ಅಭಿವೃದ್ಧಿ ಕೆಲಸ ಮಾಡುವವರಿಗೆ ಮತ ನೀಡಿದರೆ, ಮತ್ತಷ್ಟು ಪ್ರಗತಿಯ ಕೆಲಸಗಳಾಗುತ್ತವೆ. ಆದರೆ ಬರೇ ನಾಟಕೀಯ ಮಾಡಿಕೊಂಡ ರಾಜಕೀಯ ಮಾಡುವವರಿಗೆ ಮಣೆ ಹಾಕಿದರೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ ಹಾಗಾಗಿ ಮತದಾರರು ಬಹಳ ಯೋಚನೆ ಮಾಡಿ ಉತ್ತಮರನ್ನು ಆಯ್ಕೆ ಮಾಡುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.
ಶ್ರೀರಂಗಪಟ್ಟಣ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಕ್ಷೇತ್ರದಲ್ಲಿನ ಕಳೆದ 5 ವರ್ಷದ ನನ್ನ ಅಭಿವೃದ್ಧಿ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು. ಕಳೆದ ಬಾರಿ ತಮ್ಮ ಅತ್ಯಮೂಲ್ಯವಾದ ಮತಗಳನ್ನು ನೀಡಿ ಬಹು ಮತಗಳ ಅಂತರದಿಂದ ನನ್ನನ್ನು ಜಯಶೀಲರಾಗಿ ಮಾಡಿದ್ದೀರಿ. ತಾವು ನೀಡಿದ ಅವಕಾಶವನ್ನು ಬಳಸಿಕೊಂಡು ಕ್ಷೇತ್ರ ಉದ್ದಗಲಕ್ಕೂ ಅಭಿವೃದ್ಧಿ ಕೆಲಸಗಳ ಮೂಲಕ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದ್ದೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ ಎಂದರು.
ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದು ಬಹುತೇಕ ಗ್ರಾಮಗಳ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತಾಲೂಕಿನ 32 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿ ತೋರಿಸಿದ್ದೇನೆ ಎಂದರು.
ಸ್ವತಂತ್ರ ಪೂರ್ವದಲ್ಲೇ ಒಡೆಯರ್ ಅವರ ದೂರದೃಷ್ಟಿ ಹಾಗೂ ರೈತರ ಮೇಲಿನ ಅಪಾರ ಕಾಳಜಿಯಿಂದಾಗಿ ನಿರ್ಮಿತಗೊಂಡಿದ್ದ ಬಂಗಾರದೊಡ್ಡಿ ನಾಲೆ ಶಿಥಿಲಾವಸ್ಥೆಗೆ ತಲುಪಿ, ಇದರಿಂದ ಶ್ರೀರಂಗಪಟ್ಟಣ ಹಾಗೂ ಗಂಜಾಂನ ರೈತರ ತಮ್ಮ ಸಾವಿರಾರು ಎಕರೆ ಜಮೀನುಗಳಿಗೆ ನೀರಿಲ್ಲದೆ ಪರಿತಪಿಸಿದನ್ನು ನಾನು ಮನಗಂಡು ಐತಿಹಾಸಿಕ ಹಿನ್ನಲೆಯುಳ್ಳ ನಾಲೆ ಅಭಿವೃದ್ಧಿ ಮಾಡುವ ಮೂಲಕ ಈ ಭಾಗದ ರೈತರಿಗೆ ಸಹಕಾರ ನೀಡಿದ್ದೇನೆ. ಅಲ್ಲದೆ ಕ್ಷೇತ್ರದ ರೈತರ ಸಮಸ್ಯೆಗಳನ್ನು ಅರಿತು ಹಲವು ಗ್ರಾಮಗಳಲ್ಲಿ ಕೆರೆ, ಕಟ್ಟೆಗಳನ್ನು ತುಂಬಿಸಿ ಕಾಲುವೆಗಳ ಮೂಲಕ ನೀರು ಹರಿಸಿ ರೈತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿರುವ ತೃಪ್ತಿಗೆ ನನ್ನಲ್ಲಿದೆ ಎಂದರು.
ಕಳೆದ 40-50 ವರ್ಷಗಳಿಂದ ತಮ್ಮ ಬದುಕಿಗೆ ಯಾವುದೇ ಭದ್ರತೆಗಳಿಲ್ಲದೆ ವಾಸಿಸುತ್ತಿದ್ದ ಕ್ಷೇತ್ರದ ಸಾವಿರಾರು ಮಂದಿಗೆ ಸರ್ಕಾರದ ಜೊತೆ ಚರ್ಚಿಸಿ, ಗಮನ ಸೆಳೆದು ಹಕ್ಕುಪತ್ರ ವಿತರಿಸುವ ಮೂಲಕ ಅವರ ಅತಂತ್ರ ಬದುಕಿಗೆ ನೆಲೆ ಕೊಟ್ಟಿದ್ದೇನೆ. ಅಲ್ಲದೆ ವಿಶ್ವದಲ್ಲೇ ಹೆಸರುವಾಸಿಯಾಗಿರುವ ಕೆಆರ್ಎಸ್ ಗ್ರಾಮ ಯಾವುದೇ ದಾಖಲೆಗಳಿಲ್ಲದೆ, ನಕ್ಷೆಯಲ್ಲಿ ಹೆಸರಿಲ್ಲದನ್ನು ನಾನು ಗಮನಿಸಿ ಸರ್ಕಾರದ ಜೊತೆ ಚರ್ಚಿಸಿ ಕಂದಾಯ ಗ್ರಾಮ ಎಂದು ಘೋಷಿಸುವ ಮೂಲಕ ವಿಶ್ವವಿಖ್ಯಾತ ಕೆಆರ್ಎಸ್ ಗ್ರಾಮವನ್ನು ಭೂಪಟದಲ್ಲಿ ಸೇರುವಂತೆ ಮಾಡಿದ್ದೇನೆ ಎಂದರು.
ಕೊರೋನ ಮಹಾಮಾರಿ ಹಾಗೂ ಜೆಡಿಎಸ್ ಪಕ್ಷ ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಕಾರಣ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಬಾಕಿ ಉಳಿದಿವೆ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ಹಾಗಾಗಿ ನನಗೆ ಮತ್ತೊಂದು ಬಾರಿ ಅವಕಾಶ ಕಲ್ಪಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.




