Saturday, October 19, 2024

ಪ್ರಾಯೋಗಿಕ ಆವೃತ್ತಿ

ಧರ್ಮಾಚರಣೆ ನೆಪದಲ್ಲಿ ಹೆಣ್ಣುಮಕ್ಕಳ ಮೇಲೆ ಮೌಢ್ಯ ಹೇರಿಕೆ : ಡಾ.ಯೋಗೇಂದ್ರ ಕುಮಾರ್

ಪ್ರಸ್ತುತ ವೈಜ್ಞಾನಿಕ ಯುಗದಲ್ಲಿರುವ ಭಾರತದಲ್ಲಿ ಸಂಪ್ರದಾಯ ಹಾಗೂ ಧರ್ಮಾಚರಣೆ ನೆಪದಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಮೇಲೆ ಹತ್ತು ಹಲವು ಮೌಢ್ಯ ಆಚರಣೆಗಳನ್ನು ಹೇರಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಯೋಗೇಂದ್ರ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ನಗರದಲ್ಲಿರುವ ಪಿ.ಇ.ಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಹಿಳಾ ಕುಂದು ಕೊರತೆ ವಿಭಾಗದ ವತಿಯಿಂದ ಆಯೋಜಿಸಿದ್ದ ಹೆಣ್ಣು ಮಕ್ಕಳ ಶುಚಿತ್ವ-ಚಕ್ರಾಸ್ರಾವದ ಬಗ್ಗೆ ಹಾಗೂ ಇನ್ನಿತರ ಹದಿಹರೆಯದ ಸಮಸ್ಯೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಾಹೀರಾತು

ವೈಜ್ಞಾನಿಕ ಯುಗದಲ್ಲೂ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ವಿಚಾರದಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಶೋಷಣೆ ನಡೆಸಲಾಗುತ್ತಿದೆ, ಹದಿಹರೆಯದ ಹೆಣ್ಣು ಮಕ್ಕಳ ಜೀವನದಲ್ಲಿ ಋತುಚಕ್ರ ಮತ್ತು ಋತುಸ್ರಾವ ಒಂದು ಸಹಜ ದೈಹಿಕ ಪ್ರಕ್ರಿಯೆಯಾಗಿದ್ದು, ಇಂತಹ ಸಂದರ್ಭದಲ್ಲಿ ಅವರನ್ನು ಪ್ರತ್ಯೇಕವಾಗಿ ಇಡುವುದು, ಸಾಂಪ್ರದಾಯಿಕ ಕುಟುಂಬದ ಸಂಭ್ರಮಾಚರಣೆಯಲ್ಲಿ ಕಂಡು ಬರುತ್ತಿದೆ, ಮಾನಸಿಕವಾಗಿ ಬಳಲಿಸುವ ಅನಿಷ್ಠ ಪದ್ದತಿಗಳನ್ನು ಹೆಣ್ಣು ಮಕ್ಕಳ ಮೇಲೆ ಹೇರಲಾಗಿದೆ ಎಂದು ತಿಳಿಸಿದರು.

ಮೌಢ್ಯ ಹಾಗೂ ಅನಿಷ್ಠ ಪದ್ಧತಿಗಳಿಂದ ಹೊರಬಂದು, ವಿಜ್ಞಾನದ ತಳಹದಿಯ ಮೇಲೆ ಹೆಣ್ಣು ಮಕ್ಕಳು ಆರೋಗ್ಯದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯವಿದೆ, ಪೌಷ್ಠಿಕ ಆಹಾರ ಪದ್ಧತಿಯಿಂದ ದೈಹಿಕ ಕ್ಷಮತೆ ಹೆಚ್ಚುತ್ತದೆ, ಮನೆಯ ಆಹಾರ ಪದಾರ್ಥಗಳಿಂದ ಆರೋಗ್ಯ ಕಾಪಾಡಿಕೊಳ್ಳುವುದು, ಯೋಗ, ಧ್ಯಾನ., ನಿಯಮಿತವಾದ ಆರೋಗ್ಯಕರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪ್ರತಿದಿನ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಭಾರತದಲ್ಲಿ ಇರುವಂತ ಕಾನೂನುಗಳು ಹಾಗೂ ಹೆಣ್ಣು ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಆರೋಗ್ಯ ಸೌಲಭ್ಯಗಳು ಕುರಿತ ಮಾಹಿತಿಯನ್ನು ತಿಳಿದುಕೊಳ್ಳಿ, ”ಆರೋಗ್ಯದ ಅರಿವು ಹೊಂದಿದ ಹೆಣ್ಣು ಮಗಳು ಕುಟುಂಬದ ವೈದ್ಯರು” ಎಂಬ ಸಂದೇಶನ್ನು ಮರೆಯದಿರಿ, ಹೆಣ್ಣು ಮಕ್ಕಳ ಆರೋಗ್ಯ ಅಭಿವೃದ್ಧಿಯೇ ಈ ದೇಶದ ಆರೋಗ್ಯ ಸ್ಥಿತಿಗತಿಯ ದಾರಿದೀಪವಾಗಿದೆ ಎಂದು ಪುನರುಚ್ಚರಿಸಿದರು.

ಪಿ.ಇ.ಟಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೆ ಆರ್ ದಯಾನಂದ್, ಕಾಲೇಜಿನ ಹೆಣ್ಣು ಮಕ್ಕಳ ಆರೋಗ್ಯ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಹಾಗೆಯೇ ಅವರು ಮಾನಸಿಕ ಹಾಗೂ ಆರೋಗ್ಯದ ಅರಿವನ್ನು ಪಡೆಯಬೇಕೆಂದು ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ವಿದ್ಯಾರ್ಥಿನಿಯರು ಅನೇಕ ಸಮಸ್ಯೆಗಳನ್ನು ಚೀಟಿಯಲ್ಲಿ ಬರೆದು ತಮ್ಮ ಪ್ರಶ್ನೆಗಳಿಗೆ ಉತ್ತರ ಹಾಗೂ ಮಾಹಿತಿಯನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಜಿ.ಮಹದೇವ, ಪ್ರೊ.ಮಹಾಲಕ್ಷ್ಮಿ, ಉಪನ್ಯಾಸಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!