Sunday, November 22, 2026

ಪ್ರಾಯೋಗಿಕ ಆವೃತ್ತಿ

ಮೇಕೆದಾಟು | ಬಿ.ಜೆ.ಪಿ – ಜೆ.ಡಿ ಎಸ್ ಪಕ್ಷಗಳಿಗೆ ನಾಚಿಕೆಯಾಗಬೇಕು – ಚಲುವರಾಯಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾದರೆ ಮೇಕೆದಾಟು ಯೋಜನೆ ಮಂಜೂರಾತಿ ಕೊಂಡಿಸುವುದಾಗಿ ಭರವಸೆ ನೀಡಿದರು, ಈಗ ನಾನು ಹಾಗೆ ಹೇಳಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮೇಕೆದಾಟು ಯೋಜನೆಗೆ ಅನುಮತಿ ತಂದಿದೆ. ಬಿ.ಜೆ.ಪಿ ಮತ್ತು ಜೆ.ಡಿ ಎಸ್ ಪಕ್ಷಗಳಿಗೆ ನಾಚಿಕೆಯಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ಎ ಎಲ್ ಕೆ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎಂ ಡಿ ಸಿ ಸಿ ಬ್ಯಾಂಕ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಚಿನ್ ಚಲುವರಾಯಸ್ವಾಮಿಯವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಚಿವರು ತಮ್ಮ ಇಲಾಖೆಯ ಕೆಲಸಗಳಲ್ಲಿ ಹೆಚ್ಚು ಭಾಗಿಯಾಗದಿದ್ದರೆ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ ಎಂದರು.

ಸಾರ್ವಜನಿಕರು ಶಾಸಕರು ಮತ್ತು ಮಂತ್ರಿಗಳು ತಮ್ಮೊಡನೆ ಕ್ಷೇತ್ರದಲ್ಲಿಯೇ ಇರಬೇಕು ಎಂದುಕೊಳ್ಳಬಾರದು. ಎಲ್ಲೆ ಇದ್ದರೂ ನಮ್ಮ ಜಿಲ್ಲೆಯ ತಾಲೂಕಿನ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಬೇಕು ಎಂದುಕೊಳ್ಳಬೇಕು. ಸಂಪನ್ಮೂಲ ಕಮ್ಮಿ ಇರುವ ದೇಶಗಳು ಸಹ ಅಭಿವೃದ್ಧಿಯಲ್ಲಿ ನಮಗಿಂತ ಮುಂದೆ ಇದೆ. ನಮ್ಮ ದೇಶದಲ್ಲಿ ಎಲ್ಲಾ ಸಂಪನ್ಮೂಲ ಇದ್ಧರೂ ಅಭಿವೃದ್ಧಿಯಲ್ಲಿ ಸ್ವಚ್ಛತೆಯಲ್ಲಿ ಶಿಸ್ತಿನಲ್ಲಿ ಹಿಂದುಳಿದಿದೆ ಎಂದು ಅಭಿಪ್ರಾಯ ಪಟ್ಟರು.

ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳಲ್ಲಿ ಪ್ರಾಮುಖ್ಯತೆ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ವಿಶೇಷವಾಗಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿ ಘೋಷಿಸಲಾಯಿತು. ಮಹಿಳೆಯರು ಕುಟುಂಬದ ಕಣ್ಣು. ಅವರಿಗೆ ಶಕ್ತಿಯನ್ನು ತುಂಬಿದರೆ ಕುಟುಂಬ ಚನ್ನಾಗಿ ಇರುತ್ತದೆ ಒಳ್ಳೆಯ ರೀತಿ ಬದುಕಲು ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳಲ್ಲಿ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ಸಾರ್ವಜನಿಕರು ಅರ್ಹ ಬಡವರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿರುವುದನ್ನು ಗಮನಿಸಬೇಕು. ಬಡ ವರ್ಗಗಳಿಗೆ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ತಲುಪಬೇಕು ಎಂಬ ಯೋಚನೆ ಶ್ರೀಮಂತರಲ್ಲಿ ಬಂದರೆ ಈ ರಾಷ್ಟ್ರ ಶೇ 10ರಷ್ಟು ಉತ್ತಮಗೊಳ್ಳುತ್ತದೆ. ತಮಿಳುನಾಡಿನಲ್ಲಿ ಶೇಕಡ 40ರಷ್ಟು ಜನ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ಎಲ್ಲಾ ಅರ್ಹ ಫಲಾನುಭವಿಗಳನ್ನು ತಲುಪುತ್ತದೆ ಇನ್ನೂ ಎರಡುವರೆ ವರ್ಷಗಳ ಕಾಲ ಸರ್ಕಾರ ಮುಂದುವರೆಯುವುದರಿಂದ ಯೋಜನೆಗಳು ಸಹ ಮುಂದುವರೆಯುತ್ತವೆ ಯಾವುದೇ ಗೊಂದಲ ಬೇಡ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದು ಭರವಸೆ ನೀಡಿದರು.

20 ವರ್ಷಗಳ ಹಿಂದೆ ಜಿಲ್ಲೆಗೆ ಫೈಯರ್ ಸ್ಟೇಷನನ್ನು ನಾನು ಹಠ ಮಾಡಿ ತಂದಿದ್ದೇನೆ. ಫೈಯರ್ ಇಂಜಿನ್ ವಾಹನ ದುರಸ್ತಿಗೊಂಡಿದ್ದು ನನ್ನ ಗಮನಕ್ಕೆ ಬಂದ ತಕ್ಷಣ ಒಂದು ಕೋಟಿ ಮೌಲ್ಯದ ಎರಡು ವಾಹನಗಳನ್ನು ಖರೀದಿಸಲು ಸೂಚಿಸಿದ್ದೇನೆ. ನಾನು ಕೃಷಿ ಸಚಿವನಾದ ನಂತರ ಬೇಧ ಭಾವ ಮಾಡದೆ ಎಲ್ಲಾ ಸಮುದಾಯದವರಿಗೂ ಕೃಷಿ ಪೈಪ್ಗಳನ್ನು ಶೇ 90 ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.

ಶಾಸಕರನ್ನು ಆಯ್ಕೆ ನಿಮ್ಮ ಕೈಯಲ್ಲಿ

ಕೆಲಸ ಮಾಡದ ಶಾಸಕರನ್ನು ಬಯ್ಯುವ ಬದಲು ಅಂತ ಶಾಸಕರನ್ನು ಆಯ್ಕೆ ಮಾಡಬೇಡಿ. ಶಾಸಕರನ್ನು ಆಯ್ಕೆ ಮಾಡುವ ಅಧಿಕಾರ ನಿಮ್ಮ ಬಳಿ ಇದೆ. ಸೂಕ್ತ ಶಾಸಕರನ್ನು ಆಯ್ಕೆ ಮಾಡುವಲ್ಲಿ ವಿಫಲರಾದರೆ ಐದು ವರ್ಷಗಳ ಕಾಲ ನೀವೇ ಕೈ ಕಟ್ಟಿ ಕೂರಬೇಕು. ಹಾಗಾಗಿ ಸರ್ಕಾರವನ್ನು ಆಯ್ಕೆ ಮಾಡಬೇಕಾದರೆ ಸರಿಯಾಗಿ ಯೋಚಿಸಿ ಆಯ್ಕೆ ಮಾಡಿ ಆಯ್ಕೆ ಮಾಡಿದ ನಂತರ ಸರ್ಕಾರವನ್ನು ಜನನಾಯಕರನ್ನು ದೂಷಿಸಬೇಡಿ ಎಂದು ಹೇಳಿದರು.

ಹಾಲಿಗೆ ರೂ 2 ಸಹಾಯ ಧನ ಇತ್ತು ಇಂದು ಹಾಲಿಗೆ ರೂ5 ಸಾಹಯಧನ ನೀಡಲಾಗುತ್ತಿದೆ. ಹಾಲಿನ ಒಕ್ಕೂಟಕ್ಕೆ ನಷ್ಟವಾದರೂ ಪರ್ವಾಗಿಲ್ಲ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಹಾಲು ಉತ್ಪಾದಕರ ಪರವಾಗಿ ನಿಂತರು ಎಂದು ಹೇಳಿದರು.

ನಮ್ಮ ರಾಜ್ಯದ ಆರ್ಥಿಕ ವ್ಯವಸ್ಥೆಯ ಪ್ರಕಾರ ಕೇಂದ್ರದಿಂದ ಕನಿಷ್ಠ ಒಂದು ವರೆ ಲಕ್ಷ ಕೋಟಿ ಅನುದಾನ ಬರಬೇಕು ಮಹಾರಾಷ್ಟ್ರ, ಗುಜರಾತ್ ಹಾಗೂ ಒಂದೇ ಸಿಟು ಗೆಲ್ಲದ ತಮಿಳುನಾಡಿಗೆ ಕೇಂದ್ರ ಅನುದಾನ ನೀಡುತ್ತಿದೆ ಆದರೆ ಕರ್ನಾಟಕಕ್ಕೆ ಸರಿಯಾಗಿ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ . ರಾಜ್ಯದಿಂದ ಆಯ್ಕೆಯಾದ 19 ಬಿಜೆಪಿ ಸಂಸದರು ಒಂದು ರೂಪಾಯಿಯನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಿಡಿ ಕಾರಿದರು.

ಡಿ.ಸಿ ತಹಶೀಲ್ದಾರ್ ಬಳಿಯಿದ್ದ 20ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಶಕ್ತಿ ಮೀರಿ ಜಿಲ್ಲೆಯ ಜನತೆಯ ಅಭಿವೃದ್ಧಿ ಶ್ರಮವಹಿಸುತ್ತಿದ್ದೇವೆ. ಬೆಳ್ಳೂರು ಪಟ್ಟಣ ಪಂಚಾಯಿತಿ ಜನತೆ ನನ್ನನ್ನು ಅಲ್ಲಿಂದ ಇಲ್ಲಿಯವರೆಗೂ ಕೈ ಹಿಡಿದುಕೊಂಡು ಬಂದಿದೆ ಕುಡಿಯುವ ನೀರಿಗೆ ಸಂಬಂಧ ಪಟ್ಟಂತೆ 35 ಕೋಟಿ ಯೋಜನೆಯನ್ನು ಬೆಳ್ಳೂರು ಪಟ್ಟ ಗ್ರಾಮ ಪಂಚಾಯಿತಿಗೆ ತರಲಾಗಿದೆ ಕಾಮಗಾರಿ ಪ್ರಗತಿಯಲ್ಲಿದೆ. ಸ್ಥಳೀಯ ನಾಯಕರು ನಗರ ಪಂಚಾಯಿತಿ ಕಟ್ಟಡ, ಬಸ್ ನಿಲ್ದಾಣ, ನಾಡಕಚೇರಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಇನ್ನು ಎರಡು ವರ್ಷದಲ್ಲಿ ಎಲ್ಲವನ್ನು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.

ನಾನು ಮೊದಲ ಬಾರಿ ಶಾಸಕನಾದ ಸಂದರ್ಭದಲ್ಲಿ ರೂ 600 ಕೋಟಿ ವೆಚ್ಚದಲ್ಲಿ ಹೇಮಾವತಿ ನಲಾ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದು ಇವತ್ತು ನಾಗಮಂಗಲ ದೇವಲಾಪುರ ಕಸಬಾ ಭಾಗದವರೆಗೂ ನೀರು ಬರುತ್ತಿದೆ. ಮಂತ್ರಿಯಾಗಿ ಎರಡುವರೆ ವರ್ಷದ ನಂತರ ಎಲ್ಲಾ ಇಲಾಖೆಯಿಂದಲೂ ಈ ಭಾಗದ ಜನರಿಗೆ ರೂ 2000 ಕೋಟಿಯಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿದರು.

ನಾಗಮಂಗಲ ತಾಲ್ಲೂಕಿನ ಎ.ಎಲ್.ಕೆ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನೂತನ ಅಧ್ಯಕ್ಷರಾದ ಸಚಿನ್ ಚಲುವರಾಯಸ್ವಾಮಿ ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳಿಗೆ ಅಭಿನಂದನಾ ಹಾಗೂ ಜನಸ್ಪಂದನ ಕಾರ್ಯಕ್ರಮ ಜರುಗಿತು…

ಈ ಸಂದರ್ಭದಲ್ಲಿ ಬೆಳ್ಳೂರು ಹೋಬಳಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗರಿಗಳ ಶಂಕುಸ್ತಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..

ಸಾರ್ವಜನಿಕರ ತುರ್ತು ಸೇವೆಗಳ ಅನುಕೂಲಕ್ಕಾಗಿ ಒಂದು ಕೋಟಿ ವೆಚ್ಚದಲ್ಲಿ ಎರಡು ಅಗ್ನಿಶಾಮಕ ವಾಹನಗಳನ್ನು ಇದೆ ವೇಳೆ ಸಚಿವರು ಲೋಕಾರ್ಪಣೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಮನ್ ಮುಲ್ ಅಧ್ಯಕ್ಷರಾದ ಯು.ಸಿ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷರಾದ ಸಿ.ಡಿ.ಗಂಗಾಧರ್, ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಮಾಜಿ ಶಾಸಕರುಗಳಾದ ಕೆ.ಬಿ.ಚಂದ್ರಶೇಖರ್, ಹೆಚ್.ಬಿ.ರಾಮು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ತೈಲೂರು ಚಲುವರಾಜು, ನಿರ್ದೇಶಕರಾದ ದಿನೇಶ್, ಅಶೋಕ್, ಅಂಬರೀಶ್, ಗಿರೀಶ್, ಸಂದರ್ಶ್, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಲ್.ದೇವರಾಜು, ಲಕ್ಷೀಕಾಂತ್, ಸುನಿಲ್ ಲಕ್ಷ್ಮಿಕಾಂತ್, ಪಾಂಡವಪುರ ಉಪವಿಭಾಗಧಿಕಾರಿ ಶ್ರೀನಿವಾಸ್.ಕೆ.ಆರ್, ನಾಗಮಂಗಲ ತಾಲ್ಲೂಕು ತಹಸೀಲ್ದಾರ್ ಆದರ್ಶ್.ಜಿ ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ