ನಾಗರಪಂಚಮಿಯನ್ನು ಆಚರಿಸಿ ಕಲ್ಲನಾಗರಕ್ಕೆ ಹಾಲೆರೆಯುವುದರ ಬದಲು ಹಾಲು ಮತ್ತು ಹಣ್ಣನ್ನು ಬಡರೋಗಿಗಳಿಗೆ ಹಾಗೂ ಅನಾಥ ಮಕ್ಕಳಿಗೆ ವಿತರಿಸುವ ಮೂಲಕ ಬಸವಪಂಚಮಿಯನ್ನು ಆಚರಿಸಬೇಕೆಂದು ಕುಂಬಳಗೂಡಿನ ಶ್ರೀಚನ್ನಬಸವೇಶ್ವರ ಪೀಠಾಧ್ಯಕ್ಷ ಪೂಜ್ಯ ಡಾ.ಚನ್ನಬಸವಾನಂದಸ್ವಾಮೀಜಿ ಕರೆ ನೀಡಿದರು.
ಮಂಡ್ಯ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಪಟ್ಟದ ಹೊಸಮಠದಲ್ಲಿ ಶ್ರೀಕ್ಷೇತ್ರ ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದಿಂದ ಆಗಮಿಸಿದ ಬಸವಜ್ಯೋತಿ ಸ್ವಾಗತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಹಾವು ಹಾಲು ಕುಡಿಯುವುದಿಲ್ಲ. ಸರ್ಪವು ಕಪ್ಪೆ, ಹುಳುಹುಪ್ಪಟ್ಟಿಗಳನ್ನು ತಿಂದು ಬದುಕುತ್ತದೆ. ಹುತ್ತಕ್ಕೆ ಹಾಲೆರೆದರೆ ಹುತ್ತದಲ್ಲಿರುವ ಹಾವುಗಳು ಉಸಿರುಗಟ್ಟಿ ಸಾಯುತ್ತವೆ. ಆದ್ದರಿಂದ ಇಂತಹ ಅವೈಜ್ಞಾನಿಕ ಮೌಢ್ಯತೆಗಳನ್ನು ಬಿಟ್ಟು ಹಾಲನ್ನು ಅಪವ್ಯಯ ಮಾಡದೆ ಅಪೌಷ್ಠಿಕತೆ ಹೋಗಲಾಡಿಸಲು ಬಡವರಿಗೆ, ವೃದ್ಧರಿಗೆ ನೀಡಿ ಸದುಪಯೋಗ ಮಾಡಬೇಕೆಂದರು. ಶ್ರಾವಣ ಶುದ್ಧ ಪಂಚಮಿಯಂದು ವಿಶ್ವಗುರು ಬಸವಣ್ಣನವರು ಕೂಡಲಸಂಗಮದಲ್ಲಿ ಇಷ್ಟಲಿಂಗಯೋಗ ನಿರತರಾಗಿ ಲಿಂಗೈಕ್ಯರಾದರು. ಶ್ರಾವಣಸೃಷ್ಠಿಯಂದು ಅವರ ಧರ್ಮಪತ್ನಿ ನೀಲಗಂಗಮ್ಮನವರು ತಂಗಡಗಿಯಲ್ಲಿ ಬಯಲಾದರು. ಆದ್ದರಿಂದ ಬಸವಪಂಚಮಿ ಹಾಗೂ ನೀಲಮ್ಮಸಷ್ಠಿ ಎಂದೇ ಅಂದಿನಿಂದಲೂ ಆಚರಿಸುತ್ತಾ ಬರಲಾಗಿದೆ ಎಂದರು.
ಕರ್ನಾಟಕದಲ್ಲಿ ಶ್ರಾವಣ ಮಾಸದಾದ್ಯಂತ ಎಲ್ಲಾ ದೇವಾಲಯಗಳಲ್ಲಿ ಪ್ರವಚನ, ಪುರಾಣ, ಭಜನೆ, ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಬಸವಭಕ್ತರು ಬಹುದೇವೋಪಾಸನೆಯನ್ನು ಬಿಟ್ಟು ಇಷ್ಟಲಿಂಗಪೂಜೆ, ಬಸವೇಶ್ವರ ಪೂಜಾವೃತ, ಮನೆಮನೆಗಳಲ್ಲಿ ಬಸವಜ್ಯೋತಿ ಕಾರ್ಯಕ್ರಮ, ಅನುಭಾವಗೋಷ್ಠಿಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಬಸವಸಂಸ್ಮರಣೆಯನ್ನು ಆಚರಿಸಬೇಕೆಂದು ಸ್ವಾಮೀಜಿ ಜಾಗೃತಿ ಮೂಡಿಸಿದರು.
ಸೃಷ್ಟಿಕರ್ತ ಪರಮಾತ್ಮನಲ್ಲಿ ನಂಬಿಕೆ ಉಳ್ಳವರು ಎಂದಿಗೂ ಮಾನವರಲ್ಲಿ ಬೇಧ ಮಾಡುವುದಿಲ್ಲ. ಪ್ರತಿಯೊಬ್ಬರಲ್ಲೂ ಪರಮಾತ್ಮನ ಚೈತನ್ಯವಿದೆ. ಸಕಲ ಜೀವಾತ್ಮರಿಗೆ ಲೇಸ ಬಯಸುವನೇ ಶರಣ. ದೇವನೊಬ್ಬನೆ ತಂದೆ ಮನುಜನೊಬ್ಬನೇ ತಂದೆ ಎಂಬ ಸಮಾನತೆಯ ಸಂದೇಶವನ್ನು ಗುರು ಬಸವಣ್ಣನವರು ಕೊಟ್ಟಿದ್ದಾರೆ. ಇವನಾರವ, ಇವನಾರವ ಇವನಾರವನೆಂದೆನಿಸದೆ ಇವನನಮ್ಮವ ಇವನಮ್ಮವನೆಂದು ಎಲ್ಲರನ್ನೂ ಪ್ರೀತಿಸಬೇಕು ಎಂದರು.
ಅನುಭವಮಂಟಪದಲ್ಲಿ ಗುರುಬಸವಣ್ಣನವರು ಯಾವುದೇ ಬೇಧ ಮಾಡದೆ ಎಲ್ಲರಿಗೂ ಆಶ್ರಯವನ್ನು ನೀಡಿ ಮಾನವ ಸಮುದಾಯವನ್ನು ಮೇಲೆತ್ತಿದ್ದರು. ಆದರೆ, ಇಂದು ಬಸವಣ್ಣನವರ ಹೆಸರಿನಲ್ಲಿ ಜಾತಿ, ಮತ, ಪಂಥ ನಡೆಯುತ್ತಿರುವುದು ದುರ್ದೈವದ ಸಂಗತಿ. ಬಸವಭಕ್ತರು ಜಾತಿ ಬೇಧ ಮಾಡಬಾರದು ಎಂದು ಸ್ವಾಮೀಜಿ ಕರೆ ನೀಡಿದರು.
ಮಲೈ ಮಹದೇಶ್ವರರು ಹಾಗೂ ಎಡೆಯೂರು ಸಿದ್ದಲಿಂಗೇಶ್ವರರು ಲಿಂಗಾಯತ ಧರ್ಮದ ಮೂಲಕ ಸರ್ವರಿಗೂ ಧಾರ್ಮಿಕ ಸಮಾನತೆಯನ್ನು ನೀಡಿ ಬಸವಧರ್ಮ ಪ್ರಚಾರ ಮಾಡಿದ ಮಹಾನ್ ಶರಣರು. ಅವರ ಚರಿತ್ರೆಯನ್ನು ಅರಿತು ನಾವು ಬಸವತತ್ವದ ಮಾರ್ಗದಲ್ಲಿ ನಡೆಬೇಕೆಂದರು. ಇಂದು ಕೇವಲ ಅವರನ್ನು ದೇವರೆಂದು ಭಾವಿಸಿ ಅವರ ತತ್ವಗಳಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದರು. ಲಿಂಗಾಯತರು ಸ್ವಧರ್ಮದ ಇತಿಹಾಸ ತಿಳಿದುಕೊಳ್ಳಬೇಕಾದರೆ ಶರಣರ ಇತಿಹಾಸ ಮತ್ತು ವಚನವನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದರು.
ಪ್ರತಿಯೊಂದು ಲಿಂಗಾಯತ ಮಠಗಳಲ್ಲಿ ವಚನ ಪಾಠ ಶಾಲೆ ತೆರೆಯ ಬೇಕು, ವಚನ ಪಾರಾಯಣ, ವಚನ ಅಧ್ಯಯನ ನಡೆಯಬೇಕು, ಇಂದಿನ ಲಿಂಗಾಯತ ಮಠಾಧೀಶರು ವಚನಗಳ ಬಗ್ಗೆ ಹೇಳದೆ ಮಠಗಳಲ್ಲಿ ವೇದಪಾಠ ಶಾಲೆ ನಡೆಸುತ್ತಿರುವುದು ಮಹಾ ದುರಂತ ಎಂದು ಪೂಜ್ಯರು ವಿಷಾದಿಸಿದರು.
ಬಸವಜ್ಯೋತಿಗೆ ಅದ್ದೂರಿ ಸ್ವಾಗತ
ಶ್ರೀಕ್ಷೇತ್ರ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಸನ್ನಿಧಿಯಿಂದ ತಂದಿರುವ ಬಸವಜ್ಯೋತಿಗೆ ಗ್ರಾಮಸ್ಥರು ಅದ್ಧೂರಿಸ್ವಾಗತ ಕೋರಿದರು. ಪಟ್ಟದ ಹೊಸಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಬಸವಫೌಂಡೇಶನ್ ಅಧ್ಯಕ್ಷೆ ಅಪರ್ಣ ಶಿವಕುಮಾರ್, ದಾಳಿಂಬ ಗ್ರಾಮದ ಶರಣರಾದ ಈರಮ್ಮ, ಧಾರವಾಡದ ಕಮಲಮ್ಮ ಬೆಂಡಿಗೆರಿ, ಗ್ರಾ.ಪಂ.ಸದಸ್ಯ ಜಗದೀಶ್, ರುದ್ರೇಶ್, ಬಸವಲಿಂಗು ಮತ್ತಿತರರು ಉಪಸ್ಥಿತರಿದ್ದರು.




