ಬಿಜೆಪಿ ನಾಯಕರಿಗೆ ತಾಕತ್ತಿದ್ದರೆ ರಾಜ್ಯದ ಬಗ್ಗೆ ಗೌರವವಿದ್ದರೆ ಸ್ವಾಭಿಮಾನ ಇದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಾಕೀತು ಮಾಡಿದ್ದಾರೆ.
ಮಳವಳ್ಳಿ ಪಟ್ಟಣದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಎಲ್ಲಾ ವರ್ಗದ ಜನರಿಗೂ ಅವಕಾಶ ನೀಡುವ ಸಲುವಾಗಿ 4ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸಿದ್ದೇವೆ, ಇದೊಂದು ಅಭಿವೃದ್ಧಿ ಪರವಾದ ಎಲ್ಲಾ ವರ್ಗದ ಜನರ ಏಳಿಗೆಗೆ ಪೂರಕವಾದ ಬಜೆಟ್ ಇದಾಗಿದೆ. ಇಂತಹ ಬಜೆಟ್ ನ್ನು ಸ್ವಾಗತಿಸುವ ಹೃದಯ ಶ್ರೀಮಂತಿಕೆ ಬಿಜೆಪಿ ಮುಖಂಡರಲ್ಲಿ ಇಲ್ಲ ಹೊಟ್ಟೆ ಉರಿಯಿಂದ ಇಲ್ಲಸಲ್ಲದ ಟೀಕೆ ಮಾಡುತ್ತಾರೆ ಇದಕ್ಕೆ ಔಷಧಿ ಕಳುಹಿಸೋಣ ಎಂದು ಮಾರ್ಮಿಕ ವಾಗಿ ಹೇಳಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಬಡವರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ, ಎದೆ ಸೀಳಿದರು ಮೂರು ಅಕ್ಷರ ಇಲ್ಲದ ಮುಸ್ಲಿಂರು ಪಂಚರ್ ಹಾಕಿಯೇ ಜೀವನ ಮಾಡಬೇಕು ಎಂದು ಬಿಜೆಪಿ ನಾಯಕರೇ ಹೇಳಿದ್ದರು. ಅಂತಹ ಜನರ ಅಭಿವೃದ್ಧಿ ಆಗಬೇಕಲ್ಲವೆ ಈ ನಿಟ್ಟಿನಲ್ಲಿ ಸರ್ಕಾರಿ ಕಾಮಗಾರಿಯಲ್ಲಿ ಹಿಂದುಳಿದವರಿಗೆ ಎಸ್ಸಿಎಸ್ಟಿ ಗಳಿಗೆ ಮೀಸಲಾತಿ ನೀಡಿದಂತೆ ಅಲ್ಪಸಂಖ್ಯಾತರಿಗೂ ನೀಡಿದ್ದೇವೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಸಮಾಜ ಹೊಡೆಯಲು ಬಿಜೆಪಿಯವರು ಹೊರಟಿದ್ದಾರೆ, ನಾವು ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರಲು ಹೊರಟಿದ್ದೇವೆ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ರಸ್ತೆಗಳ ಅಭಿವೃದ್ಧಿ, ನೀರಾವರಿ ಯೋಜನೆಗಳನ್ನು ಜಾರಿಗೆ ನೀಡಿದ್ದೇವೆ. ತಮ್ಮ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಆಗಲಿಲ್ಲ ಎಂಬ ಹೊಟ್ಟೆ ಉರಿಯಿಂದ ಇಂತಹ ಟೀಕೆ ಮಾಡುತ್ತಿದ್ದು ಇದಕ್ಕೆಲ್ಲ ರಾಜ್ಯದ ಜನ ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು,
ಶಾಸಕರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಪಿ ಎಂ ನರೇಂದ್ರಸ್ವಾಮಿ, ಮದ್ದೂರು ಶಾಸಕ ಉದಯ್ ಗೌಡ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.




