Friday, September 20, 2024

ಪ್ರಾಯೋಗಿಕ ಆವೃತ್ತಿ

ಕೊಳವೆ ಬಾವಿ ಕೊರೆಯಲು ಸರ್ಕಾರ ಅನುಮತಿ ನೀಡಲಿ: ಡಾ.ಅನ್ನದಾನಿ ಆಗ್ರಹ

ಮಳವಳ್ಳಿ ತಾಲ್ಲೂಕಿಗೆ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿರುವ 103 ಕೊಳವೆ ಬಾವಿಗಳನ್ನು ಕೊರೆಯಲು ಕೂಡಲೇ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018 ರಿಂದ 2023ರವರೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ, ವಾಲ್ಮೀಕಿ, ಭೋವಿ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಮಳವಳ್ಳಿ ತಾಲೂಕಿನಲ್ಲಿ 103 ಕೊಳವೆಬಾವಿಗಳನ್ನು ಕೊರೆಯಲು ಆಯ್ಕೆ ಪ್ರಕ್ರಿಯೆ ಮುಗಿದಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಕೊಳವೆ ಬಾವಿಯನ್ನು ಕೊರೆದಿಲ್ಲ ಎಂದು ದೂರಿದರು.

ಗಂಗಾ ಕಲ್ಯಾಣ ಯೋಜನೆ ಮಳವಳ್ಳಿ ತಾಲೂಕಿನ ರೈತರ ಜೀವ, ಜೀವನ, ಬದುಕು ಎಲ್ಲವೂ ಆಗಿದೆ. ಹೀಗಿರುವಾಗ ಕಳೆದ ನಾಲ್ಕು ವರ್ಷಗಳಿಂದ ಕೊಳವೆಬಾವಿ ಕೊರೆಯಲು ಅನುಮತಿ ನೀಡದಿರುವುದು ಖಂಡನೀಯ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಾಗಿ ನಂತರ ಕೋರೊನಾ ರೋಗ ಬಂದಿತು. ಅದಾಗಿ ಇತ್ತೀಚೆಗೆ ಬೋರ್ವೆಲ್ ಕೊರೆಯಲು ಲಾರಿಗಳು ಬಂದಾಗ ಈಗಿನ ಜನಪ್ರತಿನಿಧಿ ಅದನ್ನು ವಾಪಸ್ ಕಳಿಸಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಯಾವುದೇ ನಿಗಮ, ಸಚಿವರು ದಯಮಾಡಿ ಗಮನ ಹರಿಸಿ ರೈತರಿಗೆ ಕೊಳವೆಬಾವಿ ಕೊರೆಸಿಕೊಡಬೇಕೆಂದು ಒತ್ತಾಯಿಸಿದರು.

ನೀರು ಹರಿಸಲಿ

ಮಳವಳ್ಳಿ ತಾಲೂಕಿನ ಅರ್ಧ ಭಾಗ ಬರಡು ಪ್ರದೇಶವಾಗಿದೆ. ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಆದರೆ ಮಳವಳ್ಳಿ ಭಾಗಕ್ಕೆ ನೀರು ಹರಿಸಲು ನೀರಾವರಿ ಇಲಾಖೆ ಏಕೆ ಗಮನ ಹರಿಸುತ್ತಿಲ್ಲ. ಆಗಸ್ಟ್ ವೇಳೆಗೆ ನಾಟಿ ಮುಗಿಯಬೇಕಿತ್ತು. ಕೆಆರ್‌ಎಸ್ 113 ಅಡಿ ತುಂಬಿದ್ದರೂ ನೀರು ಹರಿಸುತ್ತಿಲ್ಲ. ಇದರಿಂದ ಮಳವಳ್ಳಿ ಭಾಗದ ರೈತರಿಗೆ ಅನ್ಯಾಯವಾಗಿದೆ. ರೈತರು ದೀರ್ಘಾವಧಿ ಬೆಳೆ ಬೆಳೆಯಬಾರದೆಂದು ಅಧಿಕಾರಿಗಳು ಕರ ಪತ್ರ ಹೊರಡಿಸಿದ್ದಾರೆ. ನಮ್ಮ ರೈತರು ಭತ್ತ, ಕಬ್ಬು, ರಾಗಿ ಬೆಳೆಯಬಾರದೇ? ತಮಿಳುನಾಡಿಗೆ ನೀರು ಬಿಡುವುದು, ಮಳವಳ್ಳಿ ರೈತರಿಗೆ ನೀರು ಕೊಡದಿರುವುದು ಸರಿಯೇ?ಈ ಕೂಡಲೇ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಜಾಹೀರಾತು

ನಿರಂತರ ಹೋರಾಟ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರುವ ಅನುದಾನದಲ್ಲಿ 11,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಎಸ್ಸಿಪಿ /ಟಿಎಸ್ಪಿ ಯೋಜನೆಯ ಅನುದಾನವನ್ನು ಬೇರೆ ಕಡೆ ವರ್ಗಾವಣೆ ಮಾಡಬಾರದು ಎಂಬ ಆದೇಶವಿದ್ದರೂ, ಎಸ್ಸಿ,ಎಸ್ಟಿ ಸಮುದಾಯಕ್ಕೆ ಬಳಸಬೇಕಾಗಿರುವ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಜೆಡಿಎಸ್ ಪಕ್ಷ ನಿರಂತರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ತನಿಖೆ ನಡೆಸಲಿ

ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಸದನದಲ್ಲಿ ಮಾತನಾಡಿರುವ ಶಾಸಕ ನರೇಂದ್ರಸ್ವಾಮಿ ಅವರು, ಅವರದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ತನಿಖೆ ಮಾಡಿಸಲಿ. ಪೂರಿಗಾಲಿ ಏತ ನೀರಾವರಿ ಯೋಜನೆಯ ವಿದ್ಯುಚ್ಚಕ್ತಿ ಸೇರಿದಂತೆ ಎಲ್ಲಾ ಕಾಮಗಾರಿಗಳು ಮುಗಿದಿದ್ದು, ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಇನ್ನೂ ಏಕೆ ಈ ಯೋಜನೆಗೆ ಚಾಲನೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಮಳವಳ್ಳಿ ಪುರಸಭೆ ಸದಸ್ಯ ಸಿದ್ದರಾಜು, ತಾ.ಪಂ. ಮಾಜಿ ಅಧ್ಯಕ್ಷ ಭದ್ರಾಚಲಮೂರ್ತಿ ಮುಖಂಡರಾದ ಶಂಕರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!