ಸಮಾಜದ ಅಭ್ಯುದಯಕ್ಕಾಗಿ ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರದ ಮೂಲಕ ಸೇವೆಗೈದ ಭೈರವೈಕ್ಯ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಅವರು, ಸಮಾಜ ಮತ್ತು ಸಮುದಾಯಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡುವಲ್ಲಿ ಪ್ರಥಮರಾಗಿದ್ದರು ಎಂದು ಸಂಸದೆ ಸುಮಲತಾ ಅಂಬರೀಶ್ ಬಣ್ಣಿಸಿದರು.
ನಗರದ ರೈತಸಭಾಂಗಣದ ಆವರಣದಲ್ಲಿ ಒಕ್ಕಲಿಗರ ಸೇವಾ ಟ್ರಸ್ಟ್ (ರಿ) ಮಂಡ್ಯ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿದ್ದ ಭೈರವೈಕ್ಯ ಶ್ರೀಬಾಲಗಂಗಾಧರನಾಥಸ್ವಾಮೀಜಿ ಅವರ 79ನೆ ಜಯಂತ್ಯುತ್ಸವ ಹಾಗೂ ಡಾ.ನಿರ್ಮಲಾನಂದನಾಥಸ್ವಾಮೀಜಿ ಅವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಕಾರ್ಯಕ್ರಮದಡಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಬಗ್ಗೆ ಮಾತನಾಡಲು ಹೆಮ್ಮೆಯಾಗುತ್ತದೆ, ನನ್ನ ಪತಿ ಅಂಬರೀಶ್ ಜೊತೆ ಅವರ ಒಡನಾಟ ಅಪಾರವಾಗಿತ್ತು. ಅವರು ನಮ್ಮ ಕುಟುಂಬದ ಹಿತೈಷಿಗಳಾಗಿದ್ದರು ಎಂದು ಸ್ಮರಿಸಿದರು.
ಅಂಬರೀಶ್ ಎಲ್ಲರೊಂದಿಗೂ ಪಕ್ಷಾತೀತವಾಗಿ ಆತ್ಮೀಯರಾಗಿದ್ದರು, ಅವರ ಅಜಾತ ಗುಣದಿಂದ ನನಗೂ ಸಮುದಾಯವನ್ನು ಪ್ರೀತಿಸುವ ಮನೋಭಾವ ಬೆಳೆಯಿತು. ಡಾ.ಸಿ.ಎನ್.ಮಂಜುನಾಥ್ ಸರಳತೆಯ ಸಂಕೇತವಾಗಿದ್ದು, ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯಾಗಿ ಪರಿವರ್ತಿಸಿದ ಹೆಗ್ಗಳಿಕೆ ಡಾ.ಮಂಜುನಾಥ್ ಅವರಿಗೆ ಸಲ್ಲುತ್ತದೆ ಎಂದರು.
ಅಭಿನಂದನಾ ನುಡಿಗಳನ್ನಾಡಿದ ಮೈಸೂರು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸದಾನಂದ ಮಾತನಾಡಿ, ಕನ್ನಡ ನಾಡು ಕಂಡ ಶ್ರೇಷ್ಠ ಆಡಳಿತಗಾರ ಹಾಗೂ ಹೃದ್ರೋಗ ತಜ್ಞ ಡಾ.ಮಂಜುನಾಥ್ ಅವರ ಪರಿಶ್ರಮದಿಂದ ಜಯದೇವ ಆಸ್ಪತ್ರೆ ಇಂದು ವಿಶ್ವ ವ್ಯಾಪಿ ಉತ್ತಮ ಹೆಸರುಗಳಿಸಿದೆ, ಅವರ ಆಡಳಿತ ಅವಧಿ ಸುವರ್ಣಯುಗ ಎಂದು ಬಣ್ಣಿಸಿದರು.
ಮಾನವೀಯತೆಗೆ ಅಗ್ರ ಪ್ರಾಶಸ್ತ್ಯ ನೀಡುತ್ತಿದ್ದ ಡಾ.ಮಂಜುನಾಥ್ ಅವರು ಎಲ್ಲರನ್ನು ಪ್ರೀತಿ ಗೌರವದಿಂದ ಕಾಣುತ್ತಿದ್ದರು, ಸದಾ ಕಾಲ ರೋಗಿಗಳ ಚಿಕಿತ್ಸೆ ಬಗ್ಗೆ ಚಿಂತಿಸುತ್ತಾ ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ಧಾರೆಂದರು.
ಬರಡಾಗಿದ್ದ ಜಯದೇವ ಆಸ್ಪತ್ರೆಯಲ್ಲಿ ಜೀವಸೆಲೆ ಮೇಳೈಸಲು ಕಾರಣರಾದ ಡಾ.ಮಂಜುನಾಥ್ ಶ್ರಮದಿಂದ 200 ಕೋಟಿ ರೂ. ಗೂ ಮಿಗಿಲಾದ ಹಣ ಠೇವಣಿಯಾಗಿದ್ದು, ಇದರಿಂದ ಬಡರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿಕುಮಾರ್ ಗೌಡ ಮಾತನಾಡಿ, ಆದಿಚುಂಚನಗಿರಿಯನ್ನು ಸಾಮ್ರಾಜ್ಯವಾಗಿ ರೂಪಿಸಿ ಒಕ್ಕಲಿಗರ ಆಸ್ಮಿತೆಯನ್ನು ರೂಪಿಸಿದವರು ಭೈರವೈಕ್ಯ ಶ್ರೀಗಳು ಆದಿಚುಂಚನಗಿರಿ ಶ್ರೀಮಠ ವಿಶ್ವವ್ಯಾಪಿ ಪಸರಿಸಲು ಶ್ರೀಗಳ ದೂರದೃಷ್ಠಿ ಕಾರಣವಾಗಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗರ ಸಮುದಾಯ ಭವನ ಹಾಗೂ ಇತರೆ ಸಣ್ಣ ಸಮುದಾಯಗಳ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ನೀಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮನಸ್ಸಿನ ಕೊಳೆ ನಾಶವಾದರೆ ದೇಹಕ್ಕೆ ಒಳಪು ಬರುತ್ತದೆ, ಗುರುಸ್ಮರಣೆಯಿಂದ ದೇಹದ ಚಂಚಲತೆ ನಾಶವಾಗುತ್ತದೆ, ತ್ಯಾಗಿಗಳಿಗೆ ಮಾತ್ರ ಮುಕ್ತಿ ದೊರೆಯುತ್ತದೆ, ಜಗತ್ತಿನ ಆಮಿಷಗಳಿಗೆ ಬಲಿಯಾಗದೇ, ಜಗತ್ತಿನ ಹಿತಕ್ಕೆ ಬದುಕಬೇಕೆಂಬ ಛಲ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ.ಗಂಗಾಧರಗೌಡ, ಸಮಾಜ ಸೇವಕ ವೆಂಕಟರಮಣಗೌಡ (ಸ್ಟಾರ್ ಚಂದ್ರು), ಒಕ್ಕಲಿಗರ ಸಂಘದ ನಿರ್ದೇಶಕರಾದ ಅಶೋಕ್ ಜಯರಾಂ, ಮೂಡ್ಯ ಚಂದ್ರು, ರಾಘವೇಂದ್ರ ಬಸರಾಳು, ನೆಲ್ಲಿಗೆರೆ ಬಾಲು, ಒಕ್ಕಲಿಗ ಮುಖಂಡರಾದ ಡಾ.ಅನುಸೂಯ, ಸಿ.ಕೆ.ಸುಜಾತ ಕೃಷ್ಣ, ಕೆ.ಸಿ.ರವೀಂದ್ರ, ಜ್ಯೋತಿಲಕ್ಷ್ಮಿ ನಾಗಣ್ಣಗೌಡ, ಎಲ್.ಕೃಷ್ಣ ಮತ್ತಿತರರು ಭಾಗವಹಿಸಿದ್ದರು.