Sunday, November 22, 2026

ಪ್ರಾಯೋಗಿಕ ಆವೃತ್ತಿ

ನಿಸ್ವಾರ್ಥ ಸೇವೆಯಿಂದ ಜನರ ನೆನಪಿನಲ್ಲಿ ಉಳಿಯುವುದೇ ನೈಜ್ಯ ಸಾಧನೆ : ಡಾ.ಸಿ.ಎನ್ ಮಂಜುನಾಥ್

ಸಾಧನೆಗೆ ದೊಡ್ಡದು, ಚಿಕ್ಕದು ಕೆಲಸ ಎಂಬುದು ಇಲ್ಲ. ಯಾವ ವಿಧದಲ್ಲಾದರೂ ಸಾಧನೆ ಮಾಡಬಹುದಾಗಿದೆ. ಸನ್ಮಾನ ಗೌರವವನ್ನು ಮೌನವಾಗಿ ಸ್ವೀಕರಿಸಬೇಕು.ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಬೇಕು, ನಿಸ್ವಾರ್ಥ ಸೇವೆಯಿಂದ ಜನರ ನೆನಪಿನಲ್ಲಿ ಉಳಿಯುವುದೇ ನೈಜ್ಯ ಸಾಧನೆಯಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜನಾಥ್ ಹೇಳಿದರು.

ಮಂಡ್ಯ ನಗರದ ರೈತ ಸಭಾಂಗಣದ ಆವರಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥಸ್ವಾಮೀಜಿಯವರ 79ನೇ ಜನ್ಮ ದಿನೋತ್ಸವ, ಪಟ್ಟಾಭಿಷೇಕದ ಸುವರ್ಣ ಮಹೋತ್ಸವ, ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಹಾಗೂ ಪದ್ಮಶ್ರೀ ಪುರಸ್ಕೃತ ಹೃದಯ ತಜ್ಞ ಡಾ.ಸಿ.ಎನ್ ಮಂಜುನಾಥ್ ಸನ್ಮಾನ, ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಸಂತೋಷಕ್ಕಾಗಿ ಹುಡುಕಾಡುತ್ತಿರುವುದನ್ನು ಕಾಣುತ್ತಿದ್ದೇವೆ, ನನಗೆ ಐಶ್ವರ್ಯ ಬೇಡ, ಅದಿದ್ದರೆ ಸಮಸ್ಯೆಗಳು ಹೆಚ್ಚು, ಇದಕ್ಕೆ ಬದಲಾಗಿ ಆರೋಗ್ಯ,ಆಯಸ್ಸು,ಸಂತೃಪ್ತಿ ಇರಲಿ. ಸರಳತೆಯಿಂದ ದೊರಕುವ ಗೌರವ ಶಾಶ್ವತ. ಸಂಪತ್ತಿನಿಂದ ದೊರಕುವ ಗೌರವ ತಾತ್ಕಾಲಿಕ. ಆದರೆ ಇತ್ತೀಚಿಗ ಸಂಪತ್ತು ಹುಡುಕಿ ಸಂಬಂಧ ಮಾಡಲಾಗುತ್ತಿದೆ. ಸಂಬಂಧಗಳೇ ಸಂಪತ್ತಾಗಿರಲಿ ಎಂದು ನುಡಿದರು.

ಸಾಕ್ಷರತೆಗಿಂತ ಸಂಸ್ಕಾರ ಮುಖ್ಯ

ಸ್ವಾತಂತ್ರö್ಯದ ಸಂದರ್ಭದಲ್ಲಿ ಶೇ.30 ಸಾಕ್ಷರತೆ ಇತ್ತು ಆದರೆ ಜನರಲ್ಲಿ ಸಂಸ್ಕಾರ ಇತ್ತು.ಈಗ ಶೇ.೭೫ ಸಾಕ್ಷರತೆ ಇದೆ ಸಂಸ್ಕಾರ ಕಡಿಮೆಯಾಗಿದೆ.ಪದವೀಧರರೆಲ್ಲ ಜ್ಞಾನವಂತರಲ್ಲ. 5ನೇ ತರಗತಿ ಓದಿದ್ದರೂ ನಮ್ಮ ಹಿರಿಯರಲ್ಲಿ ಅದ್ಭುತ ಜ್ಞಾನವಿತ್ತು.ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠ ವಿದ್ಯಾದಾನದ ಜೊತೆಗೆ ವಿಜ್ಞಾನ ತಂತ್ರಜ್ಞಾನದ ಸ್ಪರ್ಶ ಕೊಡುತ್ತಿದೆ.ಶಿಕ್ಷಣದ ಜೊತೆ ಸಂಸ್ಕಾರ ಕೊಡುತ್ತಿದ್ದಾರೆ.ಜೀವನದಲ್ಲಿ ಪದವಿ,ಪ್ರಶಸ್ತಿ,ಪಾರಿತೋಷಕ ಮುಖ್ಯವಲ್ಲ.ನಮ್ಮ ಶಿಕ್ಷಣ ಎಷ್ಟು ಜನರ ಮುಖದಲ್ಲಿ ನಗು ತರಿಸಿದೆ,ಸಂಸ್ಕಾರ ಕಲಿಸಿದೆ,ಬೆಳಕು ಚೆಲ್ಲಿದೆ ಎಂಬುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಜೀವನದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಹೃದಯ ಗೆಲ್ಲಬೇಕು, ದ್ವೇಷಾಸೂಯೆ ಕಳೆಯಬೇಕು,ಪ್ರೀತಿಯನ್ನು ಹಂಚಬೇಕು. ಆವಾಗಲೇ ಜೀವನ ಸಾರ್ಥಕ. ಭಾರತವನ್ನು ಎರಡು ದೃಷ್ಟಿಯಲ್ಲಿ ನೋಡಬಹುದಾಗಿದೆ. ವಿಮಾನದಿಂದ ನೋಡಿದರೆ ಬಹಳ ಸುಂದರವಾಗಿ ಕಾಣಲಿದೆ.ಟಿವಿಯಲ್ಲೂ ಸುಂದರವಾಗಿ ಕಾಣುತ್ತದೆ. ರೈಲಿನಲ್ಲಿ ಪ್ರಯಾಣಿಸಿದರೆ ಹಳ್ಳಿಗರು, ಬಡ ಜನರ ಕಷ್ಟ ನೋಡಬಹುದಾಗಿದೆ.ರೈಲಿನಲ್ಲಿ ನಿಜವಾದ ಭಾರತ ಕಾಣುತ್ತದೆ ಎಂಬ ಕಾರಣಕ್ಕೆ ಗಾಂಧೀಜಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದರು.

ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ನಾಲಿಗೆಯ ಸಮಸ್ಯೆ ತಂದೊಡ್ಡುತ್ತಿದೆ, ನಾಲಿಗೆಯ ಗಾಯ ಮಾಸುತ್ತದೆ ಆದರೆ ನಾಲಿಗೆ ಆಡಿದ ಮಾತು ಸಂಕಷ್ಟ ವನ್ನುಂಟು ಮಾಡುತ್ತದೆ. ಒಳ್ಳೆಯ ಮಾತು,ಪ್ರೀತಿ, ನಗು ಮನುಷ್ಯನಿಗೆ ಮುಖ್ಯ.ನಮ್ಮನ್ನು ನಾವು ಅರಿತರೆ ಜೀವಂತವಾಗಿದ್ದೇವೆ ಎಂದು ಅರ್ಥ, ಬೇರೆಯವರ ನೋವು ಅರಿತರೆ ಮನುಷ್ಯರಾಗಿದ್ದೇವೆ ಎಂದು ಅರ್ಥ ಎಂದು ಮಾರ್ಮಿಕವಾಗಿ ನುಡಿದರು.
ಮಹಿಳೆಯರಿಗೆ ಮಕ್ಕಳ ಶಿಕ್ಷಣ ಒತ್ತಡವಾಗುತ್ತಿರುವುದರಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಹಾಗೂ ಒಂದನೇ ತರಗತಿಯ ಶಾಲೆ ವೇಳೆಯನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ವರೆಗೆ ಬದಲಾಯಿಸಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.

ಹಣ ಇಲ್ಲದಿದ್ದರೂ ಚಿಕಿತ್ಸೆಯನ್ನು ನೀಡಿದ್ದೇವೆ

ಹೃದಯದ ಆರೋಗ್ಯಕ್ಕಾಗಿ ಪ್ರತಿನಿತ್ಯ ಒಂದು ತಾಸು ಓಡಾಡಿ, ಉತ್ತಮ ಆರೋಗ್ಯಕ್ಕೆ ರಕ್ತದೊತ್ತಡ,ಮಧುಮೇಹ, ಕೊಲೆಸ್ಟ್ರಾಲ್, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ದೇಶದಲ್ಲಿ ಹೃದಯದ ಕಾಯಿಲೆಯಿಂದ ಶೇ.೩೫ರಷ್ಟು ಸಾವು ಸಂಭವಿಸುತ್ತಿವೆ, ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನನ್ನ ಅವಧಿಯಲ್ಲಿ ಎಲ್ಲರ ಜೊತೆಗೂಡಿ 75 ಲಕ್ಷ ರೋಗಿಗಳಿಗೆ ಹೃದಯ ಚಿಕಿತ್ಸೆ ನೀಡಿದ್ದೇವೆ, 8 ಲಕ್ಷ ಜನತೆಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ, ನಮಗೆ ಸಚಿವರು, ಶಾಸಕರು ಮುಖ್ಯವಲ್ಲ. ಬಿಪಿಎಲ್ ಕಾರ್ಡ್ ಇರುವವರೂ ಮುಖ್ಯವಲ್ಲ. ರೈತರು ಮತ್ತು ಬಡವರು ಕಣ್ಣಿನಲ್ಲಿ ಭಾವನೆಗಳಲ್ಲಿ ಬಡತನ ಇರುವವರು ವಿಐಪಿಗಳಾಗಿದ್ದರು, ಎಲ್ಲಕ್ಕಿಂತ ಮುಖ್ಯವಾಗಿ ಕಣ್ಣಿನಿಂದ ಬಡತನ ನೋಡುವ ಮೂಲಕ ಹಣ ಇಲ್ಲದಿದ್ದರೂ ಚಿಕಿತ್ಸೆಯನ್ನು ನೀಡಿದ್ದೇವೆ ಎಂದು ಸ್ಮರಿಸಿದರು.

ಜೀವನದಲ್ಲಿ ಕಣ್ಣೀರು ಮತ್ತು ಬೆವರಿಗೆ ಹೆಚ್ಚಿನ ಮಹತ್ವ. ಕಣ್ಣೀರಿನಲ್ಲಿ ನೋವು ಇರುತ್ತದೆ. ಬೆವರಿನಲ್ಲಿ ಶ್ರಮ ಇರುತ್ತದೆ ದೇಹ ಐಸ್ ಕ್ರೀಮ್ ಇದ್ದ ಹಾಗೆ, ಒಳ್ಳೆಯದು ಮಾಡಿದರೂ ಕರಗುತ್ತದೆ,ಕೆಟ್ಟದು ಮಾಡಿದರೂ ಕರಗುತ್ತದೆ,ಏನನ್ನೂ ಮಾಡದಿದ್ದರೂ ಕರಗುತ್ತದೆ.ಕರಗುವ ಮುನ್ನ ಒಳ್ಳೆಯ ಕಾರ್ಯ ಮಾಡಿ ಎಂದು ಹೇಳಿದರು.
ಈ ಹಿಂದೆ ಅವಿಭಕ್ತ ಕುಟುಂಬ ಇದ್ದವು, ಎಲ್ಲರೂ ಒಗ್ಗೂಡಿ ಬದುಕುತ್ತಿದ್ದರು, ಒಬ್ಬರ ಕಷ್ಟವನ್ನು ಮತ್ತೊಬ್ಬರು ಅರಿಯುತ್ತಿದ್ದರು. ಆದರೆ ಇದೀಗ ಗಂಡ ಹೆಂಡತಿ ಜೊತೆಯಾಗಿ ಬದುಕುವುದೇ ಅವಿಭಕ್ತ ಕುಟುಂಬವಾಗಿದೆ, ಗ್ರಾಮೀಣ ಜನತೆ ನಗರ ಪ್ರದೇಶದತ್ತ ವಲಸೆ ಹೋಗುತ್ತಿದ್ದಾರೆ. ನಗರ ಪ್ರದೇಶದ ವಾಸಿಗಳಿಗೆ ಕಾಯಿಲೆ ಹೆಚ್ಚು.ಹಳ್ಳಿಯಲ್ಲಿ ವಾಸಿಸಿದರೆ ಆರೋಗ್ಯಯುತವಾಗಿ ಬದುಕಬಹುದು. ಸಣ್ಣ ಸಣ್ಣ ಸಂಬಳಕ್ಕೆ ನಗರಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದರು.

ವ್ಯಕ್ತಿತ್ವ-ಒಡನಾಟ ಮುಖ್ಯ

ಮನುಷ್ಯನಿಗೆ ವ್ಯಕ್ತಿತ್ವ ಮತ್ತು ಒಡನಾಟ ಮುಖ್ಯವಾಗಬೇಕು.ವ್ಯಕ್ತಿ ವ್ಯಕ್ತಿತ್ವಕ್ಕೆ ಒಂದು ಅಕ್ಷರ ವ್ಯತ್ಯಾಸವಷ್ಟೇ.ಎಲ್ಲ ಕಡೆ ನಮ್ಮ ವ್ಯಕ್ತಿತ್ವ ರಾರಾಜಿಸಬೇಕು. ಶಿಕ್ಷಕರ ಜೊತೆ ಒಡನಾಟ ಇದ್ದರೆ ವಿದ್ಯಾರ್ಥಿಗಳಾಗುತ್ತೀರಿ, ವಿಜ್ಞಾನಿ ಜೊತೆ ಇದ್ದರೆ ಸಂಶೋಧಕರಾಗುತ್ತೀರಿ,ಕುಡುಕರಿಗೆ ಪ್ರಪಂಚ ಸುಲಭವಾಗಿ ಕಾಣಲಿದೆ, ಜೀವ ವಿಮಾ ಪ್ರತಿನಿಧಿ ಜೊತೆ ಇದ್ದರೆ ಪ್ರೀಮಿಯಂ ಪಾವತಿಸುತ್ತೀರಿ, ಅಧಿಕಾರಿಗಳ ಜೊತೆ ಒಡನಾಟ ಇದ್ದರೆ ಪ್ರಪಂಚ ನಿಧಾನ ಅನಿಸಲಿದೆ, ವರ್ತಕರ ಜೊತೆ ಇದ್ದರೆ ಲಾಭದ ಬಗ್ಗೆ ಯೋಚನೆ, ಯೋಧರ ಜೊತೆ ಇದ್ದರೆ ನಮ್ಮ ತ್ಯಾಗ ಬಲಿದಾನ ಕಡಿಮೆ ಎನಿಸುತ್ತದೆ.ನೀರಿನ ಹನಿ ಕಾದ ಕಾವಲಿಯ ಮೇಲಿದ್ದರೆ ಆವಿಯಾಗುತ್ತದೆ.ಎಲೆಯ ಮೇಲಿದ್ದರೆ ಫಳಫಳ ಹೊಳೆಯುತ್ತದೆ.ಚಿಪ್ಪಿನೊಳಗಿದ್ದರೆ ಮುತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಸಂಸದೆ ಸುಮಲತಾ ಅಂಬರೀಷ್, ಡಾ.ಮಂಜುನಾಥ್ ಪತ್ನಿ ಹೆಚ್.ಡಿ.ಅನುಸೂಯಮ್ಮ, ಶಾಸಕ ರವಿಕುಮಾರ್ ಗಣಿಗ, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಗಂಗಾಧರಗೌಡ, ಒಕ್ಕಲಿಗರ ಸಂಘದ ನಿರ್ದೇಶಕರಾದ ಅಶೋಕ್ ಜಯರಾಂ, ಮೂಡ್ಯ ಚಂದ್ರು, ರಾಘವೇಂದ್ರ ಬಸರಾಳು, ನೆಲ್ಲಿಗೆರೆ ಬಾಲು, ಡಾ.ಸದಾನಂದಗೌಡ, ಕೆ.ಸಿ.ರವೀಂದ್ರ, ಎನ್.ಕೃಷ್ಣ, ಕೃಷ್ಣೇಗೌಡ ಹಾಗೂ ಸುಜಾತ ಕೃಷ್ಣ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ