Thursday, September 19, 2024

ಪ್ರಾಯೋಗಿಕ ಆವೃತ್ತಿ

ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ : ಡಾ.ಎಂ.ಪುಟ್ಟೇಗೌಡ

ರಕ್ತಕ್ಕೆ ಪರ್ಯಾಯವಾದ ಯಾವುದೇ ವಸ್ತುವಿಲ್ಲ, ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯ ಕಂಡು ಹಿಡಿದಿಲ್ಲ, ರಕ್ತದಾನದಂತಹ ಪವಿತ್ರ ಕಾರ್ಯದಿಂದ ಮಾತ್ರ ಮನುಷ್ಯರ ಜೀವ ಉಳಿಸಲು ಸಾಧ್ಯ ಎಂದು ಓಂ ಶ್ರೀನಿಕೆತನ ಟ್ರಸ್ಟ್ ಅಧ್ಯಕ್ಷ ಡಾ.ಎಂ ಪುಟ್ಟೇಗೌಡ ಹೇಳಿದರು.

ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಓಂ ಶ್ರೀನಿಕೇತನ ಟ್ರಸ್ಟ್, ಮತ್ತು ಎಂ ಪುಟ್ಟೇಗೌಡ ಫೌಂಡೇಷನ್, ಪರಿವರ್ತನಾ ಶಾಲಾ ಸಮೂಹ, ಉದ್ಯೋಗದಾತ ಸಂಸ್ಥೆ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ಹಾಗೂ ಡಾ. ಬಾಲಗಂಗಾಧರನಾಥ ಸ್ವಾಮೀಜಿ ರವರ 78 ನೆಯ ಜಯಂತೋತ್ಸವದ ” ಅಂಗವಾಗಿ ನಡೆದ ಸ್ವಯಂ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯ ಸಂಭವಿಸುತ್ತಿರುವ ಅಪಘಾತದ ಗಾಯಾಳುಗಳಿಗೆ, ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ, ರಕ್ತಹೀನತೆ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ತುರ್ತಾಗಿ ರಕ್ತದ ಅಗತ್ಯವಿರುತ್ತದೆ. 18 ರಿಂದ 65 ವರ್ಷದ ನಡುವಿನ 45 ಕೆ .ಜಿ .ಗಿಂತ ಹೆಚ್ಚು ತೂಕ ಇರುವ ಎಲ್ಲಾ ಆರೋಗ್ಯವಂತರು ರಕ್ತದಾನದಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು ಮತ್ತು ಬೇರೆಯವರಿಗೂ ರಕ್ತದಾನ ಮಾಡಲು ಪ್ರೇರೇಪಣೆ ನೀಡಬೇಕು ಎಂದು ಮನವಿ ಮಾಡಿದರು .

ಡಿವೈಎಸ್ಪಿ ಸಂದೇಶ ಕುಮಾರ್ ಮಾತನಾಡಿ, ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ ಆಗಿದ್ದು, ಹೆಚ್ಚು ಹೆಚ್ಚು ಜನರು ಯುವಕರು ರಕ್ತದಾನದಂತಹ ಮಹತ್ ಕಾರ್ಯದಲ್ಲಿ ಪಾಲ್ಗೊಂಡು, ಇನ್ನೊಬ್ಬರ ಜೀವ ಉಳಿಸುವ ಕೆಲಸ ಎಲ್ಲರೂ ಒಗ್ಗಟ್ಟಿನಿಂದ ಮಾಡಬೇಕೆಂದು ಸಲಹೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಪಿ ಮಾರುತಿ, ಪುರಸಭೆ ಸದಸ್ಯ ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡ ರುಕ್ಮಾಂಗದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ಅಚೀವರ್ಸ್ ಅಕಾಡೆಮಿಯ ಅಧ್ಯಕ್ಷ ಡಾ. ರಾಘವೇಂದ್ರ, ಭಾವಸಾರ ವಿಷನ್ ಇಂಡಿಯಾ ಸಂಸ್ಥೆಯ ಸುರೇಶ್, ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಭಾನುಮತಿ , ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ 106 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!