ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದುಬಾರಿ ಎಂಬ ಕಾರಣಕ್ಕೆ ತಾಲೂಕಿನ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಂಡವಪುರ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸೂತಿ ತಜ್ಞೆ ಡಾ.ಪವಿತ್ರಾ ಅವರನ್ನು ಸಾರ್ವಜನಿಕರು ಅಭಿನಂದಿಸುವ ಮೂಲಕ ಧನ್ಯತೆ ಮೆರೆದರು.
ಹಣ್ಣು-ಹಂಪಲು, ಶಾಲು, ಹಾರ ಹೊದಿಸಿ ಸಿಹಿ ತಿನಿಸು ಮತ್ತು ಸೀರೆ ನೀಡುವ ಮೂಲಕ ಡಾ.ಪವಿತ್ರಾ ಅವರನ್ನು ಸಾರ್ವಜನಿಕರು ಆತ್ಮೀಯವಾಗಿ ಅಭಿನಂದಿಸಿದರು.
‘ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯ ದೊರಕುತ್ತಿದ್ದು, ಹೆರಿಗೆಗೆ ಈ ಮೊದಲು ಮೈಸೂರಿಗೆ ತೆರಳಬೇಕಿತ್ತು. ಸಿಜರೀನ್ ಹಾಗೂ ನಾರ್ಮಲ್ ಹೆರಿಗೆಯಾದರೂ ದುಪ್ಪಟ್ಟು ಹಣ ನೀಡಬೇಕಾಗಿತ್ತು. ಇದೀಗ ಹೆರಿಗೆ ಕೂಡ ಪಾಂಡವಪುರ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಬಡ ಜನರು ನಿಟ್ಟುಸಿರು ಬಿಡುವಂತಾಗಿದೆ. ನನಗೆ ನಾರ್ಮಲ್ ಹೆರಿಗೆ ಆಗಿದ್ದು, ಮಗು ಆರೋಗ್ಯವಾಗಿದೆ’ ಎಂದು ಬಾಣಂತಿ ತೇಜಸ್ವಿನಿ ಅವಿನಾಶ್ ತಿಳಿಸಿದ್ದಾರೆ.
‘ನಾನು ಕಳೆದ ತಿಂಗಳು ಪಾಂಡವಪುರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿಯೇ ತಪಾಸಣೆ ಮಾಡಿಸಿದೆ. ಜತೆಗೆ ಇಲ್ಲಿಯೇ ಉಚಿತವಾಗಿ ಹೆರಿಗೆ ಕೂಡ ಆಗಿದೆ. ಪ್ರಸೂತಿ ತಜ್ಞೆ ಡಾ.ಪವಿತ್ರಾ ಅವರು ಯಾವುದೇ ನಯಾಪೈಸೆ ಖರ್ಚಿಲ್ಲದೇ ಹೆರಿಗೆ ಮಾಡಿದರು. ಜತೆಗೆ ಹೆರಿಗೆ ಸಂದರ್ಭದಲ್ಲಿ ಏನೇ ಸಂಶಯ ಮೂಡಿದರೂ ತಕ್ಷಣವೇ ಬಂದು ಬಗೆಹರಿಸುತ್ತಿದ್ದರು ಎಂದು ಪವಿತ್ರಾ ವಿಕಾಶ್ ತಿಳಿಸಿದರು.
ಗರ್ಭಿಣಿಯಾಗಿದ್ದ ನಾನು ಕಿಕ್ಕೇರಿಯಲ್ಲಿ ತಪಾಸಣೆ ಮಾಡಿಸುತ್ತಿದ್ದೆ. ಅಲ್ಲಿನ ವೈದ್ಯರು ಮೈಸೂರು ಆಥವಾ ಮಂಡ್ಯಕ್ಕೆ ಹೋಗುವಂತೆ ಸಲಹೆ ನೀಡಿದರು. ಆದರೆ ನಾನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ಬಂದು ತೋರಿಸಿದೆ. ಪ್ರಸೂತಿ ತಜ್ಞ ವೈದ್ಯರಾದ ಡಾ.ಪವಿತ್ರಾ ಅವರು ತಾವು ಸ್ವತ: ಗರ್ಭಿಣಿಯಾಗಿದ್ದರೂ ಪರೀಕ್ಷೆ ಮಾಡಿ ಸೀಜರಿನ್ ಹೆರಿಗೆ ಮಾಡಿ ಮಗು ಹೊರ ತೆಗೆದರು. ಇಷ್ಟಾದರೂ ನಯಾಪೈಸೆ ಪಡೆಯಲಿಲ್ಲ’ ಎಂದು ಅರುಣ ತಿಳಿಸಿದರು.
ಸನ್ಮಾನದ ವೇಳೆ ನರ್ಸ್ ಪುಷ್ಪಾಲತಾ, ಉಷಾ, ರಾಜೇಶ್ವರಿ, ನಾನ್ ಕ್ಲಿನಿಕಲ್ ಮೇಲ್ವಿಚಾರಕಿ ಎಲೆಕೆರೆ ಶುಭಾ, ಸಿಬ್ಬಂದಿಗಳಾದ ಸೌಮ್ಯ, ನಾಗರಾಜು ಇತರರಿದ್ದರು.




