಡ್ಯದಲ್ಲಿ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ತೆರೆಯಬಹುದಿತ್ತು. ಆದರೆ ಕುಮಾರಸ್ವಾಮಿ ಮಾಡಲಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ರೆ ಮುಂದಿನ ಲೋಕಸಭಾ ಚುನಾವಣೆಗೆ ಅನುಕೂಲವಾಗುತ್ತದೆ. ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ಅವರನ್ನು ಬೆಂಬಲಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು.




