Saturday, November 21, 2026

ಪ್ರಾಯೋಗಿಕ ಆವೃತ್ತಿ

ಜಾನಪದ ಸಾಹಿತ್ಯ ಉಳಿವಿನ ಶ್ರೇಯಸ್ಸು ಡಾ.ಜೀಶಂಪಗೆ ಸಲ್ಲಬೇಕು- ಜಯಮಾರುತಿ

ರಾಜ್ಯದಲ್ಲಿ ಜಾನಪದ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದರೆ ಅದಕ್ಕೆ ಜಾನಪದ ತಜ್ಞ ಡಾ.ಜಿ.ಶಂ.ಪರಮಶಿವಯ್ಯ ಕಾರಣ. ಕನ್ನಡ ನಾಡಿನಲ್ಲಿ ಜಾನಪದ ಉಳಿಸಿದ ಕೀರ್ತಿ ಡಾ.ಜಿ.ಶಂ.ಪ ಅವರಿಗೆ ಸಲ್ಲಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಯಮಾರುತಿ ಬಣ್ಣಿಸಿದರು.

ಭಾನುವಾರ ನಗರದ ಗಾಂಧಿ ಭವನದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಇವರ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 31ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ ಅಮೃತ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜಾನಪದ ಕ್ಷೇತ್ರದಲ್ಲಿ ಡಾ.ಜಿ.ಶಂ.ಪರಮಶಿವಯ್ಯ ಅವರ ಹೆಸರಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಡಾ.ಜಿ.ಶಂ.ಪ. ವೇದಿಕೆ ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಜಾನಪದ ಬೆಳವಣಿಗೆಗೆ ನಿರಂತರ ಸೇವೆ ಮಾಡಿದ ಜೀಶಂಪ ಅವರು ಜಾನಪದ ವಸ್ತು ಸಂಗ್ರಹವನ್ನು ಸ್ಥಾಪಿಸಿ ಜಾನಪದ ಉಳಿಸುವ ಕಾರ್ಯ ಮಾಡಿದ್ದರು ಎಂದು ಸ್ಮರಿಸಿದರು.

ಸಾಹಿತಿಗಳು ಕಷ್ಟದ ಜೀವನ ನಡೆಸಿದವರು. ಅವರ ಸಾಹಿತ್ಯದಿಂದ ಸಮಾಜ ಉದ್ದಾರವಾಗಿದೆ. ಆದರೆ ಅವರ ಮನೆ ಅಭಿವೃದ್ಧಿ ಆಗಿಲ್ಲ. ನೈಜ ಸಾಹಿತಿಗಳು ಎಂದಿಗೀ ಸಹ ದುಸ್ತರ ಜೀವನವನ್ನೇ ನಡೆಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು.

ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನು ಹುಡಕಬೇಕಿದೆ. ಹಿಂದಿ, ತಮಿಳು, ಇಂಗ್ಲೀಷ್ ಮಯವಾಗಿರುವ ಬೆಂಗಳೂರಿನಲ್ಲಿ ಶೇ.30ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ರಾಜ್ಯದ ವಿವಿಧ ಕಡೆ ಕೆಲಸ ಮಾಡಿರುವ ನನಗೆ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವುದು ಮಂಡ್ಯ ಜಿಲ್ಲೆಯಲ್ಲಿ. ನಮ್ನ ಜಿಲ್ಲೆಯಲ್ಲಿ ಹೆಚ್ಚು ಕನ್ನಡ ಮಾತನಾಡುವವರಿರುವುದು ನನಗೆ ಹೆಮ್ಮೆಯ ಸಂಗತಿ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಗೌಡ ಮಾತನಾಡಿ, ಮೌಲ್ಯಯುತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿದಾಗ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ.‌ ಆ ನಿಟ್ಟಿನಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಉತ್ತಮ ಸಾಧಕರನ್ನು ಹಾರಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ.ಹೆಚ್.ಎಸ್.ಮುದ್ದೇಗೌಡ ಮಾತನಾಡಿ, ಪ್ರತಿಯೊಬ್ಬರು ಸಹ ಸಾಹಿತ್ಯವನ್ನು ಓದಬೇಕು. ಕನ್ನಡದ ಭಾಷೆ ಬಗ್ಗೆ ಹೆಚ್ಚಿನ ಗೌರವವಿಟ್ಟು, ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಪ್ರಸ್ತುತ ಸಾಹಿತ್ಯಕ್ಕೂ ಹಿಂದಿನ ಸಾಹಿತ್ಯಕ್ಕೂ ಬಹಳ ವ್ಯತ್ಯಾಸವಿದೆ. ಹಿಂದೆ ಅನೇಕ ಸಾಹಿತಿಗಳು ಮೌಲ್ಯಯುತ ಸಾಹಿತ್ಯವನ್ನು ರಚಿಸುತ್ತಿದ್ದರು. ಆದರೆ ಇಂದಿನ ಕವಿಗಳ ಸಾಹಿತ್ಯ ರಚನೆ ಮೌಲ್ಯಗಳಿಂದ ಕೂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಪ್ರಶಸ್ತಿಗಳನ್ನು ಪಡೆಯಲು ನಡೆಯುತ್ತಿರುವ ರಾಜಕಾರಣ ಅಷ್ಟಿಷ್ಟಲ್ಲ. ಪ್ರಶಸ್ತಿಗಳು ನಮ್ಮನ್ನು ಹುಡುಕುತ್ತಾ ಬರಬೇಕೆ ಹೊರತು ನಾವು ಪ್ರಶಸ್ತಿಗಳ ಹಿಂದೆ ಹೋಗಬಾರದು. ನಮ್ಮನ್ನ ಪ್ರಶಸ್ತಿಯೊಂದು ನಮ್ಮನ್ನು ಹುಡುಕಿ ಬಂದಾಗ ನಮ್ಮ ಮೌಲ್ಯ ದುಪ್ಪಟ್ಟಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಂದಿ ಸಾಧಕರನ್ನು ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಕೋರಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಅರಕೆರೆ ಪುರುಷೋತ್ತಮ್, ಖ್ಯಾತ ವೈದ್ಯರಾದ ಡಾ.ಚಂದ್ರಶೇಖರ್, ಡಾ.ಮಾದೇಶ್, ತಾ.ಪಂ. ಮಾಜಿ ಸದಸ್ಯ ಅರಕೆರೆ ಸಂತೋಷ್ ಕುಮಾರ್, ತಾಲ್ಲೂಕು ಕನ್ನಸ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಎಸ್.ಕೃಷ್ಣ ಸ್ವರ್ಣಸಂದ್ರ, ಮಂಗಲ ಶಿವಣ್ಣ, ಲೋಕೇಶ್ ಚಂದಗಾಲು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ