Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಹಣಗಳು ನಿಸರ್ಗದ ಭೌತಿಕ ಕ್ರಿಯೆ:ಲೋಕೇಶ್

ಗ್ರಹಣಗಳು ನಿಸರ್ಗದ ಭೌತಿಕ ಕ್ರಿಯೆಯಾಗಿದ್ದು, ಇದಕ್ಕೂ ಮನುಷ್ಯನ ಜೈವಿಕ ಕ್ರಿಯೆಗೆ ಯಾವುದೇ ಸಂಬಂಧವಿಲ್ಲ.ಆದರೆ ಮನುಷ್ಯನಲ್ಲಿ ಮೂಢ ನಂಬಿಕೆ ಬಿತ್ತಲು ಗ್ರಹಣಗಳು ಜ್ಯೋತಿಷಿಗಳಿಗೆ ಒಳ್ಳೆಯ ಆಹಾರವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಣಿತ ಪರಿವೀಕ್ಷಕ ಎಸ್.ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಸದ್ವಿದ್ಯಾ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಸಹಯೋಗದಲ್ಲಿ ನಡೆದ ಸೂರ್ಯಗ್ರಹಣ ವೀಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಹಣಗಳು ನಿಸರ್ಗದ ಭೌತಿಕ ಕ್ರಿಯೆ, ಇದಕ್ಕೂ ಮನುಷ್ಯನ ಜೈವಿಕ ಕ್ರಿಯೆಗೂ ಯಾವ ಸಂಬಂಧವಿಲ್ಲ.ಗ್ರಹಣದ ಸಂದರ್ಭದಲ್ಲಿ ನಾವು ತಿಂದ ಆಹಾರ ನಿರಾಯಾಸವಾಗಿ ಜೀರ್ಣವಾಗುತ್ತದೆ. ನಾವೆಲ್ಲ ಮೌಢ್ಯವನ್ನು ಬಿಟ್ಟು ನಿಸರ್ಗವನ್ನು ಅರ್ಥಮಾಡಿ ಕೊಳ್ಳೋಣ ಎಂದರು.

ಪ್ರತಿ ವರ್ಷ ಏಳು ಗ್ರಹಣಗಳು ನಡೆಯುತ್ತದೆ. ಅದರಲ್ಲಿ ನಾಲ್ಕು ಸೂರ್ಯಗ್ರಹಣಗಳಾದರೆ, ಮೂರು ಚಂದ್ರ ಗ್ರಹಣ ಆಗುತ್ತದೆ. ಇಲ್ಲವಾದರೆ ಮೂರು ಸೂರ್ಯ ಗ್ರಹಣ ನಾಲ್ಕು ಚಂದ್ರಗ್ರಹಣ ವಾಗುತ್ತದೆ. ಇಂದು ಅಕ್ಟೋಬರ್ 25ರಂದು ಸೂರ್ಯಗ್ರಹಣವಾದರೆ ನವಂಬರ್ 8ಕ್ಕೆ ಚಂದ್ರಗ್ರಹಣವಿದೆ. ಒಂದೇ ತಿಂಗಳ ಅವಧಿಯಲ್ಲಿ ಎರಡು ಗ್ರಹಣಗಳು ಸಂಭವಿಸುತ್ತಿದೆ ಎಂದರು.

ರಾಹು-ಕೇತುಗಳು ನಕ್ಷತ್ರಗಳನ್ನು ನುಂಗುತ್ತವೆ ಎಂದು ಹಿಂದಿನವರು ನಂಬಿದ್ದರು. ವಾಸ್ತವವಾಗಿ ರಾಹು-ಕೇತು ಸೂರ್ಯ ಮತ್ತು ಚಂದ್ರನ ಹಾದಿಯಲ್ಲಿ ಛೇದಿಸುವ ಬಿಂದುಗಳು. ಮೇಲ್ಗಡೆ ಛೇದಿಸುವ ಬಿಂದು ಇದ್ದರೆ ರಾಹು, ಕೆಳಗಡೆ ಛೇದಿಸುವ ಬಿಂದು ಇದ್ದರೆ ಅದು ಕೇತು ಗ್ರಹಣವಾಗುತ್ತದೆ. ಇಂದು ನಡೆದಿರುವುದು ಕೇತುಗ್ರಸ್ಥ ಗ್ರಹಣ. ಸೂರ್ಯನ ಜೊತೆ ಶುಕ್ರ, ಬುಧ, ಚಂದ್ರ ಗ್ರಹವೂ ಇದೆ. ಇದರಿಂದಾಗಿಯೇ ಜ್ಯೋತಿಷಿಗಳಿಗೆ ಇದನ್ನು ಹೆಚ್ಚು ಬಳಸಿಕೊಳ್ಳಲು ಆಹಾರವಾಗಿದೆ ಎಂದರು.

ಪಾರ್ಶ್ವ ಸೂರ್ಯ ಗ್ರಹಣವಾಗಿರುವುದರಿಂದ ನಾವು ಬೆಳಕನ್ನು ನೋಡುತ್ತಿದ್ದೇವೆ. ಇದೇ ಉತ್ತರ ಭಾಗದಲ್ಲಿ ಇದ್ದಿದ್ದರೆ ಸಂಪೂರ್ಣವಾಗಿ ಸೂರ್ಯಕಾಣದಂತಾಗಿ ಕತ್ತಲು ಆವರಿಸುತ್ತಿತ್ತು. ಇಂದು ಶೇ. 15 ರಷ್ಟು ಮಾತ್ರ ಗ್ರಹಣವಾಗಿದೆ. ಸೂರ್ಯ ಕಾಣಿಸದಿದ್ದರೆ ಸೂರ್ಯಗ್ರಹಣ, ಚಂದ್ರ ಕಾಣಿಸದಿದ್ದರೆ ಚಂದ್ರಗ್ರಹಣ. ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಬಂದರೆ ಸೂರ್ಯ ಗ್ರಹಣವಾಗುತ್ತದೆ. ಅಮಾವಾಸ್ಯೆಯ ದಿನ ನಡೆಯುವುದು ಸೂರ್ಯಗ್ರಹಣ ಎಂದು ತಿಳಿಸಿದರು.

ಸದ್ವಿದ್ಯಾ ಶಾಲೆಯ ಸಂಸ್ಥಾಪಕ ಹರೀಶ್ ಕುಮಾರ್ ಮಾತನಾಡಿ, ಗ್ರಹಣದ ಬಗ್ಗೆ ಸಾರ್ವಜನಿಕರಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ವಿಜ್ಞಾನದ ವಿಷಯಗಳನ್ನು ನಮ್ಮ ಶಾಲೆಯ ಮಕ್ಕಳಿಗೆ ಪರಿಚಯ ಮಾಡಿ ಕೊಡುವ ಇಂತಹ ಕಾರ್ಯಕ್ರಮ ಆಯೋಜಿಸಲು ಸದಾ ಸಿದ್ಧ ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಗ್ರಹಣ ನೋಡಿ ಸಂತಸ ಪಟ್ಟರು. ಗ್ರಹಣದ ಸಂದರ್ಭದಲ್ಲಿ ನೆರೆದವರಿಗೆ ಲಘು ಉಪಹಾರ ನೀಡುವ ಮೂಲಕ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲಾಯಿತು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಕಾಡೆಮಿಯ ಕಾರ್ಯದರ್ಶಿ ಜಯಶಂಕರ್, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಹಾಗೂ ಪಟಾಕಿಯನ್ನು ಬಳಸದಂತೆ ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವಾಧ್ಯಕ್ಷ ಡಾ.ಎನ್.ರಾಮಲಿಂಗಯ್ಯ, ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಗೌರವಾಧ್ಯಕ್ಷ ಡಾ.ಬಿ.ಕೆ. ಸುರೇಶ್, ಅಧ್ಯಕ್ಷ ಡಾ. ಎಂ. ಜಯರಾಮು, ಸದ್ವಿದ್ಯ ಶಾಲೆಯ ಟ್ರಸ್ಟಿ ಫಣಿಮಾಲ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!