Monday, September 23, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾಗಬಾರದು: ಡಾ.ಪುಷ್ಪ ಅಮರ್ ನಾಥ್

ಮಂಡ್ಯ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದು ಎಂದು ಮೈಸೂರು ವಿಭಾಗ, ರಾಜ್ಯಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದ ಪ್ರಮುಖ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಐದು ಯೋಜನೆಗಳಿಗಾಗಿ ಸಾಕಷ್ಟು ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರವನ್ನು ರಚಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಫಲಾನುಭವಿಗಳ ಹೆಸರು ಯೋಜನೆಯಲ್ಲಿ ಬಿಟ್ಟು ಹೋಗಿದ್ದರೆ ಆದಷ್ಟು ಬೇಗ ಅಂತಹ ಹೆಸರುಗಳನ್ನೂ ಸೇರ್ಪಡೆ ಮಾಡುವ ಕೆಲಸವಾಗಬೇಕು ಎಂದರು.

ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು

ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರ ಮೇಲೆ ಕ್ರಮ ಕೈಗೊಳ್ಳಿ. ಪಡಿತರ ಅಂಗಡಿಗಳಲ್ಲಿ ಯಾವುದೇ ರೀತಿಯ ಅನ್ಯಾಯ ನಡೆಯದಂತೆ ನಿಗಾವಹಿಸಬೇಕು. ಈ ಯೋಜನೆಯಡಿ ಸಾರ್ವಜನಿಕರಿಗೆ ನೀಡುವ ಪಡಿತರದ ತೂಕದಲ್ಲಿ ಮೋಸವಾಗಬಾರದು. ಅಧಿಕಾರಿಗಳು ಪಡಿತರ ವಿತರಣಾ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ತಿಂಗಳಿಗೊಮ್ಮೆ ಗ್ಯಾರಂಟಿ ಅದಾಲತ್ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕ ಹಾಗೂ ಪಾರದರ್ಶಕವಾಗಿ ತಲುಪಿಸಲು ತಿಂಗಳಿಗೊಮ್ಮೇ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಅದಾಲತ್ ಮಾಡಬೇಕಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯ ಅನುದಾನ ಬಿಡುಗಡೆ ಹಾಗೂ ವೆಚ್ಚದ ವಿವರ

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 2023 ಆಗಸ್ಟ್ ಮಾಹೆಯಿಂದ 2024 ಜೂನ್ ಮಾಹೆವರೆಗೆ ಒಟ್ಟು 4,50,734 ಅರ್ಹ ಫಲಾನುಭವಿಗಳಿದ್ದು, ಅದರಲ್ಲಿ 4,41,952 ಫಲಾನುಭವಿಗಳು ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗಾಗಿ ಸರ್ಕಾರದಿಂದ ಈಗಾಗಲೇ 949.82 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಶೇ.98.05 ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.

ಗೃಹಲಕ್ಷ್ಮಿ ಹಣ ಜೂ.2024 ರವರೆಗೂ ಪಾವತಿಯಾಗಿದೆ. ಕಳೆದೆರಡು ತಿಂಗಳಿಂದ ಪಾವತಿಯಾಗಿಲ್ಲ. ಕೆಲ ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ  ಹೆಬ್ಬಳ್ಕಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ 2 ಕಂತಿನ ಹಣ ಬಿಡುಗಡೆಯಾಗುವುದು ಎಂದರು.

ಬಡವರಿಗೆ ತುಂಬಾ ಉಪಯೋಗ

ಸಭೆಯಲ್ಲಿ ಫಲಾನುಭವಿಗಳು ಐದು ಗ್ಯಾರಂಟಿ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅನ್ನ ಭಾಗ್ಯ ಯೋಜನೆಯು ಬಡವರಿಗೆ ತುಂಬಾ ಉಪಯೋಗವಾಗಿದೆ. ಜೊತೆಗೆ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆಗಳಿಂದ ಒಂದು ಕುಟುಂಬಕ್ಕೆ ತಿಂಗಳಿಗೆ ಸುಮಾರು ರೂ. 3,500 ರಿಂದ 4,000 ಹಣವನ್ನು ಉಳಿತಾಯ ಮಾಡುತಿದ್ದು, ಉಳಿತಾಯದ ಹಣದಿಂದ ತುರ್ತು ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ಜೀವವಿಮೆ, ಔಷದ,ಕುರಿ,ಹಸು ಸಾಕಾಣಿಕೆ ಮಾಡುತ್ತಿದ್ದೇವೆ. ಈ ಐದು ಯೋಜನೆಗಳಿಂದ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತಿದೆ ಎಂದರು.

ಶಕ್ತಿಯೋಜನೆಯಿಂದ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ ಕಛೇರಿ, ಆಸ್ಪತ್ರೆ, ಶಾಲಾಕಾಲೇಜು, ಇನ್ನಿತರ ಕೆಲಸ ಕಾರ್ಯಗಳಲ್ಲಿ ಬೇರೊಬ್ಬರ ಮೇಲೆ ಅವಲಂಬಿತವಾಗಿರದೆ, ನಮ್ಮ ಕೆಲಸದಲ್ಲಿ ನಾವು ತೊಡಗಬಹುದು. ಶಕ್ತಿ ಯೋಜನೆಯಡಿಯಲ್ಲಿ ಹೆಚ್ಚು ಬಸ್ಸುಗಳು ಇರುವುದರಿಂದ ನಮ್ಮ ಸಮಯವೂ ಸಹ ಉಳಿತಾಯವಾಗುತ್ತದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಫಲಾನುಭವಿಗಳು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಗೃಹ ಜ್ಯೋತಿ ಯೋಜನೆಯಿಂದ ನಮಗೆ ಬಹಳ ಅನುಕೂಲವಾಗಿದೆ ಗೃಹ ಜ್ಯೋತಿ ಯೋಜನೆ ಬರುವುದಕ್ಕೂ ಮೊದಲು ತಿಂಗಳಿಗೆ 600-800 ರೂ ಕರೆಂಟ್ ಬಿಲ್ ಪಾವತಿ ಮಾಡುತ್ತಿದ್ದೆವು ಆದರೆ ಈಗ ಈ ಯೋಜನೆಯಿಂದ ತಿಂಗಳಿಗೆ ಬಹಳ ಕಮ್ಮಿ ಕರೆಂಟ್ ಬಿಲ್ ಬರುತ್ತಿದೆ ಇದರಿಂದ ಪ್ರತಿಯೊಂದು ಮನೆಗೂ ಅನುಕೂಲವಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ವರದಿಯ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ, ಉಪಾಧ್ಯಕ್ಷರಾದಪ್ರಶಾಂತ್, ರಾಜೇಂದ್ರ ಎಸ್ ಹೆಚ್, ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!