ವರದಕ್ಷಿಣೆ ಕಿರುಕುಳ ನೀಡಿ, ಪತ್ನಿ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ ಶ್ರೀರಂಗಪಟ್ಟಣ ನ್ಯಾಯಾಲಯವು 17 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಿವಾಸಿ ಕೃಷ್ಣಾಚಾರಿ ಪುತ್ರ ಲೋಕೇಶಚಾರಿ ಎಂಬಾತನೇ 17 ವರ್ಷ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಲೋಕೇಶಚಾರಿ ಅಪರಾಧಿಯೆಂದು ಸಾಬೀತಾಗಿದ್ದು, U/Sec.306, 498(A) IPC ಮತ್ತು U/Sec 3, 4 ವರದಕ್ಷಿಣೆ ನಿಷೇಧ ಕಾಯಿದೆ, CrPC ಯ U/Sec 235(2) ಆರೋಪಿಯನ್ನು IPC ಯ U/Sec 306, 498(A) ಮತ್ತು U/Sec ಶಿಕ್ಷಾರ್ಹ ಅಪರಾಧಗಳಿಗಾಗಿ ಈ ಮೂಲಕ ದೋಷಿ ಎಂದು ನಿರ್ಣಯಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯಿದೆಯ 3 ಮತ್ತು 4ರಂತೆ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕೋರ್ಟ್ ಆದೇಶ ಹೊರಡಿಸಿದೆ.
ಲೋಕೇಶಚಾರಿ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ನಿವಾಸಿಯಾದ ಸೋದರಮಾವ ಸೋಮಚಾರಿ ಎಂಬುವರ ಪುತ್ರಿ ಎಸ್.ಸುಜಾತ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. ಲಾರಿ ಚಾಲಕನಾಗಿದ್ದ ಲೋಕೇಶಚಾರಿ ಪತ್ನಿ ಸುಜಾತಗೆ ತಮ್ಮ ಅಪ್ಪನ ಮನೆಯಿಂದ ವರದಕ್ಷಿಣೆ ತರುವಂತೆ ಪದೇಪದೇ ಪೀಡಿಸುತ್ತಿದ್ದ. ಅಲ್ಲದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಕಿರುಕುಳ ತಾಳಲಾರದೆ ಸುಜಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸುಜಾತ ಅವರ ತಂದೆ ಸೋಮಚಾರಿ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಗೆ 2015 ಫೆ.1ರಂದು ಅಳಿಯ ಲೋಕೇಶಚಾರಿ ವಿರುದ್ದ ದೂರು ನೀಡಿದ್ದರು. ಈ ಬಗ್ಗೆ ದಿನಾಂಕ 06-7-2015 ರಂದು ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಲೋಕೇಶಚಾರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಶ್ರೀರಂಗಪಟ್ಟಣ ನ್ಯಾಯಾಲಯ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಅಂತಿಮವಾಗಿ ಲೋಕೇಶಚಾರಿ ಅಪರಾಧಿ ಎಂದು ತೀರ್ಮಾನಿಸಿ, 17 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.




