Friday, November 20, 2026

ಪ್ರಾಯೋಗಿಕ ಆವೃತ್ತಿ

‘ಕರ್ನಾಟಕ ಬಂದ್’ ಬೆಂಬಲಿಸಿ ‘ಮದ್ದೂರು ಬಂದ್’ : ಪ್ರಗತಿಪರ ಸಂಘಟನೆಗಳ ಒಕ್ಕೂಟದ ನಿರ್ಧಾರ

ವರದಿ : ನ.ಲಿ.ಕೃಷ್ಣ

ಕಾವೇರಿ ನೀರು ತಮಿಳು ನಾಡಿಗೆ ನೀಡುವ ಪ್ರಾದಿಕಾರದ ಅವೈಜ್ಞಾನಿಕ ತೀರ್ಪು ಖಂಡಿಸಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿ, ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಬೆಂಬಲಿಸಿ ನಾಳೆ ಶುಕ್ರವಾರ ಮದ್ದೂರಿನ ಪ್ರಗತಿಪರ ಸಂಘಟನೆಗಳು ಮದ್ದೂರು ಬಂದ್ ಗೆ ಕರೆ ನೀಡಿವೆ.

ಇಂದು ಬೆಳಿಗ್ಗೆ ಮದ್ದೂರಿನ ರಾಜಕೀಯ ಶಕ್ತಿ ಕೇಂದ್ರ “ಆಲದ ಮರ”ದ ಬಳಿ ಸಭೆ ಸೇರಿದ್ದ ವಿವಿಧ ಪ್ರಗತಿಪರ ಸಂಘಟನೆಗಳು ಮದ್ದೂರು ಬಂದ್ ಮಾಡುವ ಮೂಲಕ ಕರ್ನಾಟಕ ಬಂದ್ ಬೆಂಬಲಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಂಡವು.

ಸಭೆಯಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಮುಖ್ಯಸ್ಥ ಸೋಮನಹಳ್ಳಿ ಅಂದಾನಿ, ಕಾವೇರಿಯ ಉಳಿವಿಗಾಗಿ ನಾಡಿನ ಹಿತಕ್ಕಾಗಿ, ವರ್ತಕರು ಸ್ವಪ್ರೇರಣೆಯಿಂದ ತಮ್ಮ ವಹಿವಾಟುಗಳನ್ನು ದಿನವಿಡಿ ಸ್ಥಗಿತಗೊಳಿಸಿ ಕರ್ನಾಟಕ ಬಂದ್ ಯಶಸ್ಸಿಗೆ ಸಹಕರಿಸಬೇಕೆಂದರು. ಇದೇ ಸಂದರ್ಭದಲ್ಲಿ ರಾಮನಗರದ ಐಜೂರು ವೃತ್ತದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಅಶೋಕ್, ಕಸ್ತೂರಿ ಕರ್ನಾಟಕ ಸಂಘಟನೆಯ ಉಮಾಶಂಕರ್ ಮಾತನಾಡಿ,  ಅಖಂಡ ಕರ್ನಾಟಕ ಬಂದ್ ಆಚರಿಸುತ್ತಿರುವ ವೇಳೆ ಮದ್ದೂರು ಪಟ್ಟಣ ಸ್ಪಂದಿಸಬೇಕಾದದ್ದು, ನಮ್ಮೆಲ್ಲರ ಕರ್ತವ್ಯ. ನಾಡಿನ ನೆಲ-ಜಲ-ಬಾಷೆಯ ಪ್ರಶ್ನೆ ಬಂದಾಗ ಎಲ್ಲಾರು ಒಟ್ಟಾಗಿ ದಿಟ್ಟವಾಗಿ ನಿಲ್ಲಬೇಕು ಎಂದರು.

ರೈತಸಂಘದ ಸೊ.ಶಿ.ಪ್ರಕಾಶ್, ಉಮೇಶ್, ಚನ್ನಸಂದ್ರ ಲಕ್ಷ್ಮಣ ಮಾತನಾಡಿ ವರ್ತಕರು ನಾಡಿನ ಎಲ್ಲರ ಹಿತಕ್ಕಾಗಿ ಮದ್ದೂರು ಬಂದ್ ಗೆ ಸಹಕರಿಸಬೇಕು ಎಂದರು.

ಬೈಕ್ ಜಾಥ
ಶುಕ್ರವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆ, ರೈತಸಂಘಟನೆ, ವರ್ತಕರ ಸಂಘ, ಸವಿತಾ ಸಮಾಜ, ನೆರವು ಕಟ್ಟಡ ಕಾರ್ಮಿಕರ ಸಂಘ, ಜನಶಕ್ತಿ ಸಂಘಟನೆ, ತಮಿಳು ಶ್ರಮಿಕರ ಸಂಘ, ಒಕ್ಕಲಿಗರ ಸಂಘ, ಛಾಯ ಗ್ರಾಹಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಭಾಗವಹಿಸಿ ಮದ್ದೂರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.

ಮುಸ್ಲಿಂ ಸಮಾಜದ ಬೆಂಬಲ
ಜಾಮೀಯಾ ಶಾದಿ ಕಮಿಟಿ ಆಧ್ಯಕ್ಷ ಆದಿಲ್ ಆಲಿ ಖಾನ್ ಅವರು ಮಾತನಾಡಿ ಮದ್ದೂರು ಬಂದ್ ಗೆ ಮುಸ್ಲಿಂ ಸಮಾಜದ ಬೆಂಬಲ ವ್ಯಕ್ತಪಡಿಸಿದರು. ಮಧ್ಯಾಹ್ನ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಮದ್ದೂರು ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದೊಟ್ಟಿಗೆ ಪೇಟೆ  ಬೀದಿಯಲ್ಲಿ ಮೆರವಣಿಗೆ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ವಿ.ಸಿ. ಉಮಾಶಂಕರ್,  ಮರಳಿಗ ಶಿವರಾಜ್, ಹುಲಿಗೆರೆ ಪುರ ಮಹದೇವ್, ಮೂರ್ತಿ, ಚಿಕ್ಕರಸಿನಕೆರೆ ಬಿ. ವಿ .ಶಂಕರೇಗೌಡ, ಒಕ್ಕಲಿಗರ ಸಂಘದ ಶಿವಲಿಂಗೇಗೌಡ, ಹಾಗಲಹಳ್ಳಿ ಬಸವರಾಜು, ವನಹಳ್ಳಿ ಸುರೇಶ್, ದೇವ್ ಕುಮಾರ್ ,ಸವಿತಾ ಸಮಾಜದ ಶಶಿ, ಮ್ಯಾಥ್ಯೂ, ಚನ್ನಸಂದ್ರ ರವಿ, ಗೊರವನಹಳ್ಳಿ ಪ್ರಸನ್ನ ಸುಮುಖ ಕುಮಾರ್ ಮದ್ದೂರು, ಕುಮಾರ್ ಮಹೇಂದ್ರ, ಗೆಜ್ಜಲಗೆರೆ ಲಿಂಗರಾಜು, ನಗರಕೆರೆ ಲಿಂಗಪ್ಪ, ಜಗದೀಶ್, ಚಂದ್ರು ಸೊಂಪುರ ಅಜ್ಜಹಳ್ಳಿ ಬಸವರಾಜ್, ರಮೇಶ್ ಮತ್ತಿತರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ