ಜಾನಪದ ಕುರಿತು ರಾಜ್ಯದ ಯಾವುದೇ ವಿದ್ಯಾರ್ಥಿ ಮಾತನಾಡಿದರೂ ರಾಗೌ, ಜೀಶಂಪ ಅವರನ್ನು ಬಿಟ್ಟು ಮಾತನಾಡಲು ಸಾಧ್ಯವೇ ಇಲ್ಲ. ಕನ್ನಡ ಜಾನಪದ ಅಧ್ಯಯನಕ್ಕೆ ಒಂದು ಅದ್ಭುತವಾದ ನೆಲೆಗಟ್ಟನ್ನು ರಾಗೌ ಒದಗಿಸಿಕೊಟ್ಟಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ಅಧ್ಯಕ್ಷತೆಯಲ್ಲಿ ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಡಾ. ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಗೌ, ಜೀಶಂಪ, ಹಾ.ಮಾ. ನಾಯಕರು ಮೈಸೂರು ವಿಶ್ವವಿದ್ಯಾಲಯವನ್ನು ಕಟ್ಟಿದ್ದಾರೆ. ನಮ್ಮ ಕಣ್ಣೇದುರಿಗೆ ಅದು ಎದ್ದು ಕಾಣುತ್ತದೆ. ಹಾಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ತೆಗೆದುಕೊಳ್ಳುವುದು ಹೆಮ್ಮೆಯ ವಿಚಾರ. ರೌಗೌ ಅವರದು ಕವಿ ಹೃದಯ, ಉತ್ತಮ ವಿಮರ್ಶಕ ಹಾಗೂ ನಾಟಕಕಾರರು ಆಗಿದ್ದಾರೆ. ಆದರೆ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ಡಾ. ರಾಗೌ ಸಾಹಿತ್ಯ ಪ್ರಶಸ್ತಿಯಯನ್ನು ಡಾ.ಪದ್ಮಶೇಖರ್ ಅವರಿಗೆ ಹಾಗೂ ಕೆ. ಸಿಂಗಾರಿಗೌಡರವರ ಪುಸ್ತಕ ಪ್ರಶಸ್ತಿಯ್ನು ಖ್ಯಾತ ವಿದ್ವಾಂಸ ಡಾ. ಕೆ. ರವೀಂದ್ರನಾಥ ಅವರಿಗೆ ಡಾ. ಪುರುಷೋತ್ತಮ ಬಿಳಿಮಲೆ ಅವರು ಪ್ರದಾನ ಮಾಡಿದರು.
ವೇದಿಕೆಯಲ್ಲಿ ಕೆ.ಎಸ್. ಆನಂದ್, ಚಂದಗಾಲು ಲೋಕೇಶ್, ಎಂ.ಎಸ್. ಅನಿತಾ, ಎಂ.ಕೆ. ಹರೀಶ್ ಕುಮಾರ್, ಎಚ್.ಡಿ. ಸೋಮಶೇಖರ್, ಮಂಜುಳಾ ಉದಯಶಂಕರ್, ಬಾಲಕೃಷ್ಣ, ಕೆ. ಜಯರಾಮು, ಡಾ. ಕೆಂಪಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.




