Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಾ.ಬಿ ಶಿವಲಿಂಗಯ್ಯ ಅಭಿನಂದನೆ: ‘ಹೃದಯಿ ಶಿವ’ ಗೌರವ ಗ್ರಂಥ ಬಿಡುಗಡೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ, ಕ್ರೆಡಲ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಶಿವಲಿಂಗಯ್ಯ ಅವರ ಅಭಿನಂದನೆ ಮತ್ತು ‘ಹೃದಯಿ ಶಿವ’ ಗೌರವ ಗ್ರಂಥ ಬಿಡುಗಡೆ ಸಮಾರಂಭವನ್ನು  ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿ.19ರಂದು ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಗೌರವಗ್ರಂಥದ ಪ್ರಧಾನ ಸಂಪಾದಕ ಪ್ರೊ. ಎಂ.ಕೃಷ್ಣೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಶಿವಲಿಂಗಯ್ಯ ಅವರಿಗೀಗ 72 ವರ್ಷ. 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೌರವಗ್ರಂಥ ಹೊರತರುವ ಹಾಗೂ ಅವರನ್ನು ಅಭಿನಂದಿಸುವ ಪ್ರಯತ್ನ ನಡೆದಿತ್ತು. ಆದರೆ, ಕೋವಿಡ್ ಕಾರಣದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕಾರ‍್ಯಕ್ರಮ ನಡೆಸಲಾಗುತ್ತಿದೆ. 80ಕ್ಕೂ ಹೆಚ್ಚು ಲೇಖಕರು ನೀಡಿರುವ ಲೇಖನಗಳನ್ನು ಒಳಗೊಂಡಂತೆ 400 ಪುಟಗಳ ಗೌರವಗ್ರಂಥ `ಹೃದಯಿ ಶಿವ’ ಈಗಾಗಲೇ ಸಿದ್ಧವಾಗಿದೆ ಎಂದು ವಿವರಿಸಿದರು.

ಮಳೆ ನೀರು ನಿರ್ವಹಣೆ ಬಗ್ಗೆ 80ರ ದಶಕದಲ್ಲೇ ವಿದೇಶದಲ್ಲಿ ಪಿಎಚ್‌ಡಿ ಮಾಡಿರುವ ಡಾ. ಬಿ.ಶಿವಲಿಂಗಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಸಮಿತಿ ಸದಸ್ಯರಾಗಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕಾರಣವನ್ನೂ ಪ್ರವೇಶಿಸಿ ಒಮ್ಮೆ ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಮಂಡ್ಯದಲ್ಲಿ ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಅಂದಿನ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ‍್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಹಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ‘ಹೃದಯಿ ಶಿವ’ ಗೌರವಗ್ರಂಥವನ್ನು ಬಿಡುಗಡೆ ಮಾಡಿ, ಡಾ. ಬಿ.ಶಿವಲಿಂಗಯ್ಯ ಅವರನ್ನು ಅಭಿನಂದಿಸುವರು. ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡುವರು. ಗೌರವಗ್ರಂಥ ಕುರಿತು ಪ್ರಧಾನ ಸಂಪಾದಕ ಪ್ರೊ. ಎಂ.ಕೃಷ್ಣೇಗೌಡ ಮಾತನಾಡುವರು ಎಂದರು.

ಮುಖ್ಯ ಅತಿಥಿಗಳಾಗಿ ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ಮರಿತಿಬ್ಬೇಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಮಧು ಜಿ.ಮಾದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ಕೆ.ಎಂ.ಉದಯ, ದಿನೇಶ್ ಗೂಳಿಗೌಡ, ಮಾಜಿ ಸಚಿವರಾದ ಎಂ.ಎಸ್.ಆತ್ಮಾನಂದ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್‌ಬಿಇಟಿ ಕರ‍್ಯದರ್ಶಿ ಮೀರಾ ಶಿವಲಿಂಗಯ್ಯ ಭಾಗವಹಿಸುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಡಾ. ಬಿ.ಶಿವಲಿಂಗಯ್ಯ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ರಾಮಲಿಂಗಯ್ಯ, ಗೌರವಾಧ್ಯಕ್ಷ ಎಂ.ಎಸ್.ಮರಿಸ್ವಾಮಿಗೌಡ, ಉಪಾಧ್ಯಕ್ಷ ಪ್ರೊ. ಜಿ.ಟಿ.ವೀರಪ್ಪ, ಕರ‍್ಯದರ್ಶಿ ಕೆ.ಚೇತನ್‌ಕೃಷ್ಣ, ಸಹ ಕರ‍್ಯದರ್ಶಿ ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!