Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೊಬೈಲ್ ಗೀಳಿದಿಂದಾಗಿ ಪುಸ್ತಕ ಪ್ರೇಮ ಕ್ಷೀಣ – ಡಾ.ಕುಮಾರ

ಅತೀ ವೇಗವಾಗಿ ಸಾಗುತ್ತಿರುವ ಆಧುನಿಕ ಜಗತ್ತಿನ ತಂತ್ರಜ್ಞಾನ ಯುಗದಲ್ಲಿ ನಾವು ಮೊಬೈಲ್ ಗಳಿಗೆ ದಾಸರಾಗಿ ಪುಸ್ತಕಗಳಿಗೆ ಬೆಲೆ ನೀಡದಂತಾಗಿದ್ದೇವೆಂದು ಜಿಲ್ಲಾಧಿಕಾರಿ ಡಾ.ಕುಮಾರ್ ಬೇಸರ ವ್ಯಕ್ತಪಡಿಸಿದರು.

ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಮಳವಳ್ಳಿ ಭಗವಾನ್ ಬುದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನದಲ್ಲಿ ತಂತ್ರಜ್ಞಾನ ಯುಗಕ್ಕೆ ಅತೀವೇಗವಾಗಿ ಓಡುತ್ತಾ ಮೊಬೈಲ್ಗಳಿಗೆ ನಾವೆಲ್ಲರೂ ದಾಸರಾಗುತ್ತಿದ್ದೇವೆ. ಆದರೆ ಹಿಂದಿನ ಪರಂಪರೆ ನೋಡಿದಾಗ ಪುಸ್ತಕಕ್ಕೆ ನಾವು ದಾಸರಾಗಬೇಕಾಗಿತ್ತು, ಮೊಬೈಲ್ಗಳಿಗಲ್ಲ, ಎಲ್ಲೋ ಒಂದು ಕಡೆ ನಮ್ಮ ಪರಂಪರೆ, ಸಂಸ್ಕಾರಗಳು, ಸಂಸ್ಕೃತಿಗಳು, ಮೌಲ್ಯಗಳು, ನೈತಿಕ ಮೌಲ್ಯಗಳು ಪತನಗೊಳ್ಳುತ್ತಿವೆ ಎಂದು ವಿಷಾದಿಸಿದರು.

ವಿದ್ಯಾರ್ಥಿ ದಿಸೆಯಲ್ಲಿ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಂಕಗಳಿಗಲ್ಲ, ಜ್ಞಾನ ಪಡೆಯುವುದ್ದಕ್ಕಾಗಿ, ವಿದ್ಯಾರ್ಥಿ ಗಳು ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು. ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಹಸಿವು ಹೆಚ್ಚಾಗಬೇಕು. ಆಗಮಾತ್ರ ನಿಮ್ಮ ಓದಿಗೆ ಸಾರ್ಥಕತೆ ಸಿಗುತ್ತದೆ ಎಂದರು.

ಭಗವಾನ್ ಬುದ್ದ, ಅಂಬೇಡ್ಕರ್ ಅವರಂತಹ ಮಹನೀಯರ ಮೌಲ್ಯಗಳನ್ನು ಹಾಗೂ ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಇಂತಹ ಜೀವನ ಕೌಶಲ್ಯ ಶಿಬಿರಗಳಿಂದ ವೃತ್ತಿ ಶಿಕ್ಷಣ ಸಿಗುತ್ತದೆ. ದಾರಿ ಮತ್ತು ಗುರಿ ಎರಡು ನಮ್ಮ ಮುಂದೆ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ಬಾಹ್ಯ ಸೌಂದರ್ಯಕ್ಕಿಂತ ಅಂತರ ಸೌಂದರ್ಯ ಇದ್ದರೆ ಮಾತ್ರ ವ್ಯಕ್ತಿ ಪರಿಪೂರ್ಣವಾಗಲು ಸಾಧ್ಯ. ಪುಸ್ತಕದಿಂದ ಗಳಿಸುವ ಅಂಕಗಳು ಮುಖ್ಯವಲ್ಲ, ಅಂಕಗಳು ಕೇವಲ ಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಜೀವನದ ಮೌಲ್ಯಗಳನ್ನು ಕಲಿಯುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು.

ಮೈಸೂರು ವಿಶ್ವಮೈತ್ರಿ ಬುದ್ದವಿಹಾರ ಡಾ. ಕಲ್ಯಾಣಸಿರಿ ಭಂತೇಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಗವಾನ್ ಬುದ್ದ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಯಮದೂರು ಸಿದ್ದರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು ಅಂತಹ ವೃತ್ತಿಯನ್ನು ಗೌರವದಿಂದ ಮುಂದಿನ ದಿನಗಳಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಸಿದ್ದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ರಚಿಸಿದ ಶಿಕ್ಷಣ ಸೌಂದರ್ಯ ಪುಸ್ತಕವನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರು ಬಿಡುಗಡೆಗೊಳಿಸಿದರು.

ಇದೇ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಅಪ್ಪಗೆರೆ ತಿಮ್ಮರಾಜು, ಮೈಸೂರು ವಿವಿ ಶಿಕ್ಷಣ ಶಾಸ್ತ್ರ ಅಧ್ಯಾಯನ ವಿಭಾಗದ ಅಧ್ಯಕ್ಷೆ ಪ್ರೊ.ಎಂ.ಪುಷ್ಪ,  ಶಂಭೂಲಿಂಗೇ ಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಂಚಲಿಂಗೇಗೌಡ, ಪ್ರಾಂಶುಪಾಲ ಡಾ.ಎನ್.ಬಾಲಸುಬ್ರಮಣ್ಯ, ಶಿವಲಿಂಗಯ್ಯ, ಪರಿಸರ ಪ್ರೇಮಿ ಸಾಲುಮರದ ನಾಗರಾಜು ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!