Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕಸಾಪ ಅಧ್ಯಕ್ಷ ಜೋಶಿ ವಿರುದ್ದಆಕ್ರೋಶ ಸ್ಪೋಟ ; ಖರ್ಚು-ವೆಚ್ಚದ ಮಾಹಿತಿ ನೀಡಲು ಆಗ್ರಹ

ಮಂಡ್ಯ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತ ಪೂರ್ವ ಯಶಸ್ಸು ಕಂಡಿದೆ. ಆದರೆ ಸಮ್ಮೇಳನ ಮುಗಿದ ಬೆನ್ನಲ್ಲೇ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರು ತರಾತುರಿಯಲ್ಲಿ ಕಸಾಪ ಸಮಿತಿಯನ್ನು ರದ್ದು ಮಾಡಿರುವುದರ ಹಿಂದೆ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ, ಆದ್ದರಿಂದ ಸಮ್ಮೇಳನದ ಸಂಪೂರ್ಣ ಖರ್ಚು ವೆಚ್ಚವನ್ನು ರಾಜ್ಯದ ಜನರ ಮುಂದಿಡಬೇಕೆಂದು ಜನಪದ ಮತ್ತು ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಬಸವರಾಜು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮ್ಮೇಳನ ಮುಗಿದೊಡನೇ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ತೆಗೆದುಕೊಂಡಿರುವ ನಿರ್ಧಾರಗಳು ಜಿಲ್ಲೆಯ ಜನರ ಮನಸಿಗೆ ಘಾಸಿಯನ್ನುಂಟು,  ಮಾಡಿವೆ, ಸಮ್ಮೇಳನ ಮುಗಿಯುತ್ತಿದ್ದಂತೆ ಸಮಿತಿಯಿಂದ ಸಂಚಾಲಕರಾದ ಡಾ.ಮೀರಾಶಿವಲಿಂಗಯ್ಯ ಸೇರಿದಂತೆ ಹಲವರನ್ನು ಕೈ ಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಮಂಡ್ಯ ಜಿಲ್ಲೆಗೆ ಬಂದು ‘ಉಂಡು ಹೋದ ಕೊಂಡು ಹೋದ’ ಎಂದು ಆಸಾಮಿಯಂತೆ ಜೋಷಿ ವರ್ತಿಸುತ್ತಿರುವುದು ಮಂಡ್ಯ ಜಿಲ್ಲೆಯ ಸಮಸ್ತ ಸಾಹಿತ್ಯಾಸಕ್ತರಿಗೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದರು.

ಮಂಡ್ಯದ ಜನರ ಒಗ್ಗಟ್ಟನ್ನು ಹೊಡೆದ ಜೋಶಿ

ಮಂಡ್ಯ ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ವಿ ಸಮ್ಮೇಳನ ಸುಸಂಪನ್ನಗೊಂಡಿದ್ದು , ಲಕ್ಷಾಂತರ ಜನ ಈ ಸಮ್ಮೇಳನವನ್ನು ಕಣ್ತುಂಬಿಕೊಂಡು ಇಂತಹದೊಂದು ಸಮ್ಮೇಳನ ನಾವು ಹಿಂದೆಂದೂ ಕಂಡಿರಲಿಲ್ಲ ಎಂದು ಹಾಡಿ ಹೊಗಳುತ್ತಿರುವ ಸಂದರ್ಭವನ್ನು ಸಹಿಸಿಕೊಳ್ಳಲಾಗದ ಮಹೇಶ್ ಜೋಶಿಯವರು ಕಳೆದ ಆರು ತಿಂಗಳಿಂದ ಮಂಡ್ಯ ಜಿಲ್ಲೆಯ ಎಲ್ಲಾ ಆತಿಥ್ಯಗಳನ್ನ ಸ್ವೀಕರಿಸಿ ಇಂದು ಮಂಡ್ಯದ ಜನರ ಒಗ್ಗಟ್ಟನ್ನು ಹೊಡೆದು ಹಾಕಿ ನಮ್ಮೆಲ್ಲರ ಭಾವನೆಗಳ ಜೊತೆ ಆಟವಾಡುವ ಕೆಲಸಕ್ಕೆ ಇಳಿದಿದ್ದಾರೆ , ಇದು ಉಂಡು ಹೋದ ಕೊಂಡು ಹೋದ ಕಥೆಯ ನಾಯಕನನ್ನೇ ಮೀರಿಸುವ  ವರ್ತನೆಯಾಗಿದೆ ಎಂದು ಖಂಡಿಸಿದರು.

ಸರಿ ಸುಮಾರು ಆರು ತಿಂಗಳಗಳಿಂದ ಸಾಹಿತ್ಯ ಸಮ್ಮೇಳನದ ಕೆಲಸ ಕಾರ್ಯಗಳು ಆರಂಭಗೊಂಡಿದ್ದವು, ಈ ಆರು ತಿಂಗಳುಗಳಿಂದ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಸಮ್ಮೇಳನದ ಯಶಸ್ವಿಗೆ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡುವ ಬದಲು 86 ನೇ ಸಾಹಿತ್ಯ ಸಮ್ಮೇಳನ ಹಾಗೂ 87 ನೇ ಸಾಹಿತ್ಯ ಸಮ್ಮೇಳನಕ್ಕೆ ಹೋಲಿಕೆ ಮಾಡಿಕೊಂಡು ಹಾವೇರಿ ಮತ್ತು ಮಂಡ್ಯದ ಜನರ ನಡುವೆ ವೈಮಸ್ಸನ್ನು ಉಂಟು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ದೂರಿದರು.

ಸಮ್ಮೇಳಾಧ್ಯಕ್ಷರ ಪುಸ್ತಕಗಳೇ ಇರಲಿಲ್ಲ

ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರ ಬರವಣಿಗೆಯ ಕೆಲವು ಪುಸ್ತಕಗಳನ್ನ ಮರು ಮುದ್ರಣ ಮಾಡಿ ಸಾಹಿತ್ಯ ಸಮ್ಮೇಳನದಲ್ಲಿ ಮಾರಾಟ ಮಾಡಿಸುವ ಕನಿಷ್ಠ ಯೋಚನೆ ಜೋಶಿ ಮಾಡಿಲ್ಲ. ಇಡೀ ಸಮ್ಮೇಳನದಲ್ಲಿ ಗೊ ರು ಚನ್ನಬಸಪ್ಪನವರ ಒಂದೇ ಒಂದು ಪುಸ್ತಕವು ಸಹ ಮಳಿಗೆಗಳಲ್ಲಿ ಸಿಗದಂತೆ ಮಾಡಿರುವುದು ಜೋಶಿಯವರ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ದೂರಿದರು.

ಸಂಚಾಲಕರಿಗೆ ಅವಮಾನ

ಸರಕಾರ ಸಮ್ಮೇಳನಕ್ಕೆ ನಿಯೋಜಿಸಿದ್ದ ಹಣ ಬಿಡುಗಡೆಗೊಳ್ಳುವ ಮೊದಲು ಸಮ್ಮೇಳನಕ್ಕೆ ಹಣಕಾಸಿನ ವ್ಯವಸ್ಥೆ ಜೊತೆಗೆ ರಾಜ್ಯಾಧ್ಯಕ್ಷರ ಉಪಚರಿಸಲು ಸಾಕಷ್ಟು ಹಣಕಾಸಿನ ಸೌಲಭ್ಯ ಮಾಡಿದವರು ಜಿಲ್ಲಾ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ ಅವರು, ಆದರೆ ಇದರ ಪರಿವೆ ಇಲ್ಲದೆ ಹಲವಾರು ಬಾರಿ ಜಿಲ್ಲಾ ಸಂಚಾಲಕರನ್ನ ನೇರ- ನೇರಾ ಜೋಶಿ ಅವಮಾನಿಸುವ ಮೂಲಕ ಮಂಡ್ಯದವರ ಮನಸ್ಸಿನಲ್ಲಿ ಜೋಶಿ ಖಳನಾಯಕರಾಗಿದ್ದಾರೆ ಎಂದು ಕಿಡಿಕಾರಿದರು.

ಚಂದನ ವಾಹಿನಿಗೆ 7 ಲಕ್ಷ ಹಣ

ದೊಡ್ಡ ಮಟ್ಟದಲ್ಲಿ ಯಾವುದಾದರೂ ಒಂದು ಸಂಗೀತ ಕಾರ್ಯಕ್ರಮಗಳನ್ನು ನಡೆಸಿದರೆ ಆ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣವನ್ನು ಮಾಡಿ, ಆ ಕಾರ್ಯಕ್ರಮಕ್ಕೆ ತಗಲುವ ಎಲ್ಲ ವೆಚ್ಚಗಳನ್ನು ಟಿವಿ ವಾಹಿನಿಯವರೇ ವ್ಯವ್ಯಸ್ಥೆ ಮಾಡಿಕೊಳ್ಳುವುದು ವಾಡಿಕೆ. ಆದರೆ ಮಂಡ್ಯದಲ್ಲಿ ನಡೆದ ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮದ ಚಿತ್ರೀಕರಣ ಹಾಗೂ ಪ್ರಸಾರಕ್ಕೆ ಸುಮಾರು ಆರರಿಂದ ಏಳು ಲಕ್ಷ ರೂಪಾಯಿಗಳ ಹಣವನ್ನು ಸಾಹಿತ್ಯ ಪರಿಷತ್ತಿನಿಂದ ನೀಡಲಾಗಿದೆ, ಈ ಹಿಂದೆ ಅವರು ಆ ಚಾನಲ್ನಲ್ಲಿ ಕಾರ್ಯನಿರ್ವಹಿಸಿದ್ದರ ಪ್ರತಿಫಲವಾಗಿ ಈ ವಾಹಿನಿಗೆ ಸಾಹಿತ್ಯ ಸಮ್ಮೇಳನದಿಂದ ಬೋನಸ್ ನೀಡಿದ್ದಾರೆ, ಇದೊಂದು ಘನಂದಾರಿ ಕೆಲಸವೇ ಎಂದು ಪ್ರಶ್ನೆ ಮಾಡಿದರು.

ಮಂಡ್ಯ ಜಿಲ್ಲೆಯನ್ನು ಸಂಸ್ಥಾಪನೆ ಮಾಡಿದ ರಾಜರ್ಷಿ  ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಸ್ಥಾಪನೆ ಮಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಧ್ಯವಾದರೆ ಸಾಹಿತ್ಯ ಪರಿಷತ್ತಿನ ಗೌರವವನ್ನು ಕಾಪಾಡಿ, ಇಲ್ಲದಿದ್ದರೆ ಸಾಹಿತ್ಯ ಪರಿಷತ್ತಿನ ಗೌರವ ಹಾಳಾಗುವುದನ್ನು ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಮಂಡ್ಯದ ಕನ್ನಡ ಮನಸುಗಳು ಎಂದಿಗೂ ಸಹಿಸುವುದಿಲ್ಲ, ಕನ್ನಡ ನಾಡು ಭಾಷೆ, ನೆಲ, ಜಲ, ಸಂಸ್ಕೃತಿ ವಿಷಯದಲ್ಲಿ ಮಂಡ್ಯದವರಾದ ನಾವು ಅತಿ ಹೆಚ್ಚು ಭಾವನಾತ್ಮಕ ಸಂಬಂಧಗಳನ್ನ ಬೆಳೆಸಿಕೊಂಡಿದ್ದೇವೆ ಈ ಸಂಬಂಧಗಳ ಜೊತೆ ಮತ್ತೆ ಮತ್ತೆ ಆಟವಾಡುವ ಪ್ರಯತ್ನ ಒಳ್ಳೆಯದಲ್ಲ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಎಂ.ನಾಗರಾಜು, ಸಹಕಾರ್ಯದರ್ಶಿ ಡಿ.ಉಮಾಪತಿ, ರೋಜ್‌ಮೇರಿ, ಶ್ವೇತ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ