Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸಿ- ಡಾ.ಸೋಮಶೇಖರ್

ದೇವರು ಕೊಟ್ಟಿರುವಂಥ ಕಣ್ಣನ್ನ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು, ಯಾವುದೇ ರೀತಿ ಸಮಸ್ಯೆ ಕಂಡು ಬಂದಾಗ ತಕ್ಷಣವೇ ಹತ್ತಿರದ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು, ಎಲ್ಲರೂ ತಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಿ, ನಿಮ್ಮ ನಂತರ ಈ ಕಣ್ಣನ್ನು ದೃಷ್ಟಿಹೀನರಿಗೆ ಅನುಕೂಲವಾಗುವಂತೆ ನೇತ್ರದಾನ ಮಾಡಿ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್ ತಿಳಿಸಿದರು.

ಮಂಡ್ಯ ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಣ್ಣಿನ ವಿಭಾಗ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ ರೋಟರಿ ಮಂಡ್ಯ ಇವರು ಸಹಯೋಗದಲ್ಲಿ ವಿಶ್ವ 24ನೇ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೆಲಸ ಮಾಡುವಾಗ ನಿಮ್ಮ ಕಣ್ಣುಗಳನ್ನು ಪ್ರೀತಿಸಿ” ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ ಎಂದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಣ್ಣಿನ ವಿಭಾಗದ ತಜ್ಞ ಡಾ.ಧನಂಜಯ ಮಾತನಾಡಿ, ಕಣ್ಣು ದೇಹದ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ನಾವೆಲ್ಲ ಅಗತ್ಯ ಎಚ್ಚರ ವಹಿಸಿ ಜೀವಿಸಬೇಕು, 40 ವಯಸ್ಸಿನ ನಂತರ ಎಲ್ಲರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಅಗತ್ಯವಿರುವವರು ಕನ್ನಡಕ ಧರಿಸಬೇಕು, ಹಾಗೆಯೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, 6 ತಿಂಗಳಿಗೊಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು, ಪಟಾಕಿ ಇನ್ನಿತರ ವಸ್ತುಗಳಿಂದ ತೊಂದರೆಗೀಡಾದರೆ ತಕ್ಷಣವೇ ತಣ್ಣೀರಿನಿಂದ ಕಣ್ಣನ್ನು ತೊಳೆದುಕೊಂಡು ನಂತರ ಹತ್ತಿರವಿರುವ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮುಖ್ಯ ಡಿಫೆನ್ಸ್ ಕೌನ್ಸಿಲ್ ನ ಅಡ್ವೊಕೇಟ್ ಬಿ.ಕೆ.ಗಣಪತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಿ ಇಂದಿನ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡೆಸಿಕೊಳ್ಳಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಕಾರಾಗೃಹ ನಿವಾಸಿಗಳ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಿರಂತರವಾಗಿ ವಿವಿಧ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಮಮತಾ ಎಚ್ಎಂ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್ ಟಿವಿ, ಡಾ.ಪ್ರಾರ್ಥನ, ಡಾ.ಶ್ರೇಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ.ವೇಣುಗೋಪಾಲ್, ಜಿಲ್ಲಾ ಸಲಹೆಗಾರರಾದ ತಿಮ್ಮರಾಜು, ರೋಟರಿ ಮಂಡ್ಯದ ಅಧ್ಯಕ್ಷರಾದ ಅನುಪಮಾ, ರಾಜೇಶ್, ಲಕ್ಕಪ್ಪಗೌಡ, ಮಂಡ್ಯ ಜಿಲ್ಲಾ ಅಂಧತ್ವ ನಿಯಂತ್ರಣ ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!