Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಆ.20ಕ್ಕೆ ಫೂಲನ್ ದೇವಿ ನಾಟಕ ಪ್ರದರ್ಶನ

ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವ ಮೂಲಕ ಮಹಿಳಾ ಸಬಲೀಕರಣ, ಸಶಕ್ತತೆ ಮೂಡಿಸುತ್ತ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ನೆಲದನಿ ಬಳಗ ಹಲವು ವರ್ಷಗಳಿಂದ ಮುಂಚೂಣಿಯಲ್ಲಿದೆ.

ಇದರ ಮತ್ತೊಂದು ಪ್ರಯತ್ನವಾಗಿ “ಮಹಿಳೆಯರು ನಾವು ಅಬಲೆಯರಲ್ಲ ಸಬಲೆಯರು, ಗಂಡು ಹೆಣ್ಣೆಂಬ ಭೇದ ತೊರೆದು, ಅಸಮಾನತೆಯ ಅಡ್ಡಗೋಡೆಗಳನ್ನೊಡೆದು, ಭೂಮಿ ಸೀಳಿ ಬರುವ ಬೀಜದಂತೆ” ಹೆಣ್ಣೊಬ್ಬಳು ತನ್ನ ಸಮಸ್ಯೆಗಳನ್ನು ಮೀರಿ ಬದುಕ ಕಟ್ಟಿಕೊಳ್ಳಬೇಕು ಎನ್ನುವ ಸಶಕ್ತಿ ಬೀಜವನ್ನು ಬಿತ್ತುವ ನಿಟ್ಟಿನಲ್ಲಿ ನೆಲದನಿ ಬಳಗ ವು ಎಸ್.ಡಿ.ಜಯರಾಮ್ ರವರ 73ನೇ ವರ್ಷದ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಮಂಡ್ಯದಲ್ಲಿ ಫೂಲನ್ ದೇವಿ ಜೀವನಾಧಾರಿತ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರಂಗಪಯಣ ತಂಡವು ನಾಟಕವನ್ನು ಪ್ರಸ್ತುತ ಪಡಿಸಲಿದೆ.

ಆ.20ರಂದು ಸಂಜೆ 6-15 ಗಂಟೆಗೆ ಮಂಡ್ಯ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರ ನಾಟಕ ಪ್ರದರ್ಶನ ನಡೆಯಲಿದ್ದು, ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ನಾಟಕ ಪ್ರದರ್ಶನ ಉದ್ಘಾಟಿಸುವರು. ನೆಲದನಿ ಬಳಗ ಖಜಾಂಚಿ ಮಹಾಲಕ್ಷ್ಮಿ ಕೋಮಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ಸಾಹಿತಿ ತೈಲೂರು ವೆಂಕಟಕೃಷ್ಣ ಅವರನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್‌ ಅಭಿನಂದಿಸುವರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಎಸ್.ಆತ್ಮಾನಂದ, ರೈತ ಹೋರಾಟಗಾರ್ತಿ ಸುನಂದ ಜಯರಾಮ್‌, ಮಿಮ್ಸ್‌ ಮೂಳೆ ಮತ್ತು ಕೀಲುರೋಗ ತಜ್ಞ ಡಾ.ರವಿಕುಮಾರ್, ಸ್ಪಂದನ ಆಸ್ಪತ್ರೆ ನಿರ್ದೇಶಕ ಆದಿತ್ಯಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಜನಶಕ್ತಿ ಸಂಘಟನೆ ಮತ್ತು ಮಹಿಳಾ ಮುನ್ನಡೆ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಪಿತಾ ಅಜಿತ್ ಕುಮಾರ್, ಸಮರ್ಥನ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ, ಪತ್ರಕರ್ತರಾದ ಎಂ.ಎನ್.ಯೋಗೇಶ್, ನವೀನ್ ಕುಮಾರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ನಿರ್ದೇಶಕ ಮಂಜು ಮಲ್ಲಿಗೆರೆ ಭಾಗವಹಿಸುವರು.

ಫೂಲನ್ ದೇವಿಯವರ ಜೀವನಾಧಾರಿತ ಈ ನಾಟಕವನ್ನು ರಾಜ್ ಗುರು ವಿನ್ಯಾಸಿಸಿ ಸಂಗೀತದ ಮೂಲಕ ರಂಗರೂಪ ನೀಡಿ, ನಿರ್ದೇಶಿಸಿದ್ದು, ನಯನ ಸೂಡ ನಿರ್ವಹಿಸಿದ್ದಾರೆ. ಎಂ.ಎನ್.ನವೀನ್ ಬೆಳಕಿನ ಸಂಯೋಜನೆ ಮಾಡಿದ್ದು, ಜಯರಾಜ್ ಹುಸ್ಕೂರು ಪ್ರಸಾದನವಿದೆ. ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ರಂಗಾಸಕ್ತರು ಆಗಮಿಸಿ ನಾಟಕ ಪ್ರದರ್ಶನ ವೀಕ್ಷಣೆ ಮಾಡಬೇಕೆಂದು ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ