ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಅಲ್ಲಿಗೆ ರಾಷ್ಟ್ರ, ರಾಜ್ಯದಿಂದ ಬರುವ ಪ್ರತಿನಿಧಿಗಳಿಗೆ ಮಾತ್ರ ಸೀಮಿಗೊಳಿಸದೇ ಜಿಲ್ಲೆಯ ೧೨ರಿಂದ ೨೨ರ ವಯೋಮಾನದ ವಿದ್ಯಾರ್ಥಿ ಯುವಕರಿಗೆ ಸಾಹಿತ್ಯ ಸಮ್ಮೇಳನದ ಮಹತ್ವವನ್ನು, ಸಾಹಿತ್ಯದ ಪ್ರೀತಿಯನ್ನು ಬೆಳೆಸುವ, ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರು ಪ್ರತಿ ಜಿಲ್ಲೆಯಿಂದ ೫೦ ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಕರೆತರುವ ಕೆಲಸ ಮಾಡಬೇಕು ಎಂದು ಎಂದು ಹಿರಿಯ ಸಾಹಿತಿ ಡಾ.ಪ್ರದೀಪ್ಕುಮಾರ್ ಹೆಬ್ರಿ ಸಲಹೆ ನೀಡಿದರು.
ಮಂಡ್ಯ ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಎಂಬುದ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ, ಬೆಂಗಳೂರು ಎಂಬುದಾಗಿ ಬದಲಾಯಿಸಬೇಕಾಗಿ ಅಪೇಕ್ಷೆ, ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಮೂಡುವಂತೆ ಮಾಡದೇ ಹೋದರೆ, ಸಾಹಿತ್ಯ ಸಮ್ಮೇಳನ ಮಾಡಿ ಯಾವ ಸಾರ್ಥಕತೆಯೂ ಇರುವುದಿಲ್ಲ. ನಮ್ಮ ಮಕ್ಕಳಲ್ಲಿ ಸಾಹಿತ್ಯ ಪ್ರೀತಿಯನ್ನು ಹುಟ್ಟಿಸದೇ ಹೋದರೆ, ಬರೆಯುವವರ ಸಂಖ್ಯೆ ಹೆಚ್ಚಾಗಿ ಓದುವವರ ಸಂಖ್ಯೆ ಕ್ಷೀಣಿಸುಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಗೆ ತರುವಲ್ಲಿ ರವಿಕುಮಾರ್ ಚಾಮಲಾಪುರ ಅವರ ಕೊಡುಗೆ ಹೆಚ್ಚಿದೆ. ಅಂತೆಯೇ ಕಳೆದ ಬಾರಿ ಜಿಲ್ಲೆಯಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಜಿ.ಮಾದೇಗೌಡರು ದುಡಿದಿದ್ದು, ಇಬ್ಬರೂ ನಮ್ಮೊಡನೆ ಇದ್ದಾರೆ ಎಂಬ ಭಾವನೆಯೊಂದಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳೋಣವೆಂದು ಕರೆ ನೀಡಿದರು.
ಸಮ್ಮೇಳನದ ವಿಷಯವಾಗಿ ನಮ್ಮಲ್ಲಿನ ಅಂಕುಡೊಂಕುಗಳನ್ನು, ಓರೆಕೋರೆಗಳು, ತಪ್ಪುಒಪ್ಪುಗಳನ್ನು ನಮ್ಮ ಸೀಮಿತ ಚೌಕಟ್ಟಿನಲ್ಲಿರಿಕೊಂಡು ಮಂಡ್ಯದ ಕೀರ್ತಿ ನಾಡಿನಾದ್ಯಂತ ಹರಡುವಂತೆ ಸಮ್ಮೇಳನ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲಿ ನಡೆಯುತ್ತಿರುವುದು ಸಾಕಷ್ಟು ಸದ್ದು ಮಾಡಲು ನಾವೆಲ್ಲ ಕಾರಣವಾಗುತ್ತೇವೆ. ನಮ್ಮ ಉದ್ದೇಶ, ನಿರ್ಧಾರ, ಆಶಯಗಳ ಒತ್ತಾಯವನ್ನು ಮಾಡದಿರುವುದರಿಂದ ಈ ರೀತಿಯ ಚರ್ಚೆಗಳಿಗೆ ಕಾರಣವಾಗುತ್ತಿದೆ. ಏನು ಆಗಿಲ್ಲ ಎಂಬುದನ್ನು ಬಿಟ್ಟು ಏನು ಮಾಡಬೇಕಿದೆ ಎಂಬುದನ್ನು ರಾಜ್ಯಾಧ್ಯಕ್ಷರಿಗೆ ಸಲಹೆ ನೀಡೋಣವೆಂದು ಹೇಳಿದರು.
ಈ ಹಿಂದೆ ಹಳೆಗನ್ನಡ ಕವಿಗಳು ಸಾಹಿತಿಗಳಾದ ಸಮ್ಮೇಳನಾಧ್ಯಕ್ಷರು, ಪೀಠಾಧ್ಯಕ್ಷರನ್ನು ದಿವ್ಯಾಸಾನಿಧ್ಯ ವಹಿಸದಂತೆ ಹೇಳಿದ್ದು, ಮತ್ತೇ ಸಮ್ಮೇಳನದ ಅಂತ್ಯದಲ್ಲಿ ತಮ್ಮ ಮಗಳಿಗೆ ಮಠದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೇಳಿದ ಪ್ರಸಂಗ ನಡೆದಿದೆ. ಮತ್ತೊಂದು ಪ್ರಸಂಗದಲ್ಲಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರೋರ್ವರು ಸಮಾರೋಪ ಸಮಾರಂಭಕ್ಕೆ ಬರಬೇಕಾದರೆ, ಮಠಾಧೀಶರು ಬರದಂತೆ ಹೇಳಿ, ಒಂದು ವರ್ಷದ ನಂತರ ಸಾಹಿತ್ಯ ಪರಿಷತ್ನ ಅಧ್ಯಕ್ಷ ಚುನಾವಣೆಯಲ್ಲಿ ಅದೇ ಮಠಾಧೀಶರಿಗೆ ಪತ್ರ ಬರೆದು ಅವರ ಭಕ್ತ ಸಾಹಿತಿಗಳು ಮತ ಹಾಕುವಂತೆ ಮನವಿ ಮಾಡಿರುತ್ತಾರೆ ಎಂದು ಸಾಹಿತಿಯ ವೈಯಕ್ತಿಕ ಸಾಧನೆ ಮುಖ್ಯವಲ್ಲ, ಸಾಹಿತ್ಯ ಲೋಕಕ್ಕೆ ನೀಡುವ ಕೊಡುಗೆಯ ಆಧಾರದ ಮೇಲೆ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
೮೬ ಸಾಹಿತ್ಯ ಸಮ್ಮೇಳನದ ಪಟ್ಟಿಯಲ್ಲಿ ಸಮ್ಮೇಳನ ನಡೆದ ಜಿಲ್ಲೆಯ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿಲ್ಲ, ಎಲ್ಲೇ ಇದ್ದರೂ ನಾವು ಕನ್ನಡ ನಾಡಿನವರು ಎಂದ ಪ್ರೀತಿಯೊಂದಿಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿ, ಆದರೆ ವ್ಯಕ್ತಿಯು ಸಾಹಿತ್ಯದ ಮೂಲಕ ಆಧ್ಯಾತ್ಮಿಕ, ಭೌತಿಕ, ಸಾಮಾಜಿಕ, ಸಾಹಿತ್ಯಿಕ ನೀಡುವ ಉತ್ತೇಜನದ ಆಧಾರದ ಮೇಲೆ ಸಮ್ಮೇಳನಾಧ್ಯಕ್ಷರ ಆಯ್ಕೆಯಾಗಲಿ. ಸಮ್ಮೇಳನದ ಅಧ್ಯಕ್ಷನ್ನು ಸಮ್ಮೇಳನದ ಸರ್ವಾಧ್ಯಕ್ಷರು ಎಂದು ಹೇಳಲಾಗುತ್ತಿದೆ. ಆದರೆ ಅದು ಕನ್ನಡ ಸಾಹಿತ್ಯದ ಸರ್ವಾಧ್ಯಕ್ಷತೆ ಎಂದು ಹೇಳಿದರು.
ನನ್ನ ಅಭಿಪ್ರಾಯದಲ್ಲಿ ಮಂಡ್ಯ ನಗರದಲ್ಲೇ ಸಾಹಿತ್ಯ ಸಮ್ಮೇಳನ ಆಗಬೇಕು. ನಗರದ ಹೊರಗಾಗುವುದು ಅಪ್ರಸ್ತುತ, ಮಂಡ್ಯ ವಿಶ್ವವಿದ್ಯಾಲಯದ ಆವರಣದ ಉತ್ತಮವಾಗಿದ್ದು, ಪಕ್ಕದ ಶಂಕರಗೌಡ ರಸ್ತೆಯು ಪುಸ್ತಕ ಮಾರಾಟ ಮಗಳಿಗಳನ್ನು ಇಡಲು ಸೂಕ್ತ ಸ್ಥಳವಾಗಿದೆ. ಊಟ ಹೊಟ್ಟೆಗೆ ಬೇಕು. ಸಮ್ಮೇಳನದಲ್ಲಿ ಊಟಕ್ಕೆ ಪ್ರಾಮುಖ್ಯತೆ ನೀಡದೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಎಂದು ತಿಳಿಸಿದರು.
ಸಮ್ಮೇಳನದ ಪ್ರತಿನಿಧಿಗಳಾಗುವವರು ಸಮ್ಮೇಳನದಲ್ಲಿ ಭಾಗವಹಿಸಬೇಕು. ಪ್ರವಾಸ ಮಾಡುವ ಉದ್ದೇಶ ಹೊಂದಬಾರದು, ಸಮ್ಮೇಳನದ ಪ್ರತಿನಿಗಳು ಕಡ್ಡಾಯವಾಗಿ ಪುಸ್ತಕಕೊಳ್ಳುವಂತೆ ಆಗಬೇಕು. ಪುಸ್ತಕ ಕೊಂಡವರಿಗೆ ಮಾತ್ರ ಊಟದ ಕೂಪನ್ ನೀಡುವಂತಹ ಕೆಲಸವಾಗಲಿ ಎಂದರು.
ಕನ್ನಡ ಸಾಹಿತ್ಯ ಎಂದೊಡನೆ ಓದುವುದು ಮಾತ್ರವಲ್ಲ, ಜಾನಪದ, ಸಂಗೀತ, ರಂಗಭೂಮಿ, ಲಲಿತ ಕಲೆ, ಪ್ರವಾಸ ಕೇಂದ್ರ ಎಲ್ಲವನ್ನು ಒಳಗೊಂಡಂತ ಮನೋಭಾವನೆ ಇಟ್ಟುಕೊಂಡಾಗ ಸಾಹಿತ್ಯಕ್ಕೆ ದೊಡ್ಡ ಸೇವೆ ಮಾಡಿದಂತಾಗುತ್ತದೆ. ನಮ್ಮ ಕಿರಿಯರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ನಮ್ಮ ಹೆಜ್ಜೆ ಗುರುತುಗಳನ್ನು ನೀಡುವುದು ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷರಾಗುವವರು, ಮುಂದಿನ ಸಮ್ಮೇಳನ ನಡೆಯುವವರೆಗೂ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳಲ್ಲಿ ಅಧಿಕೃತ ವ್ಯಕ್ತಿಯಾಗಿ ಇರಬೇಕು. ಸಮ್ಮೇಳನಾಧ್ಯಕ್ಷರಾಗಿ ಸಮ್ಮೇಳನದ ನಿರ್ಣಯಗಳನ್ನು ಜಾರಿ ಮಾಡುವವರೆಗೂ ಮುಂದಿನ ಸಮ್ಮೇಳನ ನಡೆಯದಂತೆ ಎಚ್ಚರವಹಿಸಬೇಕು. ಸಮ್ಮೇಳನ ನಿರ್ಣಯಗಳು ಜಾರಿಗೆ ೭ ಕೋಟಿ ಜನತೆಯೂ ಒಕ್ಕೊರಲಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ಕೆ.ಎನ್.ನವೀನ್ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಇದ್ದರು.




