Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾರ್ಪೋರೇಟ್ ಕೈಗಳಲ್ಲಿ ವೈದ್ಯಕೀಯ ವೃತ್ತಿ ಕಲುಷಿತ : ಡಾ.ಜಗದೀಶ್ ಕುಮಾರ್

‘ನಾವು ವೈದ್ಯ ವೃತ್ತಿ ಪ್ರಾರಂಭಿಸಿದಾಗ ವೈದ್ಯಕೀಯ ಸಂಘದ ವತಿಯಿಂದ ‘ನಮ್ಮ ಬಳಿಗೆ ಬರುವ ವ್ಯಕ್ತಿಯ ತೊಂದರೆ ನಿವಾರಿಸುವುದಷ್ಟೆ ನಮ್ಮ ಕೆಲಸ’ ಎಂದು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಪ್ರಮಾಣ ಬೋಧಿಸಲಾಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ಆಗಿಲ್ಲ, ವೈದ್ಯಕೀಯ ವೃತ್ತಿ ಕಾರ್ಪೋರೇಟೀಕರಣಗೊಂಡಿದೆ, ಇದರಿಂದ ವೈದ್ಯ ಸಮೂಹಕ್ಕೆ ಕೆಟ್ಟ ಹೆಸರು ಬರುವಂತಹ ಸಂದಿಗ್ಧ ಪರಿಸ್ಥಿತಿ ಬಂದಿದೆ ಎಂದು ಮಕ್ಕಳ ತಜ್ಞ ಡಾ.ಪಿ.ಎಂ.ಜಗದೀಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ಮಂಡ್ಯನಗರದ ಸಂತೋಷ್ ಪಿಯು ಕಾಲೇಜು (ಕಾಳೇಗೌಡ ಪ್ರೌಢಶಾಲೆ) ಆವರಣದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ನಡೆದ ವೈದ್ಯರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ವೃತ್ತಿ ಈಗ ಕಲುಷಿತಗೊಂಡಿದೆ, ಈ ವೃತ್ತಿಯನ್ನ ಕಾರ್ಪೋರೆಟ್ ಕೈಗಳಿಗೆ ಕೊಟ್ಟು ಬಿಟ್ಟಿದ್ಧೇವೆ, ಇದು ಯಾರಿಂದ ಆಯ್ತೋ ಗೊತ್ತಿಲ್ಲ, ಆಗ್ಬಿಟ್ಟಿದೆ, ಇದು ಪೂರ್ತಿ ತಪ್ಪು ಎಂದು ಹೇಳುವುದಿಲ್ಲ, ಇಂದಿನ ದಿನಗಳಲ್ಲಿ ಎಲ್ಲವು ದುಬಾರಿಯಾಗಿದೆ. ಸರ್ಕಾರ ಎಲ್ಲರಿಗೂ ಎಲ್ಲಾ ಸೇವೆಯನ್ನು ಒದಗಿಸಲು ಸಾಧ್ಯವಿಲ್ಲ, ಆದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿಯೂ ಖಾಸಗಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಾಮಾನ್ಯ ರೈತನ ಮಕ್ಕಳು ಖಾಸಗಿಯವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇದಕ್ಕೆ ಸರ್ಕಾರವು ಕೂಡ ಕಾರಣವಾಗಿದೆ, ನಾವೂ ಕೂಡ ಕಾರಣವಾಗಿದ್ದೇವೆ ಎಂದರು.

ಪ್ರಸ್ತುತ ರೈತರಿಗೆ ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಅವರು ಬೆಳೆದ ಬೆಳೆಗಳನ್ನು ಸರಿಯಾದ ರೀತಿಯಲ್ಲಿ ಮಾರಾಟ ಮಾಡಲು ಆಗುತ್ತಿಲ್ಲ, ಹೀಗಾಗಿ ಅವರು ವಲಸೆ ಹೋಗುವಂತಹ ಪರಿಸ್ಥಿತಿ ಬಂದಿದೆ. ನಮ್ಮ ಕಾಲದಲ್ಲಿ 50 ಎಕರೆ ಭೂಮಿ ಇದ್ದವನೇ ರಾಜನಿದ್ದಂತೆ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ಈಗ ರೈತನಿಗೆ ವ್ಯವಸಾಯ ಮಾಡುವುದೇ ಕಷ್ಟವಾಗಿದೆ. ಅವರು ಕಷ್ಟದಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಇದೆ. ವ್ಯಾಪಾರಿಯೊಬ್ಬ ಕೇವಲ ಮೂರು ರೂಪಾಯಿಗೆ ಹಳ್ಳಿಯೊಂದರಿಂದ ಟೊಮೋಟೋವನ್ನು ಕೆ.ಜಿ.ವೊಂದಕ್ಕೆ 3 ರೂ. ನಂತೆ ಖರೀದಿಸಿ, ನಗರಕ್ಕೆ ಬಂದು ಕೆ.ಜಿ.ಗೆ 20 ರೂ.ಗೆ ಮಾರಾಟ ಮಾಡುತ್ತಿದ್ಧಾನೆ. ಇದರಲ್ಲಿ ವ್ಯಾಪಾರಿಯೊಬ್ಬ ಹೆಚ್ಚು ಲಾಭ ಪಡೆಯುತ್ತಿದ್ದಾನೆ. ಆದರೆ ರೈತ ಸಾಲಗಾರನಾಗುತ್ತಿದ್ದಾನೆ ವಿವರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡರವರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಮೈಸೂರಿನ ಡಾ.ವಿ.ಶರತ್ ಕುಮಾರ್, ಡಾ. ಎಚ್.ವಿ. ಪೂಜಾ, ಡಾ. ಚೈತ್ರ, ಡಾ.ಕೆ. ಪಲ್ಲವಿ, ಡಾ. ಮುರಳಿ, ಡಾ.ಮೋನಿಷಾ, ಬೆಂಗಳೂರಿನ ಡಾ. ಅರ್ಪಿತ, ಡಾ. ಪ್ರತಾಪ್ ಮಹದೇವ್ ಗೌಡ, ನಂಜನಗೂಡಿನ ಡಾ. ಸಿ.ಆರ್. ಅಮೂಲ್ಯ, ಮಂಡ್ಯದ ಡಾ ಕೆ. ಚಂದನ್, ಡಾ. ಜಿ.ಆರ್. ಮಾಲಾ, ಡಾ. ಕೆ.ಎಲ್. ಚೇತನ್ ಕುಮಾರ್, ಸಿ. ನಂದೀಶ್ ಕುಮಾರ್, ಡಾ. ಧನುಷ್ ಗೌಡ ರವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂತೋಷ್ ಪಿಯು ಕಾಲೇಜಿನ ಪ್ರಾಂಶುಪಾಲ ಬಿ. ಸಂತೋಷ್, ನಂಜನಗೂಡಿನ ಮಿಂಚು ಆರೋಗ್ಯ ಕೇಂದ್ರದ ಸಿ.ಎಸ್. ರವಿ, ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಸಿ. ಶ್ರೀಧರ್, ಕ್ಯಾತುಂಗೆರೆ ಬಡಾವಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಆರ್. ಶಶಿಕಲಾ, ಕಿವಿ, ಮೂಗು, ಗಂಟಲು ರೋಗಗಳ ತಜ್ಞ ಡಾ. ಸಿ. ನಿಂಗಯ್ಯ, ಡಾ. ತನುಶ್ರೀ, ಡಾ.ಎಂ.ಎಸ್. ರಾಜೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ