ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ರಂಗಸ್ವಾಮಿ ಮತ್ತು ಚಿಕ್ಕತಾಯಮ್ಮ ಅವರ ಪುತ್ರ ಲಿಂಗರಾಜು ಅವರು ಮೈಸೂರಿನ ಮಾನಸಗಂಗೋತ್ರಿಯ ಜೈನ ಶಾಸ್ತ್ರ ಮತ್ತು ಪ್ರಾಕೃತಿಕ ಅಧ್ಯಯನ ವಿಭಾಗದ ಡಾ ಪಿ.ಪದ್ಮಾವತಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡ “ಬಾದಾಮಿ ಚಾಲುಕ್ಯರ ಕಾಲದಲ್ಲಿ ಜೈನ ಧರ್ಮ: ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಗೆ ಅಂಗೀಕರಿಸಿದೆ.
ರಂಗಸ್ವಾಮಿ 2008ರಲ್ಲಿ ರಂಗಭೂಮಿ ಪ್ರವೇಶಿಸಿ ನಟನೆ, ನಿರ್ದೇಶನ ಹಾಗೂ ಬೀದಿನಾಟಕಗಳಲ್ಲಿ ಅಭಿನಯಿ, ಇದರಿಂದ ಬಂದ ಅಲ್ಪ ಸ್ವಲ್ಪ ಹಣದಿಂದ ಎಂ.ಎ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ 3 ಚಿನ್ನದ ಪದಕಗಳನ್ನು ಪಡೆದು ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದರು.
ಇದಲ್ಲದೇ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದು ‘ತರ್ಲೆ ವಿಲೇಜ್’, ‘ಪರಸಂಗ ಥಿಯರಿ’ ಎಂಬ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆ ಹಂತದಲ್ಲಿರುವ ‘ಆಂಗಿಕಂ’ ಎಂಬ ಕನ್ನಡ ಚಲನಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕೆಎಂ ರಘು ನಿರ್ದೇಶನದ ”ಜಸ್ಟ್ ಪಾಸ್’
ಚಿತ್ರದಲ್ಲೂ ಕೂಡ ಒಂದು ಪಾತ್ರವನ್ನು ನಿರ್ವಹಿಸಿರುವ ಇವರು ಕಲಾವಿದರಾಗಿ ಹೊರಹೊಮ್ಮಿದ್ದಾರೆ.




