ಮಹಿಳಾ ಆಯೋಗ ಅಂದ್ರೆ ಮಹಿಳೆಯರ ರಕ್ಷಣೆ ನಿಲ್ಲುವುದು, ಅವರಿಗೆ ಶಕ್ತಿಯಾಗಿ ನಿಂತುಕೊಳ್ಳುವುದು ಆಯೋಗದ ಕೆಲಸ. ಯಾರೇ ನಿಮಗೆ ಸ್ಪಂದಿಸದಿದ್ದರೆ ಮಹಿಳಾ ಆಯೋಗ ನಿಮ್ಮ ಜೊತೆ ಇರುತ್ತೆ ಎಂದು ಕರ್ನಾಟಕ ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅಭಯ ನೀಡಿದರು.
ಭಾರತ ಸೇವಾದಳ, ಭಾರತ ಚುಟುಕು ಸಾಹಿತ್ಯ ಪರಿಷತ್ತು ಇವರ ವತಿಯಿಂದ ಮಂಡ್ಯನಗರದ ಬಾಲಭವನದ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಹಾಸ್ಯ ಸಂಜೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಚ್ಚೇದಿತ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಯೋಜನ ಪಡೆದುಕೊಳ್ಳಬೇಕು. ಒಂಟಿ ಮಹಿಳೆಯರಿಗೆ ಜೀವಿಸುವುದಕ್ಕಾಗಿ ಅವರ 18 ವರ್ಷದೊಳಗಿನ ಮಕ್ಕಳಿಗೆ ‘ಪ್ರಾಯೋಜಕತ್ವ’ ಎಂಭ ಯೋಜನೆ ಇದೆ. ಇದರಡಿಯಲ್ಲಿ ಒಂಟಿ ಮಹಿಳೆಯರ 18 ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳು 4 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆಯn ಮಹಿಳೆಯರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಹಿಳೆಯರು ಯಾವುದೇ ತೊಂದರೆ ಆದ್ರೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದರು.

ಶಿಕ್ಷಣ ನನ್ನನ್ನು ಇಲ್ಲಿಯ ತನಕ ಕರೆ ತಂದಿದೆ, ಎಲ್ಲಾ ಮಕ್ಕಳಿಗೆ ಶಿಕ್ಷಣ ಸಿಗಬೇಕು. ನಮ್ಮೂರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುತ್ತಿರಲಿಲ್ಲ. ಆದರೆ ನನ್ನ ತಂದೆ ನನ್ನನ್ನು ವಿದ್ಯಾವಂತರನ್ನಾಗಿ ಮಾಡಿದರು. ನನ್ನೂರಿಗೆ ನಾನೇ ಮೊದಲ ವಿದ್ಯಾವಂತೆಯಾಗಿದ್ದೆ, ಆ ಶಿಕ್ಷಣ ನನ್ನನ್ನು ಇಲ್ಲಿಗೆ ಕರೆತಂದಿದೆ ಎಂದು ಹೆಮ್ಮೆಯಿಂದ ನುಡಿದರು.
ಭಾರತ ಸೇವಾದಳದ ಮಂಡ್ಯ ಘಟಕದ ಜಿಲ್ಲಾಧ್ಯಕ್ಷ ಬಿ.ಸಿ. ಶಿವಾನಂದರವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರೋಟರಿ ಅಧ್ಯಕ್ಷ ರವೀಂದ್ರ ಕೆಂಪಯ್ಯ, ನಿವೃತ್ತ ಪ್ರಾಂಶುಪಾಲರಾದ ಜಿ.ವಿ.ಕುಮಾರ್, ಸಾಹಿತಿ ಕೃಷ್ಣ ಸ್ವರ್ಣಸಂದ್ರ, ಪತ್ರಕರ್ತ ಕಬ್ಬನಹಳ್ಳಿ ಕೆ. ಶಂಭು, ಸಮಾಜ ಸೇವಕರಾದ ಹಾಲಹಳ್ಳಿ ಮಹೇಶ್, ಧಾರ್ಮಿಕ ಮುಖಂಡರಾದ ಚಿಕ್ಕಸಿದ್ದಪ್ಪ, ಪೇಂಟನಿಯಲ್ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಪ್ರತಿಮಾ ರಮೇಶ್, ಸೇವಾದಳ ಶಿಕ್ಷಕಿ ಉಷಾರಾಣಿ ಅವರನ್ನು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮನ್ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಚಲನಚಿತ್ರ ನಟ ಶಂಕರ್ ಅಶ್ವಥ್, ಕಾಂಗ್ರೆಸ್ ಪಕ್ಷದ ಮುಖಂಡ ಹೆಚ್.ಕೆ. ರುದ್ರಪ್ಪ, ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಬೇಲೂರು ಸೋಮಶೇಖರ್, ಭಾರತ ಸೇವಾದಳದ ಖಜಾಂಚಿಗಳಾದ ಎಸ್.ಕೆ.ಶಿವಪ್ರಕಾಶ್ ಬಾಬು, ನಗರಸಭಾ ಸದಸ್ಯೆ ಮಂಜುಳಾ ಉದಯ ಶಂಕರ್, ಎಂ.ಎನ್. ಶ್ರೀಧರ್, ಸಜ್ಜನ್ ಕೊಠಾರಿ ಉಪಸ್ಥಿತರಿದ್ದರು.
ಹಾಸ್ಯ ಕಲಾವಿದರಾದ ಮೈಸೂರು ಆನಂದ್, ಮಿಮಿಕ್ರಿ ಮೈಸೂರು ರಮೇಶ್ ಬಾಬು, ಮಂಡ್ಯ ಸತ್ಯ, ಜನಾರ್ಧನ ಕೊಂಡ್ಲಿ ಹಾಸ್ಯ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.




