Thursday, July 25, 2024

ಪ್ರಾಯೋಗಿಕ ಆವೃತ್ತಿ

ಡಾ.ಬೆಸಗರಹಳ್ಳಿ ರಾಮಣ್ಣನವರಿಗೆ ಆಳವಾದ ರಾಜಕೀಯ ಪ್ರಜ್ಞೆ ಇತ್ತು: ಪ್ರೊ. ಕಾಳೇಗೌಡ ನಾಗವಾರ

ಗಾಂಧಿ, ಲೋಹಿಯಾ, ಅಂಬೇಡ್ಕರ್,ಬುದ್ಧ,ಬಸವಣ್ಣ ಅವರ ವಿಚಾರ- ಆದರ್ಶಗಳನ್ನು ಅನುಸರಿಸುತ್ತಿದ್ದ ಸಾಹಿತಿ ಡಾ. ಬೆಸಗರಹಳ್ಳಿ ರಾಮಣ್ಣ ಅವರಿಗೆ ಸಾಕಷ್ಟು ಆಳವಾದ ರಾಜಕೀಯ ಪ್ರಜ್ಞೆ ಇತ್ತು. ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಮಣ್ಣನವರು ಸಮ ಸಮಾಜದ ನಿರ್ಮಾಣಕ್ಕೆ ಸಾಹಿತ್ಯದ ಮೂಲಕ ಪ್ರಯತ್ನಿಸಿದರು ಎಂದು ಖ್ಯಾತ ಲೇಖಕ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಏರ್ಪಡಿಸಿದ್ದ 2023 ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಹಾಗೂ ‘ಒರೆಗಲ್ಲು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಯುವ ಸಾಹಿತಿ ಸ್ವಾಮಿ ಪೊಲ್ಲಾಚಿ ಅವರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ನಾನು ಬಿಎ ಓದುತ್ತಿದ್ದ ಸಂದರ್ಭದಲ್ಲಿ ನನಗೆ ಡಾ.ಬೆಸಗರಹಳ್ಳಿ ರಾಮಣ್ಣನವರ ಪರಿಚಯವಾಯಿತು.ಅವರು ಬದುಕಿದ್ದ 59 ವರ್ಷಗಳಲ್ಲಿ ಸುಮಾರು 30 ವರ್ಷಗಳ ಕಾಲ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಜೊತೆಗಿದ್ದೆ. ಅವರ ಜೊತೆಗಿದ್ದ ಸಂದರ್ಭದಲ್ಲಿ ಸಾಹಿತ್ಯದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರನ್ನು ಓದಿಕೊಂಡ ರಾಜಕಾರಣಿಗಳು ಎಂದಿಗೂ ತಪ್ಪು ಮಾಡಬಾರದು ಎಂಬುದು ಅವರ ನಿಲುವಾಗಿತ್ತು. ತಮಗೆ ಅನಿಸಿದ್ದನ್ನು ಅಂಜದೆ ಹೇಳುವ ಧೈರ್ಯ ಅವರಲ್ಲಿತ್ತು. ಹಳ್ಳಿಗಾಡಿನ ಜನರು ಮುಗ್ಧರು. ಅವರ ಬದುಕು,ಭಾವನೆಗಳನ್ನು ತಮ್ಮ ಬರವಣಿಗೆಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟರು ಎಂದರು.

ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಸಾಕಷ್ಟು ಟೀಕೆ ಮಾಡಿ ಬರೆಯುತ್ತಿದ್ದರು. ಆಗ ಅವರನ್ನು ಸರ್ಕಾರ ವರ್ಗಾವಣೆ ಮಾಡಿತು. ರಾಮಣ್ಣನವರಿಗೆ ನಗರ ಪ್ರದೇಶಗಳಿಗಿಂತ ಹಳ್ಳಿಗಾಡಿನಲ್ಲಿಯೇ ವೈದ್ಯಕೀಯ ಸೇವೆ ಸಲ್ಲಿಸುವುದು ಅವರ ಆಸೆಯಾಗಿತ್ತು. ಗ್ರಾಮೀಣ ಪ್ರದೇಶದ ಜನರ ಬಗ್ಗೆ, ಅವರ ಬದುಕಿನ ಬಗ್ಗೆ ಬಹಳ ಗೌರವ ಹೊಂದಿದ್ದ ರಾಮಣ್ಣನವರ ಪ್ರಶಸ್ತಿಗೆ ಗ್ರಾಮೀಣ ಭಾಗದ ಪೊಲ್ಲಾಚಿ ಸ್ವಾಮಿ ಆಯ್ಕೆ ಆಗಿರುವುದು ಅವರ ಉತ್ತರಾಧಿಕಾರಿಗೆ ಸಂದಿದೆ ಎಂದರು.

ಸಮ ಸಮಾಜದ ನಿರ್ಮಾಣ

ಡಾ. ರವಿ ಕಾಂತೇಗೌಡ ನಮ್ಮ ತಂದೆ ರಾಮಣ್ಣನವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ಸಮ ಸಮಾಜದ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಆಗ ಕಲೆ, ಸಾಹಿತ್ಯ, ಸಿನಿಮಾ, ನೃತ್ಯ ಮುಂತಾದ ಸೃಜನಶೀಲ ಕಲೆಗಳಿಗೆ ಮೌಲ್ಯ ಬರುತ್ತದೆ ಎಂದು ಭಾವಿಸಿದ್ದರು. ಈ ಹಿನ್ನಲೆಯಲ್ಲಿ 2007ರಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಅಧಿಕೃತವಾಗಿ ಆರಂಭವಾಯಿತು. ಇದುವರೆಗೆ 16 ವರ್ಷ ಪ್ರಶಸ್ತಿ ಪ್ರದಾನ ಮಾಡಿದ್ದು, ಇಂದು 17ನೇ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಇದರಲ್ಲಿ ಸುಮಾರು ಐದು ಮಂದಿ ಮಹಿಳೆಯರಿಗೂ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಅತ್ಯಂತ ತುಳಿತಕ್ಕೊಳಗಾದವರು ಮಹಿಳೆಯರು.ಅವರಿಲ್ಲದೆ ಸಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದು ಭಾವಿಸಿದ್ದ ಅವರು,ಮೊದಲು ನಾವು ಪ್ರಮುಖವಾಗಿ ಮಹಿಳೆಯರಿಗೆ ಗೌರವ ಕೊಟ್ಟಾಗ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಭಾವಿಸಿದ್ದರು. ಅದರಂತೆ ನಮ್ಮ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರ ಆಶಯಗಳಿಗೆ ತಕ್ಕಂತೆ ರಾಮಣ್ಣ ಅವರ ವಿಚಾರಗಳಿದ್ದವು.ಈ ಹಿನ್ನೆಲೆಯಲ್ಲಿ ಕುವೆಂಪು ಅವರ ಕುಪ್ಪಳಿಯಲ್ಲಿ ಮೂರು ದಿನಗಳ ವಿಚಾರ ಕಮ್ಮಟವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿದ್ದೇವೆ. ಕುವೆಂಪು ಅವರ ಬರಹಗಳನ್ನು ಯುವ ಜನತೆಗೆ ಮುಟ್ಟಿಸುವ ಕಾರ್ಯವನ್ನು ನಮ್ಮ ಪ್ರತಿಷ್ಠಾನ ಮಾಡುತ್ತಿದ್ದು, ಕುವೆಂಪು ವಿಚಾರಗಳ ಬಗ್ಗೆ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜನೆ, ಮಕ್ಕಳ ಬೇಸಿಗೆ ಶಿಬಿರ ಮುಂತಾದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ, ಅನಾರೋಗ್ಯ ಪೀಡಿತ ಸಾಹಿತಿಗಳಿಗೆ ಆರ್ಥಿಕ ನೆರವು, ಕವಿಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಗ್ರಾಮೀಣ ಸೊಗಡು ಇದೆ

ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ವಿಜೇತ ಸಾಹಿತಿ ಸ್ವಾಮಿ ಪೊಲ್ಲಾಚಿ ಮಾತನಾಡಿ, ಹಳ್ಳಿಗಾಡಿನಿಂದ ಬಂದ ನನ್ನನ್ನು ಗುರುತಿಸಿ ರಾಮಣ್ಣ ಪ್ರತಿಷ್ಟಾನ ಪ್ರಶಸ್ತಿ ನೀಡಿರುವುದು ತುಂಬಾ ಸಂತೋಷ ತಂದಿದೆ. ನನ್ನ ಕೃತಿಗಳಲ್ಲಿ ಕೂಡ ಬೆಸಗರಗಳ್ಳಿ ರಾಮಣ್ಣನವರ ಗ್ರಾಮೀಣ ಸೊಗಡು ಇದೆ ಎಂದರು.

ಖ್ಯಾತ ವಿಮರ್ಶಕಿ ಸುನಂದಮ್ಮ ಅವರು ಪ್ರಶಸ್ತಿ ವಿಜೇತ ಕೃತಿ ಪೊಲ್ಲಾಜಿ ಸ್ವಾಮಿಯವರ ದಾರಿ ತಪ್ಪಿಸುವ ಗಿಡ ಕೃತಿ ಬಗ್ಗೆ ಮಾತನಾಡಿದರು.ಸಾಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಬೆಸಗರಹಳ್ಳಿ ರಾಮಣ್ಣ ಅವರ ಒರೆಗಲ್ಲು ಕೃತಿಯ ಬಗ್ಗೆ ಮಾತನಾಡಿದರು. ಯುವ ಸಾಹಿತಿ ಸ್ವಾಮಿ ಪೊಲ್ಲಾಚಿಯವರಿಗೆ 25,000 ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಹಿತಿ ಶುಭಶ್ರೀ ಪ್ರಸಾದ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಸಾಹಿತಿ ಡಾ. ಎಚ್.ಆರ್.ಸುಜಾತ, ಡಿ.ಪಿ ರಾಜಮ್ಮ ರಾಮಣ್ಣ, ಬೆಸಗರಹಳ್ಳಿ ರವಿ, ರಾಕೇಶ್, ಯುವಕವಿ ರಾಜೇಂದ್ರ ಪ್ರಸಾದ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!