ಅತಿವೃಷ್ಟಿ, ಅನಾವೃಷ್ಟಿ ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳಲ್ಲಿ ಬೆಳೆ ನಷ್ಟ ಸಂಭವಿಸಿದರೆ, ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಒದಗಿಸುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲ ಕೃಷ್ಣ ಸಲಹೆ ನೀಡಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 2022-23 ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ದಿನಾಂಕ ನಿಗಧಿಪಡಿಸಲಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಬೇಕು. 2022-23 ನೇ ಸಾಲಿನ ಮುಂಗಾರು ಹಂಗಾಮಿನಿಲ್ಲಿ 31,687 ರೈತರು, 67.53 ಲಕ್ಷ ರೂ. ಮೊತ್ತದ ವಿಮೆ ಪಾವತಿಸಿದ್ದು, 27,077 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ನೋಂದಣಿ ಮಾಡಲಾಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ಈ ವರ್ಷ ಅತಿವೃಷ್ಠಿಯಿಂದ ಪ್ರತಿ ಹಂತದಲ್ಲೂ ರೈತರಿಗೆ ತೊಂದರೆಯಾಗುತ್ತಿದೆ. ಬದಲಾಗುತ್ತಿರುವ ಹವಮಾನದಲ್ಲಿ ಫಸಲ್ ಬೀಮಾ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಒಂದು ಎಕರೆ ರಾಗಿಗೆ ರೂ.231 ಪಾವತಿಸಿ, 15,379 ರೂ.ಗಳ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಕಳೆದ 3 ವರ್ಷಗಳಲ್ಲಿ ಜಿಲ್ಲೆಯ ಎಲ್ಲಾ ಹಂಗಾಮುಗಳಲ್ಲಿ 55,571 ರೈತರು, 47,286 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ಮಾಡಿಸಿದ್ದು, 1,37,60 ಲಕ್ಷ ರೂ. ಪ್ರೀಮಿಯಂ ಪಾವತಿ ಮಾಡಿದ್ದಾರೆ. 2,146 ಲಕ್ಷ ರೂ. ಪರಿಹಾರ ಪಡೆದಿದ್ದಾರೆ ಎಂದರು.
ಹಿಂಗಾರು ಹಂಗಾಮು ಭತ್ತ ( ನೀರಾವರಿ) ಎಕರೆಗೆ 522 ರೂ, ಹೆಕ್ಟೇರಿಗೆ 1,290 ರೂ. ಹಾಗೂ ರಾಗಿ (ನೀರಾವರಿ) ಎಕರೆಗೆ ರೂ.279, ಹೆಕ್ಟೇರಿಗೆ ರೂ. 690 ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನಾಂಕವಾಗಿದೆ. ರಾಗಿ (ಮಳೆ ಆಶ್ರಿತ) ಎಕರೆಗೆ 231 ರೂ., ಹೆಕ್ಟೇರಿಗೆ 570 ರೂ. ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು ನವೆಂಬರ್ 5 ಕೊನೆಯ ದಿನವಾಗಿದೆ. ಹುರುಳಿ (ಮಳೆಆಶ್ರಿತ) ಎಕರೆಗೆ 109 ರೂ., ಹೆಕ್ಟೇರಿಗೆ 270 ರೂ. ಹಾಗೂ ಟೊಮ್ಯಾಟೊ ಎಕರೆಗೆ ರೂ. 2,388, ಹೆಕ್ಟೇರಿಗೆ 5,900 ರೂ. ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ ಎಂದರು.
ಬೇಸಿಗೆ ಹಂಗಾಮು ಭತ್ತ (ನೀರಾವರಿ) ಎಕರೆಗೆ ರೂ.522 , ಹೆಕ್ಟೇರಿಗೆ ರೂ. 1,290, ರಾಗಿ (ನೀರಾವರಿ) ಎಕರೆಗೆ ರೂ. 279, ಹೆಕ್ಟೇರಿಗೆ ರೂ 690 ಹಾಗೂ ಟೊಮ್ಯಾಟೊ ಎಕರೆಗೆ ರೂ. 2,388, ಹೆಕ್ಟೇರಿಗೆ ರೂ.5,900, ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು 2023ರ ಫೆಬ್ರವರಿ 28 ಕೊನೆಯ ದಿನಾಂಕ ಆಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಶಾಂತ ಎಲ್. ಹುಲ್ಮನಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




