Monday, November 23, 2026

ಪ್ರಾಯೋಗಿಕ ಆವೃತ್ತಿ

ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಚಾಲನೆ: ಸಚಿವ ಚಲುವರಾಯಸ್ವಾಮಿ

ಕಾಂಗ್ರೆಸ್ ಸರ್ಕಾರ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಚಾಲನೆ ನೀಡಲಾಗುವುದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ‌ತಿಳಿಸಿದರು.

ಮಂಡ್ಯನಗರದ ಹೊಸಹಳ್ಳಿ ಶಾಲೆಯಲ್ಲಿ ಶುಕ್ರವಾರ ಸರ್ಕಾರದ ನೂತನ ಕಾರ್ಯಕ್ರಮವಾದ ವಿದ್ಯಾರ್ಥಿಗಳಿಗೆ ಪೂರಕ ಪೋಷಣ ಪೌಷ್ಠಿಕ ಆಹಾರಗಳಾದ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಯ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ದೃಷ್ಠಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು ಹಾಗೂ ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಮುಂದೆ ಇರುವ ಗೃಹ ಜ್ಯೋತಿ, ಶಕ್ತಿ, ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆಗಳೇ ಉದಾಹರಣೆಗಳಾಗಿವೆ ಎಂದರು.

ಸರ್ಕಾರಿ ಶಾಲೆಯ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುವುದು. ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯಲ್ಲಿ ಹಮ್ನಿಕೊಂಡಿರುವುದು ಸಂತೋಷದ ವಿಷಯ ಎಂದರು.

ಕೃಷಿ ಇಲಾಖೆಯಲ್ಲೂ ರೈತರಿಗೆ ಪೂರಕವಾಗಿ ಕೃಷಿ ಭಾಗ್ಯ ಸೇರಿದಂತೆ ಇನ್ನಿತರ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯಲ್ಲಿ ಮೈಶುಗರ್ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲಾಗುವುದು.
ಮಂಡ್ಯ ಜಿಲ್ಲೆಯಲ್ಲಿ‌ ಕಾಮಗಾರಿಗಳ ಹಣ ಪಾವತಿಗಾಗಿ ಲೋಕೋಪಯೋಗಿ ಇಲಾಖೆಗೆ ರೂ10 ಕೋಟಿ, ಜಿಲ್ಲಾ ಪಂಚಾಯತ್ ಗೆ 10 ರಿಂದ 15 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ.ಬಿ ಕಾವೇರಿ, ಪ್ರಧಾನಮಂತ್ರಿ ಘೋಷಣ್ ಶಕ್ತಿ ನಿರ್ಮಾಣದ ನಿರ್ದೇಶಕರಾದ ಸುಬ ಕಲ್ಯಾಣ್, ವಿಧಾನ ಪರಿಷತ್ ಶಾಸಕ ಮಧು ಜಿ. ಮಾದೇಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ