Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಿಜೆಪಿ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ- ಡಾ. ಇಂದ್ರೇಶ್

ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಪಕ್ಷದ ಜವಾಬ್ದಾರಿ. ಉತ್ತಮ ಸಂಘಟನೆ ಮಾಡಿ ಪಕ್ಷವನ್ನು ಸದೃಢಗೊಳಿಸುವಂತೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವರಿಷ್ಠರು ತಿಳಿಸಿದ್ದು, ಪಕ್ಷವನ್ನು ಬಲಿಷ್ಟಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿಜೆಪಿ ಮಂಡ್ಯ ಜಿಲ್ಲಾ ನೂತನ ಅಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಹೇಳಿದರು.

ಮಂಡ್ಯನಗರದ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿ.ಪಿ. ಉಮೇಶ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕಟ್ಟಕಡೆಯ ಕಾಯಕರ್ತನಿಗೂ ಧಕ್ಕೆಯಾಗದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರ, ಪ್ರೀತಿ ನನ್ನೊಟ್ಟಿಗಿರಲಿ ಎಂದು ಮನವಿ ಮಾಡಿದರು.

ದೇಶ ಮೊದಲು, ಪಕ್ಷ ಆಮೇಲೆ, ವ್ಯಕ್ತಿ ನಂತರ ಎಂಬುದೇ ಬಿಜೆಪಿ ಪಕ್ಷದ ಸಿದ್ಧಾಂತವಾಗಿದೆ. ವ್ಯಕ್ತಿಗೆ ಯಾವುದೇ ಹುದ್ದೆಯ ಪ್ರಾಧಾನ್ಯತೆ ಇಲ್ಲ. ಪಕ್ಷದ ಜವಾಬ್ದಾರಿಯನ್ನು ಯಾರಿಗಾದರೂ ನೀಡಲಿ, ನಾವು-ನೀವು ಎಲ್ಲರೂ ಒಗ್ಗಟ್ಟಾಗಿ ದುಡಿದು ಪಕ್ಷವನ್ನು ಸದೃಢಗೊಳಿಸೋಣ ಎಂದು ಕರೆ ನೀಡಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಶೆ.100ರಷ್ಟು ನಾವು ಜಯಶೀಲರಾಗಬೇಕು. ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷದ ಯಾರೊಬ್ಬರೂ ಸದಸ್ಯರಾಗಿ ಆಯ್ಕೆಯಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸ್ಪರ್ಧಿಸಿ ಸ್ಥಳೀಯ ಸಂಸ್ಥೆ ಪ್ರತಿನಿಧಿಸಬೇಕು. ಆ ನಿಟ್ಟಿನಲ್ಲಿ ಬಲವರ್ಧನೆಯಾಗಬೇಕೆಂದರು.

ಮಧುಮಾದೇಗೌಡರಿಗೆ ಆಹ್ವಾನ
1962ರಿಂದ ರೈತ ನಾಯಕರಾಗಿದ್ದ ಜಿ.ಮಾದೇಗೌಡ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಜಿಲ್ಲೆಯಲ್ಲಿ ಮಾದರಿ ರಾಜಕಾರಣಿಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಮಹಾನ್ ನಾಯಕರ ಕುಟುಂಬದ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತಾ ಬಂದಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು

ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡರು ಲೋಕಸಭಾ ಚುನಾವಣೆಯಲ್ಲಿ  ತಟಸ್ಥರಾಗಿ ಉಳಿಯಬಾರದು. ಅವರ ಸೇವೆ ಮಂಡ್ಯ ಜಿಲ್ಲೆಗೆ ಅಗತ್ಯವಾಗಿದೆ. ಮಧು ಮಾದೇಗೌಡರು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಜೊತೆಯಾಗಬೇಕು. ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಮೈತ್ರಿಕೂಟ ಬೆಂಬಲಿಸಿದರೆ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದಕ್ಕೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಬಲಗೊಳಿಸಿದ ತೃಪ್ತಿ

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿಸಬೇಕೆಂಬ ನಿಟ್ಟಿನಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದೇನೆಂಬ ಸಂತೃಪ್ತಿ ನನಗಿದೆ ಎಂದು ಬಿಜೆಪಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.

ನಾನು ಅಧ್ಯಕ್ಷನಾಗಿ ಬಂದಾಗ ಬಣ, ಗುಂಪು ರಾಜಕಾರಣ ಮೇಳೈಸಿತ್ತು, ಕಾರ್ಯಕರ್ತರು ಒಬ್ಬೊಬ್ಬರು ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದರು. ಆದರೆ ನಾನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಉತ್ತಮವಾಗಿ ಸಂಘಟಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ಡಾ. ಸಿದ್ದರಾಮಯ್ಯ, ಅಶೋಕ್ ಜಯರಾಂ, ಎಸ್.ಪಿ. ಸ್ವಾಮಿ, ಲಕ್ಷ್ಮಿ ಅಶ್ವಿನ್‌ಗೌಡ, ಈ.ಸಿ.ನಿಂಗರಾಜ್‌ಗೌಡ, ಬೂಕಹಳ್ಳಿ ಮಂಜು, ಕೆ.ಎಸ್. ನಂಜುಂಡೇಗೌಡ, ವಿದ್ಯಾ ನಾಗೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!