ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಮಹಿಳೆಯರು- ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ, ಅತ್ಯಾಚಾರದಂತಹ ಶೋಷಣೆಯನ್ನು ತಡೆಗಟ್ಟಲು ಎಲ್ಲ ಜನಪರ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಿದರೆ ನ್ಯಾಯ ಪಡೆಯಬಹುದು ಎಂದು ರೈತ ಹೋರಾಟಗಾರರಾದ ಸುನಂದ ಜಯರಾಂ ಹೇಳಿದರು.
ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಂಗಲ. ಟಿ. ತಿಮ್ಮೇಗೌಡ ಐ.ಎ.ಎಸ್ ಪ್ರತಿಷ್ಠಾನ ಮತ್ತು ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಹೆಚ್.ಆರ್. ಕನ್ನಿಕ ಅವರ ‘ಬದುಕ ಶುಭದೊಸಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ಕೂಡ ಸಮಾಜದಲ್ಲಿ ದೇವದಾಸಿ ಪದ್ದತಿ, ಬೆತ್ತಲೆ ಸೇವೆಯಂತಹ ಅನಿಷ್ಟಗಳು ಜಾರಿಯಲ್ಲಿವೆ, ಸತಿಸಹಗಮನವೂ ಕೂಡ ಇದ್ದರೂ ಇರಬಹುದು. ನನ್ನ ಹೋರಾಟ ಜೀವನದಲ್ಲಿ ಸಾಕಷ್ಟು ಜನರನ್ನು ಗಮನಿಸಿದ್ದೇನೆ, ಅವರಲ್ಲಿ ನಾನಾ ತರಹದ ಮುಖವಾಡಗಳನ್ನು ಹೊಂದಿರುವ ಸಭ್ಯರೆನಿಸಿಕೊಂಡವರು ಇದ್ದಾರೆ. ಅಂತಹವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಇಂದು ಎಲ್ಲರ ಕೈನಲ್ಲಿ ಸ್ಮಾರ್ಟ್ ಪೋನ್ ಗಳಿವೆ, ಆದರಿಂದ ಒಳಿತಿನಷ್ಟೇ ಕೆಡಕು ಕೂಡ ಇದೆ, ಈ ಬಗ್ಗೆ ಮಕ್ಕಳಿಗೆ ಅರಿವು ನೀಡಬೇಕು, ಭಾರತ ಸಂವಿಧಾನದಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರು ಕಾನೂನಿನ ಇತಿಮಿತಿಯಲ್ಲಿ ಜೀವನ ನಡೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷರಾದ ಡಾ.ಮೀರಾ ಶಿವಲಿಂಗಯ್ಯ ರವರು ವಹಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ಮಲ.ಎಸ್. ಹೆಚ್ ರವರು ಸಾಧಕರನ್ನು ಸನ್ಮಾನಿಸಿದರು. ‘ಬದುಕ ಶುಭದೊಸಗೆ’ ಕೃತಿಯನ್ನು ಪಿ.ಇ.ಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಎಂ. ಎಸ್.ಅನಿತಾ ಮಂಗಲ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಮುಖ್ಯಸ್ಥರಾದ ಕನ್ನಿಕಾ, ಉಪಾಧ್ಯಕ್ಷರಾದ ಎಲ್.ಕಮಲ ಸೇರಿದಂತೆ ಇತರರು ಹಾಜರಿದ್ದರು.




