Tuesday, September 17, 2024

ಪ್ರಾಯೋಗಿಕ ಆವೃತ್ತಿ

ಅಬುದಾಭಿ| ದುಬೈ ಕನ್ನಡಿಗ ರಫೀಕಲಿಗೆ ಕೋವಿಡ್ ಹೀರೋಸ್ ಪ್ರಶಸ್ತಿ

ಕೋವಿಡ್ ಕಾಲದಲ್ಲಿ ದುಬೈ ಪೊಲೀಸರು ಮತ್ತು ದುಬೈ ಹೆಲ್ತ್ ಅಥಾರಿಟಿ ಜೊತೆ ಸೇರಿ ಮಾಡಿದ ಸಮಾಜ ಸೇವೆಗಾಗಿ ವತನನಿ ಅಲ್ ಎಮರಾಥಿ ಸಂಸ್ಥೆ ವತಿಯಿಂದ ದುಬೈ ಎಕ್ಸ್ಪೋ ವೇದಿಕೆಯಲ್ಲಿ ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ರಾಶಿದ್ ಅಲ್ ಮಕ್ತುಮ್ ಅವರು ನೇರವಾಗಿ ಪಾಲ್ಗೊಂಡ ಕೋವಿಡ್ ವಾಲಂಟೀರ್ಸ್ ಧನ್ಯತಾ ಸಮಾರಂಭದಲ್ಲಿ ರಫೀಕಲಿ ಕುಂಡಂಡ ಕುಂಜಿಲ ಅವರು ಕೋವಿಡ್ ಹೀರೋಸ್ ಪ್ರಶಸ್ತಿ ಪಡೆದಿದ್ದಾರೆ, ಪ್ರಶಸ್ತಿಯನ್ನು ಶೇಕ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಹುಮಾನಿಟೇರಿಯನ್ ಅಂಡ್ ಚಾರಿಟಿ ಕಚೇರಿಗೆ ತೆರಳಿ ಪಡೆದುಕೊಂಡರು.

ಕೋವಿಡ್ ಕಾಲದಲ್ಲಿ ತಮ್ಮ ಮನೆಯ ಬಾಗಿಲ ಹೊರಗೆ ಸಹ ಬರಲು ಹೆದರುತ್ತಿದ್ದ ಸಮಯದಲ್ಲಿ, ತಿಂಗಳುಗಟ್ಟಲೆ ಹೊರಹೋಗಲಾಗದೆ ಊಟಕ್ಕೂ ಸಹ ಕಷ್ಟಪಡುತ್ತಿದ್ದ ಜನರಿಗೆ ಮತ್ತು ಕೋವಿಡ್ ಸೋಂಕು ಹಿಡಿದು ಸಂಕಷ್ಟದಲ್ಲಿದ್ದ ಜನರಿಗೆ ತಮ್ಮ ಆರೋಗ್ಯವನ್ನು ಚಿಂತಿಸದೆ ರಸ್ತೆಗೆ ಇಳಿದು, ಅನ್ನ, ನೀರು ಮತ್ತು ಔಷಧಿಗಳನ್ನು ತಲುಪಿಸಿದ್ದ ಹಾಗೂ ಕೋವಿಡ್ ಸೋಂಕಿತರನ್ನು ಆಸ್ಪತ್ರೆ ಸೇರಿಸುವ ಕೆಲಸದಲ್ಲಿ ನಿರತರಾಗಿದ್ದ ದೇಶ ವಿದೇಶದ ಸಾವಿರಾರು ಕೋವಿಡ್ ಸ್ವಯಂ ಸೇವಕರಿಗೆ ಧನ್ಯತೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಖುದ್ದು ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರು ಪಾಲ್ಗೊಂಡು ಧನ್ಯವಾದಗಳನ್ನು ತಿಳಿಸಿದರು.

ದುಬೈ ಕನ್ನಡಿಗ ರಫೀಕಲಿ  ಕಿರು ಪರಿಚಯ

ರಫೀಕಲಿ ಸಂಯುಕ್ತ ಅರಬ್ ಸಂಸ್ಥಾನದ ಕನ್ನಡಿಗರಿಗೆ ಚಿರಪರಿಚಿತ ವ್ಯಕ್ತಿ, ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ರಫೀಕಲಿ ಅವರು ಮೂಲತಃ ಕೊಡಗಿನ ಕುಂಡಂಡ ಮನೆತನ ಕುಂಜಿಲ ಕಕ್ಕಬೆ ಗ್ರಾಮಕ್ಕೆ ಸೇರಿದವರಾಗಿದ್ದಾರೆ.

ಕನ್ನಡ ಮಾದ್ಯಮದಲ್ಲೇ ಶಿಕ್ಷಣ ಪಡೆದ ಇವರು, ತಮ್ಮ ಪದವಿ ಶಿಕ್ಷಣವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಿಂದ ಪಡೆದಿರುತ್ತಾರೆ, ಇವರ ತಂದೆ ಹೆಸರು ಆಲಿ ಮತ್ತು ತಾಯಿ ಫಾತಿಮ, 7ಜನ ಮಕಳಲ್ಲಿ ಇವರು ಕೊನೆಯ ಪುತ್ರರಾಗಿದ್ದಾರೆ, 7ಭಾಷೆಗಳನ್ನು ಮಾತನಾಡುತ್ತಾರೆ, ಕೊಡವ ಮುಸ್ಲಿಂ ಜನಾಂಗಕ್ಕೆ ಸೇರಿದ ಇವರ ಮನೆ ಭಾಷೆಯು ಕೊಡವ ತಕ್ಕ್ ಮತ್ತು ಮಲಯಾಳಂ ಮಿಶ್ರಿತ ಕೊಡವ ಮಲಯಾಳವಾಗಿದೆ.

ಕಾವೇರಮ್ಮನ ಮಡಿಲಿನಿಂದ ಅರಬರ ಮರಳುಗಾಡಿನ ಮಾಯಾನಗರಿ ದುಬೈಯಲ್ಲಿ ಕಳೆದ 15 ವರ್ಷಗಳಿಂದ ಗ್ರೀಸ್ ಮೂಲದವರ ಕಂಪನಿಯಲ್ಲಿ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿದ್ದು ಮತ್ತು ಕರ್ನಾಟಕ ಟ್ರಾವೆಲ್ಸ್ ದುಬೈ ಎಂಬ ಸಂಸ್ಥೆಯ ಮಾಲಿಕರಾಗಿದ್ದು ಬಿಡುವಿನ ವೇಳೆಯಲ್ಲಿ ಕನ್ನಡಪರ ಮತ್ತು ಮಾನವೀಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ, ಹೆಮ್ಮೆಯ ದುಬೈ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಮುಖ್ಯ ಸಂಚಾಲಕರಾಗಿ, ಹಾಗೆ ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಹಲವು ಸಾಮಾಜಿಕ ಧಾರ್ಮಿಕ ಸಂಸ್ಥೆ ಮತ್ತು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೈನಂದಿನ ಜೀವನವನ್ನು ಕಟ್ಟಿಕೊಳ್ಳಲು ತಾಯ್ನಾಡನ್ನು ಬಿಟ್ಟು ಅರಬರ ಮಣ್ಣಿಗೆ ತೆರಳಿದವರಿಗೆ ಎಂತಹ ಅಪತ್ ಕಾಲದಲ್ಲೂ ರಾತ್ರಿ ಹಗಲೆನ್ನದೆ ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವ ಮನಸ್ಸಿರುವವರು ನೆಚ್ಚಿನ ರಫೀಕಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!