Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಪತ್ತಿಗಿಂತ ಬಹಳ ಶ್ರೇಷ್ಠ ಮಾನವೀಯತೆ :ಡಾ ಸಿ. ಎನ್. ಮಂಜುನಾಥ್

ಇಂದು ಸಮಾಜದಲ್ಲಿ ಸಂಪತ್ತಿಗಿಂತ ಬಹಳ ಶ್ರೇಷ್ಠವಾದದ್ದು ಮಾನವೀಯತೆ.ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಮಾನವೀಯತೆಗೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ಏರ್ಪಡಿಸಿದ್ದ ಎಂ. ಶ್ರೀನಿವಾಸ್ 72 ಸಮಾರಂಭದಲ್ಲಿ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಮತ್ತು ಎಂ. ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ನೋವು ನಮಗೆ ಗೊತ್ತಾದರೆ ನಾವು ಜೀವಂತವಾಗಿದ್ದೇವೆ ಎಂದರ್ಥ. ಆದರೆ ಬೇರೆಯವರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದರ್ಥ. ಆದ್ದರಿಂದ ನಾವು ಬೇರೆಯವರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಸಾಧನೆ ಮಾಡಿ ಕರಗಬೇಕು
ಮನುಷ್ಯನ ದೇಹ ಐಸ್ ಕ್ರೀಮ್ ಇದ್ದ ಹಾಗೆ. ತಿಂದರೂ ಕರಗುತ್ತೆ, ತಿನ್ನದಿದ್ದರೂ ಕರಗುತ್ತದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಹಾಗಾಗಿ ಪ್ರತಿಯೊಬ್ಬರಿಗೂ ಅವರ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡುವ ಅವಕಾಶ ಇದ್ದೇ ಇರುತ್ತದೆ.ಅದನ್ನು ಬಳಸಿಕೊಂಡು ಸಾಧನೆ ಮಾಡುವ ಮೂಲಕ ಕರಗಬೇಕು.ಇಂದು ನಾವೆಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ.ಎಲ್ಲಾ ಕ್ಷೇತ್ರದಲ್ಲೂ ಪೈಪೋಟಿ ಇದೆ. ಆದರೆ ಸ್ಪರ್ಧೆ ಇಲ್ಲದ ಒಂದು ಕ್ಷೇತ್ರವೆಂದರೆ ಅದು ಸಮಾಜ ಸೇವೆ, ಶಾಸಕ ಎಂ. ಶ್ರೀನಿವಾಸ್ ಅವರಲ್ಲಿರುವ ಸಮಾಜಮುಖಿ ಮನಸ್ಥಿತಿ ನೋಡಿದರೆ ಅವರಿಗೆ 72 ವರ್ಷ ವಯಸ್ಸಾದಂತೆ ಕಾಣುವುದಿಲ್ಲ. ಕ್ಷೇತ್ರದ ಜನರಿಗಾಗಿ ತಮ್ಮಲ್ಲಿರುವ ಆಯಸ್ಸನ್ನು ಹೆಚ್ಚಿಸಿಕೊಳ್ಳಲಿ ಎಂದರು.

ಹಣಕ್ಕಾಗಿ ವಾಪಸ್ ಕಳಿಸಿಲ್ಲ
ಕಳೆದ 15 ವರ್ಷಗಳಲ್ಲಿ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 55 ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ. ಆರು ಲಕ್ಷ ಶಸ್ತ್ರ ಚಿಕಿತ್ಸೆಗಳಾಗಿವೆ. ಇಲ್ಲಿ ಕೆಲಸ ಮಾಡುವ ಎಲ್ಲರೂ ರೋಗಿಯ ಆರ್ಥಿಕ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು, ಅವರ ಆರ್ಥಿಕ ಚೌಕಟ್ಟಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತೇವೆ. ಕಳೆದ 15 ವರ್ಷಗಳಲ್ಲಿ 55 ಲಕ್ಷ ರೋಗಿಗಳಲ್ಲಿ ಒಬ್ಬನೇ ಒಬ್ಬನನ್ನು ಹಣಕ್ಕಾಗಿ ವಾಪಸ್ ಕಳಿಸಿಲ್ಲ. ಒಬ್ಬ ರೋಗಿ ಬದುಕಿದ್ದರೆ ಇಡೀ ಕುಟುಂಬ ಬದುಕಿಸುತ್ತಿದ್ದೇವೆ ಅಂತ. ನಾವು ಯಾವಾಗಲೂ ಯಾವ ಪರಿಸರದಲ್ಲಿ ಕೆಲಸ ಮಾಡುತ್ತೇವೆ ಅವರನ್ನೇ ಕಾಣುತ್ತೇವೆ.ಶ್ರೀಮಂತರ ಮದುವೆಗೆ ಹೋದರೆ ಶ್ರೀಮಂತರೇ ಕಾಣುತ್ತಾರೆ, ಅದೇ ಬಡವರ ಮದುವೆಗೆ ಹೋಗಿ ಬಡವರೇ ಕಾಣುತ್ತಾರೆ. ನಮ್ಮಲ್ಲಿ ಎರಡು ರೀತಿಯ ಭಾರತ ಇದೆ. ವೈಮಾನಿಕ ಭಾರತ ಬಹಳ ಅದ್ಭುತವಾಗಿ ಕಾಣುತ್ತದೆ. ನಾವು ನಿಜವಾದ ಭಾರತ ನೋಡಬೇಕಾದರೆ ರೈಲಿನಲ್ಲಿ ಪ್ರಯಾಣ ಮಾಡಬೇಕು.ರೈಲಿನಲ್ಲಿ ಪ್ರಯಾಣ ಮಾಡುವಾಗ ಬಡಜನರು,ರಸ್ತೆಗಳ ಅವ್ಯವಸ್ಥೆ, ಶೌಚಾಲಯದ ಸಮಸ್ಯೆ ಎಲ್ಲವೂ ಕಾಣುತ್ತದೆ. ಗಾಂಧೀಜಿ ಕೂಡ ಇವೆಲ್ಲವನ್ನೂ ನೋಡಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದರು.

nudikarnataka.com

ನಾವೆಲ್ಲ ಭಿಕ್ಷುಕರೇ
ಬದುಕು ಎಂದರೆ, ಒಬ್ಬ ಬಡವನಿಗೆ 5ರೂ. ಮತ್ತು 100 ರೂ.ಗಳ ನಡುವಿನ ವ್ಯತ್ಯಾಸ ಕಾಣುತ್ತದೆ. ಆದರೆ ಶ್ರೀಮಂತನಿಗೆ 5ರೂ.ನಿಂದ 5 ಲಕ್ಷ ರೂವರೆಗೆ ಒಂದೇ. ಇತ್ತೀಚೆಗೆ ನಮ್ಮ ಆಸ್ಪತ್ರೆಗೆ ತುಮಕೂರು ಬಳಿಯ ರೋಗಿ ಒಬ್ಬರು ಬಂದಿದ್ದರು. ಅವರ ಬಿಲ್ 32,000 ರೂ. ಆಗಿತ್ತು‌. ಆದರೆ ಅವರ ಕುಟುಂಬಕ್ಕೆ ಆಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಹಣವಿರಲಿಲ್ಲ. ನಾವು ಬಡ ರೋಗಿಯ ನಿಧಿಯಿಂದ 8000 ಕೊಟ್ಟು 2000 ವನ್ನು ಮೃತನ ಪತ್ನಿಗೆ ನೀಡಿ ಕಳುಹಿಸಿದವು. ಸಂಪತ್ತಿ ಗಿಂತ ಬಹಳ ಶ್ರೇಷ್ಠ ಮಾನವೀಯತೆ. ನಾವೆಲ್ಲ ಭಿಕ್ಷುಕರೇ ಆಗಿದ್ದೇವೆ. ತುಂಬಾ ಶ್ರೀಮಂತರು ದೇವಸ್ಥಾನದ ಒಳಗೆ ಹೋಗಿ ಭಿಕ್ಷೆ ಬೇಡುತ್ತಾರೆ, ಬಡವರು ದೇವಸ್ಥಾನದ ಹೊರೆಗೆ ಭಿಕ್ಷೆ ಬೇಡುತ್ತಾರೆ ಎಂದರು.

ಉಳಿಸಿದ್ದು ಕೊಡಬೇಕು
ಇಂದು Income ಇದ್ದರೆ Welcome ಎನ್ನುವ ಜಗತ್ತು ನೋಡುತ್ತಿದ್ದೇವೆ. ದಾನ, ಧರ್ಮ, ಸಹಾಯ ಮಾಡುವುದು ಯಾವಾಗಲೂ ಮುಖ್ಯ. ನಾವು ಯಾರಿಗೂ ಹಳಸಿದ್ದನ್ನು ಕೊಡಬಾರದು. ಉಳಿಸಿದ್ದನ್ನು ಕೊಡಬೇಕು. ನಾವು ಎಷ್ಟು ಓದಿದ್ದೇವೆ ಅನ್ನೋದು ಮುಖ್ಯವಲ್ಲ, ಎಷ್ಟು ಪದವಿ, ಪ್ರಶಸ್ತಿ, ಪುರಸ್ಕಾರ, ಪಾರಿತೋಷಕ ಗಳಿಸಿದ್ದೇವೆ ಅನ್ನೋದು ಮುಖ್ಯವಲ್ಲ. ನಮ್ಮ ಓದು ಸಾಮಾನ್ಯ ಜನರ ಜೀವನದಲ್ಲಿ ಎಷ್ಟು ಬೆಳಕು ಮೂಡಿಸಿದೆ ಎಂಬುದು ಮುಖ್ಯ ಎಂದರು.

ಇಂದು ಯುವ ಪೀಳಿಗೆಗೆ ಯಾವ ರೀತಿ ಮಾತನಾಡಬೇಕು ಎಂಬುದು ತಿಳಿಯುತ್ತಿಲ್ಲ. ಸಾವಿನ ಮನೆಯ ಮುಂದೆ ನಗುತ್ತಾ, ಆಸ್ಪತ್ರೆಯಲ್ಲಿ ಹೋದಾಗ ಸಾಂತ್ವನ ಹೇಳುವ ಬದಲು ಬೈದು ಬರುತ್ತಾರೆ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವುದು ಬಹಳ ಮುಖ್ಯ. ತಂದೆಯೊಡನೆ ಭಕ್ತಿಯಿಂದ, ತಾಯಿಯ ಬಳಿ ವಿನಮ್ರತೆಯಿಂದ, ಗುರುವಿನ ಬಳಿ ಶ್ರದ್ದೆಯಿಂದ, ಹೆಂಡತಿಯ ಜೊತೆ ನಿಜ ಮಾತನಾಡಬೇಕಂತೆ. ಸಹೋದರರ ಜೊತೆ ಸೌಜನ್ಯದಿಂದ, ರಾಜಕಾರಣಿಗಳ ಜೊತೆ ಎಚ್ಚರಿಕೆಯಿಂದ, ಅಧಿಕಾರಿಗಳ ಮುಂದೆ ನಯವಾಗಿ, ವರ್ತಕರ ಬಳಿ ಗಟ್ಟಿಯಾಗಿ, ದೇವರ ಬಳಿ ಮೌನದಿಂದ, ಮಕ್ಕಳ ಬಳಿ ಪ್ರೋತ್ಸಾಹ, ಉತ್ಸಾಹದಿಂದ ಮಾತನಾಡಬೇಕು ಎಂದರು.

ಖ್ಯಾತ ನರರೋಗ ತಜ್ಞ ಡಾ. ನವೀನ್ ಅಪ್ಪಾಜಿಗೌಡ ಅವರಿಗೆ ಎಂ.ಶ್ರೀನಿವಾಸ್ ಪ್ರಶಸ್ತಿ,ಯುವ ರೈತ ವಿಕಾಸ್ ಬೂದನೂರು ಅವರಿಗೆ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಲೋಕೇಶ್ ಚಂದಗಾಲು, ಡಾ. ಕೆಂಪಮ್ಮ, ಎಸ್.ಶಿವರಾಮ್,ಬಾಸ್ಕೆಟ್ ಬಾಲ್ ಆಟಗಾರ ಅರವಿಂದ್, ಹಿನ್ನೆಲೆ ಗಾಯಕ ಕೀಲಾರ ಶಶಾಂಕ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎಂ. ಶ್ರೀನಿವಾಸ್, ಸಿ‌.ಎಸ್. ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ರಾಯಪುರ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ. ಟಿ.ಶ್ರೀಕಂಠೇ ಗೌಡ, ಬಿ.ರಾಮಕೃಷ್ಣ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್. ಎನ್ ಯೋಗೇಶ್ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!