ಕವಿಗೆ ಸೃಜನಶೀಲತೆಯ ಜೊತೆ ತಾತ್ವಿಕತೆ ಮುಖ್ಯ, ಆದರೆ ತಾತ್ವಿಕತೆಯನ್ನು ಹಿನ್ನೆಲೆಗೆ ಸರಿಸಿ ಮೃತ್ಯುಂಜಯ ಅವರು ಕಾವ್ಯಗಳನ್ನು ರಚನೆ ಮಾಡಿದ್ದಾರೆ ಎಂದು ಬೆಂಗಳೂರು ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ಡಾ.ಬಿ. ಆರ್.ರವಿಕಾಂತೇಗೌಡ ಹೇಳಿದರು.
ಮಂಡ್ಯ ನಗರದ ಹೋಟೆಲ್ ಚಾಣಕ್ಯ ಸಭಾಂಗಣದಲ್ಲಿ ಮಂಡ್ಯ ತಾಲೂಕಿನ ಮಂಗಲ ಗ್ರಾಮದ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಪ್ರಕಟಿಸಿರುವ ಕವಿ ಕೆ.ಪಿ.ಮೃತ್ಯುಂಜಯ ಅವರ ಎಂಟನೇ ಕವನ ಸಂಕಲನ ”ಎಲೆಗಳ ತರಹ ಬಾಳುವುದಾದರೆ” ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮೃತ್ಯುಂಜಯ ಅವರು ಕಾವ್ಯದ ಆಸಕ್ತಿ ಅಲ್ಲದೆ ಬದುಕುವ ರೀತಿ ಕಳೆದ ನಾಲ್ಕು ದಶಕಗಳಿಂದ ಧ್ಯಾನವನ್ನಾಗಿ ಬದುಕಿನ ಮಾರ್ಗವನ್ನು ಮಾರ್ಪಡಿಸಿ ಕೊಂಡು ಕನ್ನಡ ಕಾವ್ಯ ಪ್ರಪಂಚಕ್ಕೆ 500ಕ್ಕೂ ಹೆಚ್ಚು ಕವನಗಳನ್ನು ಕೊಟ್ಟಿದ್ದಾರೆ. 500 ಪದ್ಯಗಳನ್ನು ಕನ್ನಡ ಕಾವ್ಯ ವ್ಯಾಪ್ತಿಯೊಳಗೆ ಬರೆಯುವುದು ಕಷ್ಟದ ಕೆಲಸ. ಇಂತಹವರಿಗೆ ಕನ್ನಡ ಕಾವ್ಯ ಪ್ರಪಂಚದ ಒಳಗೆ ಗೌರವ ಸಿಗದೇ ಇರುವುದು ಬೇಸರದ ಸಂಗತಿ ಎಂದರು.
ಉದ್ಯೋಗದ ಜೊತೆ ಸ್ಪರ್ಧಾ ಸಮಾಜದಲ್ಲಿ ಪ್ರತಿಷ್ಠೆಗಾಗಿ ನೆಲೆ ನಿಲ್ಲಲು ಹೋರಾಟದ ನಡುವೆ ಕಾವ್ಯಶೀಲತೆ ಉಳಿಸಿಕೊಳ್ಳುವುದು ವ್ಯಕ್ತಿಗೆ ಸವಾಲು, ಜೀವದಾತು ಇರಬೇಕು ಅದನ್ನು ಕಾಯ್ದುಕೊಂಡು ಕವನ ಬರೆದಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು, ಎಲೆಮರೆಕಾಯಿಯಂತಿರುವ ಸಾಹಿತಿಗಳು ಬರೆದಿರುವ ಕೃತಿಗಳನ್ನು ಕೊಂಡು ಓದುವ ಹವ್ಯಾಸಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಿ, ಆಧುನೀಕರಣದ ಡಿಜಿಟಲ್ ಪ್ರಭಾವದಿಂದಾಗಿ ಪುಸ್ತಕಗಳನ್ನು ಕೊಂಡು ಓದುವುದು ಕಡಿಮೆಯಾಗಿದೆ. ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕು. ಜಿಲ್ಲೆಯ ಸಾಹಿತ್ಯ ಸೊಗಡಿನಲ್ಲಿ ಕೆ.ಪಿ.ಮೃತ್ಯುಂಜಯ ಅವರ ಸಾಧನೆ ಮೆಚ್ಚಬೇಕು. ಉತ್ತಮವಾಗಿ ಕವಿತೆಗಳನ್ನು ರಚನೆ ಮಾಡಿದ್ದಾರೆ. ಒಂದು ಕವಿತೆ ಬರೆಯುವುದು ಸುಲಭದ ಕೆಲಸವಲ್ಲ. ಮೃತ್ಯುಂಜಯ ಅವರು 500 ಕವಿತೆ ಬರೆದಿದ್ದಾರೆ.
ಕೃತಿ ಕುರಿತು ಬೆಂಗಳೂರು ಜ್ಞಾನ ಭಾರತಿ ವಿದ್ಯಾನಿಲಯದ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಬಿ.ಎನ್.ಶ್ರೀಕೀರ್ತಿ ಮಾತನಾಡಿದರು. ಕವಿ ಕೆ.ಪಿ.ಮೃತ್ಯುಂಜಯ ಅವರು ಸಂಕಲನದ ನಾಲ್ಕು ಕವಿತೆಗಳನ್ನು ವಾಚನ ಮಾಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕ ಆನಂದ ಸಿ.ಹೆಗಡೆ, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ಪ್ರಕಾಶಕ ಮಂಗಲ ಎಂ.ಯೋಗೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಎಂ.ಎಸ್.ಅನಿತಾ ಕಾರ್ಯಕ್ರಮ ನಿರೂಪಿಸಿದರು. ಚನ್ನನಕೆರೆ ಲಿಂಗಪ್ಪ ವಂದನಾರ್ಪಣೆ ಸಲ್ಲಿಸಿದರು.




