Friday, November 20, 2026

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿನಲ್ಲಿ ಜಮೀನು ಶ್ರೀಮಂತರ ಪಾಲು-ಅಹಿಂದ ವರ್ಗ ಜೀತದಾರ: ಡಾ.ತಲಕಾಡು ಚಿಕ್ಕರಂಗೇಗೌಡ

ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿ ಜಮೀನು ಅಹಿಂದ ವರ್ಗದ ಬಳಿ ಇದ್ದರೆ, ತಮಿಳುನಾಡಿನಲ್ಲಿ ಶ್ರೀಮಂತರ ಬಳಿ ಇದ್ದು ಅಹಿಂದ ವರ್ಗದವರು ಜೀತದಾರರಾಗಿ ಅವರ ಜಮೀನುಗಳಲ್ಲಿ ದುಡಿಯುತ್ತಿದ್ದಾರೆ ಎಂದು ಇತಿಹಾಸ ತಜ್ಞ, ಸಂಶೋಧಕ ಡಾ. ತಲಕಾಡು ಚಿಕ್ಕ ರಂಗೇಗೌಡ ಆರೋಪಿಸಿದರು.

ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶ್ರೀಮಂತರ ಬಳಿ ಸಾವಿರಾರು ಎಕರೆ ಕರ್ನಾಟಕದ ಭೂ ಕಾಯಿದೆ ಪ್ರಕಾರ ಹಳೇ ಮೈಸೂರು ಭಾಗದಲ್ಲಿ 12 ಹೆಕ್ಟೇರ್ ಗಿಂತ ಯಾರು ಹೆಚ್ಚು ಜಮೀನು ಹೊಂದುವಂತಿಲ್ಲ. ಅಂದರೆ 40 ರಿಂದ 50 ಎಕರೆ ಮಾತ್ರ ಜಮೀನಿದ್ದರೆ ಹೆಚ್ಚು. ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ 300 ರಿಂದ 400 ಎಕರೆ ಜಮೀನ್ದಾರರು ಇದ್ದಾರೆ‌. ಆದರೆ ಹಳೇ ಮೈಸೂರು ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜಮೀನು ಹೊಂದಿರುವವರು ಸಿಗುವುದಿಲ್ಲ. ಆದರೆ ತಮಿಳುನಾಡು ಭೂ ಕಾಯ್ದೆಯ ಪ್ರಕಾರ ಬಡವರ್ಗದ ಬಳಿ ಜಮೀನಿಲ್ಲ. ವೆಂಕಟರಾಮನ್,ಮೂಪನಾರ್, ರಾಜಾ, ಚಿದಂಬರ್, ಕರುಣಾನಿಧಿ, ಜಯಲಲಿತ ಈ ರೀತಿಯ ದೊಡ್ಡ ದೊಡ್ಡ ಶ್ರೀಮಂತರ ಬಳಿ ಒಂದು-ಎರಡು ಸಾವಿರ ಜಮೀನು ಇರುತ್ತದೆ. ಅವರ ಬಳಿ ಬಡ ವರ್ಗದ ಜನರು ಜೀತ ಮಾಡುತ್ತಿರುತ್ತಾರೆ. ಅವರನ್ನು ಬಳಸಿಕೊಂಡು ಶ್ರೀಮಂತ ಜಮೀನುದಾರರು ಕೇಂದ್ರ ಹಾಗೂ ನ್ಯಾಯಾಂಗ ವ್ಯವಸ್ಥೆ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಅಹಿಂದ ವರ್ಗದ ಜೀತ

ಹಳೆ ಮೈಸೂರು ಭಾಗದಲ್ಲಿ ಅರ್ಧ ಎಕರೆ, ಒಂದು ಎಕರೆ ಜಮೀನನ್ನು ಹೊಂದಿದ ಅಹಿಂದ ವರ್ಗ ಬೇಸಾಯ ಮಾಡುತ್ತಿದ್ದರೆ, ತಮಿಳುನಾಡಿನಲ್ಲಿ ಅಹಿಂದ ವರ್ಗ ಶ್ರೀಮಂತರ ಜಮೀನಿನಲ್ಲಿ ಜೀತ ದಾಳಿನಂತೆ ಕೆಲಸ ಮಾಡುತ್ತಿದೆ.ಇಲ್ಲಿ ಬಡವರ್ಗಕ್ಕೆ ಜಮೀನಿಲ್ಲ. ತಮಿಳುನಾಡಿನ ಶ್ರೀಮಂತರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಬಡವರ್ಗದವರ ಕೈಗೆ ಹಣ ಕೊಟ್ಟು ಅವರಿಂದ ಚಳುವಳಿ ಮಾಡಿಸಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಸತ್ತ ಇಲಿಗಳನ್ನು ಅವರ ಮುಖದ ಮುಂದೆ ಹಿಡಿದುಕೊಂಡು ಫೋಟೋ ತೆಗೆಸಿ ಅದನ್ನು ನ್ಯಾಯಾಂಗ ವ್ಯವಸ್ಥೆಯ ಮುಂದೆ ಇಟ್ಟಿದ್ದಾರೆ.ಇದು ಸ್ಪಷ್ಟವಾಗಿ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ ಎಂದರು.

ಶತಮಾನಗಳ ಇತಿಹಾಸ

ಕಾವೇರಿ ವಿಚಾರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ 1892 ಹಾಗೂ 1924ರ ದಾಖಲೆಗಳನ್ನು ನಾವು ನೋಡಿದ್ದೇವೆ.ಆದರೆ ಕಾವೇರಿ ಇತಿಹಾಸ 905ನೇ ಇಸವಿಯಲ್ಲಿ ದಾಖಲಾಗಿದೆ. ಕಾವೇರಿ ನೀರನ್ನು ಸಂಗ್ರಹಿಸಲು ತಮಿಳುನಾಡಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಚೋಳರು ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುತ್ತಾರೆ. ಇದನ್ನು ಕಂಡ ತಲಕಾಡಿನ ಗಂಗರು 904-905ರಲ್ಲಿ ಕಾವೇರಿ ನದಿಗೆ ಪಾಂಡವಪುರ ತಾಲೂಕಿನ ರಾಮಪುರ(ಸೀತಾಪುರ) ಬಳಿ ಮೊದಲನೇ ಅಣೆಕಟ್ಟನ್ನು ಶ್ರವಣಬೆಳಗೊಳದ ಭಟ್ಟಾರಕರ ನೆರವಿನಿಂದ ಕಟ್ಟಿಸುತ್ತಾರೆ. ಅಂದರೆ 1118 ವರ್ಷಗಳ ಹಿಂದೆಯೇ ಮಂಡ್ಯದಲ್ಲಿ ತಲಕಾಡಿನ ಗಂಗರು ಕಾವೇರಿ ಚಳವಳಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ಯಕ್ಷ ಪ್ರಶ್ನೆ

ಬೆಂಗಳೂರಿನ ಯಲಹಂಕ ಪ್ರದೇಶಕ್ಕೆ ಕಾವೇರಿ ನೀರು ನೀಡುವ ಯೋಜನೆಗೆ ಸಂಬಂಧಿಸಿದಂತೆ, ತಮಿಳುನಾಡು ಯಲಹಂಕ ಕಾವೇರಿ ವ್ಯಾಪ್ತಿಗೆ ಬರುವುದಿಲ್ಲ. ಅದು ಪಾಲಾರ್ ನದಿ ವ್ಯಾಪ್ತಿಗೆ ಸೇರುತ್ತದೆ ಎಂದು ಅಡ್ಡಗಾಲು ಹಾಕಿತ್ತು. ಆದರೆ ಕೃಷ್ಣ ನದಿಯೊಂದಿಗೆ ಯಾವುದೇ ಸಂಬಂಧವಿರದಿದ್ದರೂ ಚೆನ್ನೈಗೆ 5 ಟಿಎಂಸಿ ನೀರನ್ನು ಪಡೆದಿದ್ದಾರೆ. ಇದು ಯಾವ ಆಧಾರದಲ್ಲಿ ನೀಡಿದ್ದೀರಿ ಎಂಬುದನ್ನು ಕರ್ನಾಟಕ ರಾಜ್ಯ ಏಕೆ ಪ್ರಶ್ನೆ ಮಾಡಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಕೆಟ್ಟ ನಿರ್ಧಾರ

ಬೆಂಗಳೂರನ್ನು ಹವಾ ನಿಯಂತ್ರಿತ ನಗರಿ ಎಂದು ಕರೆಯಲಾಗುತ್ತಿತ್ತು. ಇದನ್ನು ತಪ್ಪಿಸಲು ತಮಿಳುನಾಡು ಆಡಳಿತಗಾರರು ಕೆಟ್ಟ ನಿರ್ಧಾರ ಕೈಗೊಂಡರು. ಬೆಂಗಳೂರಿನ ಗಡಿಭಾಗವಾಗಿರುವ ಹೊಸೂರು ಬಳಿ ಕೈಗಾರಿಕೆಗಳ ಹಬ್ ಮಾಡಿ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದರು. ಈ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ಕಾರ್ಬನ್ ಡೈಆಕ್ಸೈಡ್ ಬೆಂಗಳೂರಿನ ವಾತಾವರಣವನ್ನು ಕಲುಷಿತಗೊಳಿಸಿದ ಪರಿಣಾಮ ಇಂದು ಉಷ್ಣಾಂಶದಲ್ಲಿ ಏರಿಕೆಯಾಗಿದೆ. ತಮಿಳುನಾಡಿನ ರಾಜಕಾರಣಿಗಳ ಕೆಟ್ಟ ನಿರ್ಧಾರದಿಂದ ಬೆಂಗಳೂರು ಇಂದು ಹವಾ ನಿಯಂತ್ರಿತ ನಗರವಾಗಿ ಉಳಿದಿಲ್ಲ ಎಂದರು.

ಒಡವೆ ನೀಡಿದ್ದು ಪ್ರತಾಪ ಕುಮಾರಿ

ಕೆಆರ್‌ಎಸ್‌ ಅಣೆಕಟ್ಟು ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜರವರ ತಾಯಿ ತಮ್ಮಲ್ಲಿದ್ದ ಒಡವೆಗಳನ್ನು ಮಾರಿದರು ಎಂದು ತಪ್ಪಾಗಿ ಕೆಲವರು ಹೇಳುತ್ತಾರೆ. ಕೆಆರ್‌ಎಸ್‌ ಅಣೆಕಟ್ಟು ಸ್ಥಾಪನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪತ್ನಿ ಗುಜರಾತಿನ ಖಾತೇವಾಡದ ರಾಜಕುಮಾರಿ ಪ್ರತಾಪ ಕುಮಾರಿಯವರು ಒಡವೆಗಳನ್ನು ನೀಡಿದ್ದು ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಲ್. ಎನ್. ಮುಕುಂದರಾಜ್ ಗೌಡತಿಯರ ಸೇನೆಯ ರಾಜ್ಯಾಧ್ಯಕ್ಷೆ ರೇಣುಕಾ, ವೆಂಕಟೇಶ್, ರೈತನಾಯಕಿ ಸುನಂದ ಜಯರಾಮ್, ಅಂಬುಜಮ್ಮ, ಕೆ. ಬೋರಯ್ಯ,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ