ಇಂದಿನ ದಿನಗಳಲ್ಲಿ ಹೊಸ ರೀತಿಯ ಆಲೋಚನೆ-ಚಿಂತನೆಗಳು ಅತ್ಯಗತ್ಯ, ಮಂಡ್ಯ ಜಿಲ್ಲೆಯು ರಂಗಭೂಮಿಯ ವಿಶೇಷ ಪ್ರಯೋಗಗಳಿಗೆ ಒಂದು ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಬಣ್ಣಿಸಿದರು.
ಮಂಡ್ಯ ನಗರದ ಪಿಇಎಸ್ ರಂಗಮಂದಿರದಲ್ಲಿ ನೆಲದನಿ ಬಳಗ ಮಂಗಲ ಆಯೋಜಿಸಿದ್ದ ಎಸ್.ಡಿ.ಜಯರಾಂ ಅವರ 73ನೇ ವರ್ಷದ ಜನ್ಮದಿನ ಪ್ರಯುಕ್ತ ರಂಗಪಯಣ ತಂಡ ಅಭಿನಯದ ”ಫೂಲನ್ದೇವಿ” ಜೀವನಾಧಾರಿತ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸೊಪ್ಪು ಮಾರುವ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಕಂಡ ಹಾಗೆ ನೆಲದನಿ ಬಳಗದ ತಂಡವು ಪರಿಸರ, ಆರೋಗ್ಯ, ಸಂಸ್ಕೃತಿ, ಜನಪದ ಜೊತೆಗೆ ಜನಮಾನಸಲ್ಲಿ ಉಳಿಯುವಂತಹ ವಿಶೇಷ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಹೊಸ ರೀತಿಯ ಆಲೋಚನೆ, ಚಿಂತನೆಗೆ ಸಮಾಜವನ್ನು ಹಚ್ಚುತ್ತಿರುವುದು ಶ್ಲಾಘನೀಯ. ಒಬ್ಬ ಮುಗ್ದ ಹೆಣ್ಣುಮಗಳು ಬಾಲ್ಯದಲ್ಲೇ ಅತ್ಯಾಚಾರಕ್ಕೆ, ಕ್ರೌರ್ಯಕ್ಕೆ ಹಾಗೂ ದಾಸ್ಯತ್ವಕ್ಕೆ ಒಳಗಾಗಿ ಸಿಟ್ಟಿಗೆದ್ದು, ತನಗೆ ನೋವನ್ನು ನೀಡಿದವರಿಗೆ ಸರಿಯಾದ ಬುದ್ದಿ ಕಲಿಸಲು ಡಕಾಯಿತಿ ರಾಣಿಯಾಗಿ ಎಲ್ಲರನ್ನು ಎದುರಿಸಿ, ಕೊನೆಗೆ ಮನಪರಿವರ್ತನೆಯಾಗಿ ಶರಣಾಗತಿಯಾಗಿ, ಸಂಸದೆಯಾದ ಫೂಲನ್ದೇವಿಯ ಚಿತ್ರಣ ಸಮಾಜಕ್ಕೆ ಗೊತ್ತಿದೆ ಎಂದರು.
ಚರಿತ್ರೆ ಸೃಷ್ಠಿದ ಫೂಲನ್ದೇವಿಗೆ ಬಾಲ್ಯ, ಯೌವ್ವನದಲ್ಲಿಯೇ ಎಲ್ಲಾ ಸ್ಥಾನಮಾನಗಳು ಸಿಕ್ಕಿದ್ದರೆ ಎಷ್ಟು ಶಕ್ತಿಯುತವಾಗಿ ದೇಶಕ್ಕೆ ಸಮರ್ಪಿಸಿಕೊಳ್ಳುತ್ತಿದ್ದರು ಎನ್ನುವುದನ್ನು ಅರಿಯಬೇಕಿದೆ, ಅಂತಹ ಶಕ್ತಿವಂತ ಮಹಿಳೆ ಸಂಸದೆಯಾಗಿ ಸಂಸತ್ ಪ್ರವೇಶ ಪಡೆಯುವಷ್ಟರಲ್ಲಿ ಸಮಾಜ ಕೊಂದು ಹಾಕುತ್ತದೆ ಎಂದರೆ ದುರಂತವೇ ಸರಿ ಎಂದು ಸ್ಮರಿಸಿದರು. ಇಂತಹ ಸಾಮಾಜಿಕ, ರಾಜಕೀಯ ಹಿನ್ನಲೆಯ ನಾಟಕವನ್ನು ಪ್ರದರ್ಶನ ಜೀವನ ಸಂಗತಿಯನ್ನು ತೆರೆದಿಡುವುದು ಅಮೂಲ್ಯವಾಗಿದೆ, ನಾನು ಎಸ್.ಡಿ.ಜಯರಾಂ ಅವರ ಬಗ್ಗೆ ಕೇಳಿದೆ, ಅವರು ಕ್ರೀಯಾಶೀಲ ರಾಜಕಾರಣಿ, ಮುತ್ಸದ್ದಿಯಾಗಿ ಕೆಲಸ ಮಾಡುತ್ತಿದ್ದರು, ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸೇವೆ ನೀಡಿರುವುದನ್ನು ಸ್ಮರಿಸಿಕೊಳ್ಳೋಣ ಎಂದರು.

ಇದೇ ಸಂದರ್ಭದಲ್ಲಿ ಸೊಪ್ಪು ಮಾರುವ ಹಿರಿಯ ಮಹಿಳೆ ದೇವಮ್ಮ ಸಂತೆಕಸಲಗೆರೆ ಅವರಿಗೆ ಸೀರೆ ಮತ್ತು ಧನ ಸಹಾಯ ಮಾಡುವ ಮೂಲಕ ಉದ್ಘಾಟಿಸಲಾಯಿತು, ಬೆಂಗಳೂರಿನ ರಂಗಪಯಣ ತಂಡದ ರಂಗರೂಪ ನಿರ್ದೇಶನ ಮಾಡಿದ ರಾಜ್ಗುರ್ ಮತ್ತು ಪೂಲನ್ ದೇವಿ ಪಾತ್ರ ಮಾಡಿದ ನಯನಸೂಡ ಅವರನ್ನು ಅಭಿನಂದಿಸಲಾಯಿತು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರು ನಾಟಕದಲ್ಲಿ ಜಿಲ್ಲಾಧಿಕಾರಿ ಪಾತ್ರ ಮಾಡಿ ಜನ ಮೆಚ್ಚುಗೆ ಪಡೆದರು. ನಾಟಕ ವೀಕ್ಷಿಸಿದ ಸಹೃದಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸಾಹಿತಿ ತೈಲೂರು ವೆಂಕಟಕೃಷ್ಣ, ಮಹಿಳಾ ಮುನ್ನಡೆ ಪೂರ್ಣಿಮಾ, ವೈದ್ಯರಾದ ಡಾ.ಆದಿತ್ಯಗೌಡರ್, ಮಿಮ್ಸ್ ವೈದ್ಯ ಡಾ.ರವಿಕುಮಾರ್, ಪತ್ರಕರ್ತರಾದ ನವೀನ್ ಚಿಕ್ಕಮಂಡ್ಯ, ಯೋಗೇಶ್, ತಗ್ಗಹಳ್ಳಿ ಗ್ರಾ,ಪಂ.ಅಧ್ಯಕ್ಷೆ ಅರ್ಪಿತಾ, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮಂಗಲ, ಖಜಾಂಚಿ ಮಹಾಲಕ್ಷ್ಮಿ, ಅನಿತಾ, ಪ್ರತಾಪ್, ಕುಮಾರ್ಗೌಡ, ಮಹದೇವಸ್ವಾಮಿ, ನವೀನಾ ಕುಮಾರಿ, ಲೋಕೇಶ್, ಜೀವನ್, ಶಿವಮಲ್ಲ ಮತ್ತಿತರರಿದ್ದರು.




