Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ₹ 40,000 ಕೋಟಿ ವೆಚ್ಚವಾದರೂ ಜಾರಿ ಮಾಡುವುದು ಶತಸಿದ್ಧ : ಡಿ.ಕೆ.ಶಿವಕುಮಾರ್

ಜನರನ್ನು ಆರ್ಥಿಕವಾಗಿ ಸದೃಢ ಮಾಡಲು ನಮ್ಮ ಪಕ್ಷದಿಂದ ನಾಲ್ಕು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಇದಕ್ಕಾಗಿ 40 ಸಾವಿರ ಕೋಟಿಯಾಗಲಿ ಅಥವಾ 50 ಸಾವಿರ ಕೋಟಿಯಾಗಲಿ ನಮಗೆ ಭ್ರಷ್ಟಾಚಾರ ತಡೆದು, ಹೇಗೆ ಹಣ ತಂದು ಅದನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು ಎಂದು ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಮಂಡ್ಯ ತಾಲ್ಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಬಂಡಿಸಿದ್ದೇಗೌಡ ಪರ ಪ್ರಚಾರ ನಡೆಸಿ, ಮತ ಯಾಚಿಸಿದ ಅವರು, ಕಳೆದ ಚುನಾವಣೆಯಲ್ಲಿ7 ಕ್ಷೇತ್ರಗಳಲ್ಲೂ ಜಾ.ದಳ ಶಾಸಕರನ್ನು ಗೆಲ್ಲಿಸಿದ್ದೀರಿ, ಮಂಡ್ಯದಲ್ಲಿ ಯಾವ ಬದಲಾವಣೆ ಆಗಿದೆ? ಎಂದು ನೀವು ಯೋಚಿಸಬೇಕು ಎಂದರು.

ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ
ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆ ಮೂಲಕ ಹಳ್ಳಿ ಜನರು ಯಾರೂ ಕೂಡ ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಇನ್ನು ಬೆಲೆ ಏರಿಕೆಯಿಂದ ಮಹಿಳೆಯರು ಮನೆ ವೆಚ್ಚ ಸರಿದೂಗಿಸಲು ಪರದಾಡುತ್ತಿದ್ದಾರೆ. ಇದಕ್ಕಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗೆ ಧೈರ್ಯ ತುಂಬಲು ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾ ಮಾಡಿರುವವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಕುರಿತ ಗ್ಯಾರಂಟಿ ಕಾರ್ಡ್ಗಳನ್ನು ಪ್ರತಿ ಮನೆಗೆ ನಮ್ಮ ಕಾರ್ಯಕರ್ತರು ತಲುಪಿಸಬೇಕು ಎಂದರು.

ಬಿಎಸ್‌ವೈ ಮನೆಗೆ ಬಿಜೆಪಿಯವರೇ ಕಲ್ಲು ಹೊಡೆಸಿದ್ದಾರೆ 

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಗಿಸಲು ಅವರ ಮನೆ ಮೇಲೆ ಬಿಜೆಪಿಯವರೇ ಕಲ್ಲು ಹೊಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ಬಿಜೆಪಿಯ ಆಂತರಿಕ ಕುಂತಂತ್ರ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯೇನಲ್ಲ, ಸರ್ಕಾರದ ಪ್ರತಿನಿಧಿಯೂ ಅಲ್ಲ, ಹೀಗಿರುವಾಗ ಅವರ ಮನೆ ಮೇಲೆ ಮೀಸಲಾತಿ ಸಂಬಂಧಿಸಿದಂತೆ ಕಲ್ಲು ತೂರಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಆಂತರಿಕವಾಗಿ ಸಮಾಧಾನವಿಲ್ಲ, ಎಲ್ಲರನ್ನೂ ಹೆದರಿಸಿ, ಬೆದರಿಸಿ, ಎಲ್ಲರ ಫೋನ್‌ಗಳನ್ನು ಕಿತ್ತುಕೊಂಡು ಭಯದ ವಾತಾವರಣದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದರು.

7 ಕ್ಷೇತ್ರಗಳಲ್ಲೂ ಗೆಲುವು
ಮುಂಬರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ನನಗೆ ನಂಬಿಕೆ ಇದೆ. ಈ ಹಿಂದೆ ಕಾಂಗ್ರೆಸ್ ಪಕ್ಷ 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ಕಾಲ ಈ ಬಾರಿ ಮರು ಕಳುಹಿಸಲಿದೆ ಎಂದು .

ಈ ಭಾಗದಲ್ಲಿ ಅನೇಕ ವರ್ತಕರಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆದ ನಂತರ ಈ ಭಾಗದ ವರ್ತಕರಿಗೆ ನಷ್ಟವಾಗಿದೆ. ಇದಕ್ಕಾಗಿ ಈ 7 ಶಾಸಕರು ನಮ್ಮ ಜನರಿಗೆ ಅನ್ಯಾಯ ಆಗಿದೆ ಎಂದು ಧ್ವನಿ ಎತ್ತಿದ್ದಾರಾ? ಇಲ್ಲ. ಇಂದು ಅವರ ವ್ಯಾಪಾರ ವಹಿವಾಟು ನಾಶವಾಗಿದೆ. ಜಿಲ್ಲೆಯ ಯಾವ ಶಾಸಕರು ರೈತರ ಪರವಾಗಿ ಧ್ವನಿ ಎತ್ತಲಿಲ್ಲ. ಇಂದು ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಖರ್ಚು ಮಾತ್ರ ಗಗನಕ್ಕೇರಿದೆ ಎಂದು ದೂರಿದರು.

ಅವಕಾಶ ನೀಡಿ
ನಾವು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾ.ದಳಕ್ಕೆ ಬೆಂಬಲ ನೀಡಿ ಅಧಿಕಾರ ಕೊಟ್ಟೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಾನು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದೆ. ನೀವು ಅವಕಾಶ ಕೊಟ್ಟಿ ಆಗಿದೆ. ನನಗೂ ಒಂದು ಅವಕಾಶ ನೀಡಿ. ಇಲ್ಲಿ ಯಾರೇ ನಿಂತರು ನಾನು, ಸಿದ್ದರಾಮಯ್ಯ ಅವರು ಅಭ್ಯರ್ಥಿ ಎಂದು ಪಕ್ಷಕ್ಕೆ ಮತ ಹಾಕಿ. ಇಲ್ಲಿರುವ ನೀವುಗಳು ಜಾ.ದಳದ ಮತದಾರರನ್ನು ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಹೇಳಬೇಕು. ಯಾವುದೇ ಕಾರಣಕ್ಕೂ ಜಾ.ದಳ ಅಧಿಕಾರಕ್ಕೆ ಬರುವುದಿಲ್ಲ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆಪಿಸಿಸಿ ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ, ಮುಖಂಡರಾದ ಡಾ. ಎಚ್.ಕೃಷ್ಣ, ಗಣಿಗ ರವಿಕುಮಾರ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!