Friday, September 20, 2024

ಪ್ರಾಯೋಗಿಕ ಆವೃತ್ತಿ

‘’ಎದ್ದೇಳು ಕರ್ನಾಟಕ’’ದ ಅಭಿನಂದನಾ ಸಮಾವೇಶದಲ್ಲಿ ಇಚ್ಛಾಶಕ್ತಿಯ ಅನಾವರಣ – ಸಂಕಲ್ಪಶೀಲ ಮನಸ್ಸುಗಳ ಸಮಾಗಮ

ಸ್ವಾತಂತ್ರ್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿಯವರ ಎರಡನೇ ವಾರ್ಷಿಕ ಸ್ಮರಣ ದಿನ ವಾದ ಮೇ 26ರಂದು ಬೆಂಗಳೂರಿನಲ್ಲಿ ನಡೆದ ‘‘ಎದ್ದೇಳು ಕರ್ನಾಟಕ’’ದ ಅಭಿನಂದನಾ ಸಮಾವೇಶವು ಇಚ್ಛಾಶಕ್ತಿಯ ಅನಾವರಣದಂತೆ ಕಂಡು ಬಂದಿತು.

“ದಿಸ್ ಈಸ್ ದ ಬಿಗಿನಿಂಗ್, ದೇರ್ ವಿಲ್ ಬಿ ನೋ ಯು ಟರ್ನ್” ಎಂಬ ದೃಢ ವಿಶ್ವಾಸದ ಜೊತೆಗೆ ‘ಎದ್ದೇಳು ಕರ್ನಾಟಕ’ದ ಕೇಂದ್ರ ಕಾರ್ಯಕಾರಿ ಮಂಡಳಿ ಸದಸ್ಯೆ ತಾರಾ ರಾವ್ ಅವರು ಎಲ್ಲರನ್ನೂ  ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಹಳೆ ಕಂಠದ ಬಿ.ಜಯಶ್ರೀ ಅವರು ಮುಗಿಲೆತ್ತರದ ಪಿಚ್ಚಿನಲ್ಲಿ ಹಾಡಿದ “ಬೆಟ್ಟ ಬಿಟ್ಟಿಳಿಯುತ್ತ ಚಾಮುಂಡಿ…” ಎಂಬ ಹಾಡಿನ ಚರಣ ಹಾಗೂ ಇನ್ನೊಂದು ಹಾಡು ಸಭೆಯನ್ನು ಸ್ಫೂರ್ತಿಯ ಉತ್ತುಂಗಕ್ಕೆ ಒಯ್ದಿತು. “ನಾನೂ ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿ ವಿಜಯಮ್ಮ ಅವರ ಪಾದ ಮುಟ್ಟಿ ನಮಿಸುವ ಮೂಲಕ ಅವರು ತಮ್ಮ ನೆಲೆ-ನಿಲುವನ್ನು ಬಹಳ ವಿನಯಪೂರ್ವಕವಾಗಿ ಹಂಚಿಕೊಂಡರು.

nudikarnataka.com

ಮೇರು ಚೇತನಗಳಿಗೆ ನಿಜವಾದ ಶ್ರದ್ಧಾಂಜಲಿ
ಎಚ್.ಎಸ್. ದೊರೆಸ್ವಾಮಿ ಅವರ ಜೊತೆಜೊತೆಗೇ ಗೌರಿ ಲಂಕೇಶ್ ಮತ್ತು ಎ.ಕೆ. ಸುಬ್ಬಯ್ಯ ಅವರ ಫೋಟೊಗಳಿಗೂ ಪುಷ್ಪಾರ್ಚನೆ ಮಾಡಿ, “ನೀವುಗಳು ಇಂದು ಇರಬೇಕಿತ್ತು” ಎಂದು ಹೇಳುವ ಮೂಲಕ ಕರ್ನಾಟಕದ ಮೂವರು ಮೇರು ಚೇತನಗಳಿಗೆ ನಿಜವಾದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಯೂಸುಫ್ ಕನ್ನಿ ಮತ್ತು ಫಾದರ್ ಜೆರಾಲ್ಡ್ ಅವರು, ‘ಕರ್ನಾಟಕದಲ್ಲಿ ದ್ವೇಷಕ್ಕೆ ಜಾಗವಿಲ್ಲ ಎಂಬುದನ್ನು ಜನ ತೋರಿಸಿದ್ದಾರೆ. ಬಿಜೆಪಿ ಈ ಸೋಲಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. 2024ರಲ್ಲೂ ಇದು ಪುನರಾವರ್ತನೆಯಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

nudikarnataka.com

ಎದ್ದೇಳು ಕರ್ನಾಟಕ’ವು ದೇಶಕ್ಕೊಂದು ವಿನ್ಯಾಸ ನೀಡಿದೆ
ಉದ್ಘಾಟನಾ ಭಾಷಣ ಮಾಡಿದ ಯೋಗೇಂದ್ರ ಯಾದವ್ ಅವರ ಒಂದೊಂದು ವಾಕ್ಯವೂ ಅರ್ಥಗರ್ಭಿತವಾಗಿತ್ತು. “ಎದ್ದೇಳು ಕರ್ನಾಟಕ’ವು ಕರ್ನಾಟಕಕ್ಕೆ ದಾರಿ ತೋರಿರುವುದು ಮಾತ್ರವಲ್ಲದೆ ಇಡೀ ದೇಶಕ್ಕೊಂದು ವಿನ್ಯಾಸವನ್ನು (ಟೆಂಪ್ಲೇಟ್) ನೀಡಿದೆ” ಎಂದು ಹೇಳಿದ್ದಲ್ಲದೆ, ದೊರೆಸ್ವಾಮಿಯವರ ಭಾವಚಿತ್ರದತ್ತ ನೋಡಿ “ಸಾರ್ ಇದು ನಮ್ಮ ಗೆಲುವಿನ ಸಣ್ಣ ಆರಂಭ. ಬಿಜೆಪಿಯವರನ್ನು ರಾಜಕೀಯವಾಗಿ, ಸೈದ್ಧಾಂತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸೋಲಿಸುವ ದೊಡ್ಡ ಕೆಲಸ ಇದೆ. ನಾವಲ್ಲದಿದ್ದರೂ ಮುಂದಿನ ತಲೆಮಾರು ನೀವು ನೀಡಿರುವ ಈ ಟಾಸ್ಕ್ ಅನ್ನು ಖಂಡಿತ ಪೂರ್ಣಗೊಳಿಸುತ್ತೆ” ಎಂದು ಹೇಳುತ್ತಾ ಭಾವುಕರಾದರು.

ವಾಲಂಟಿಯರ್ಸ್ ತಂಡಗಳಿಗೆ ಅಭಿನಂದನೆ
‘ಎದ್ದೇಳು ಕರ್ನಾಟಕ’ ನೀಡಿದ ಕರೆಯನ್ನು ತಳಮಟ್ಟಕ್ಕೆ ತಲುಪಿಸುವುದರಲ್ಲಿ ಅತಿಮುಖ್ಯ ಪಾತ್ರ ನಿರ್ವಹಿಸಿದ ಎಲ್ಲಾ ಜಿಲ್ಲೆಗಳ ವಾಲಂಟಿಯರ್ಸ್ ತಂಡಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸುವ ಕಾರ್ಯ ಬಹಳ ಜೀವಂತಿಕೆಯ ಜೊತೆ ನಡೆಯಿತು. 28 ಜಿಲ್ಲೆಗಳ ಉತ್ಸಾಹಿ ತಂಡಗಳು ವೇದಿಕೆ ಮೇಲೆ ಬಂದು ಚೈತನ್ಯದ ಚಿಲುಮೆಗಳಾಗಿ ಗೋಚರಿಸಿದವು. ಜನರ ನಡುವೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಶಿವಕುಮಾರ್ ಆಲಗೋಡು, ಅಶ್ವಿನಿ ಮದನ್‌ಕರ್, ಗಡಿಕಲ್ ಸರೋಜಾ, ಲೋಕೇಶ್ ನಾಯ್ಕ್ ಅವರ ಮಾತುಗಳು ವಾಲಂಟಿಯರ್ ತಂಡಗಳ ಬಗ್ಗೆ ಅಭಿಮಾನ ಉಕ್ಕಿಸಿದವು. ‘ಎದ್ದೇಳು ಕರ್ನಾಟಕ’ ಮಾಡಿರುವ ಕೆಲಸದ ಚಿತ್ರಸಹಿತ ವರದಿಯನ್ನು ನೀಡುವ ವಿಡಿಯೋ ಪ್ರದರ್ಶನ ಸಭೆಯ ಮನ ಸೂರೆಗೊಂಡಿತು.

nudikarnataka.com

ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ವಿಶೇಷ ಅಭಿನಂದನೆ
ಚಳವಳಿಗಳ ಏಕೈಕ ಪ್ರತಿನಿಧಿ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು. “ನಾಡಿನ ಇಂತಹ ಮಹಾನ್ ಚಿಂತಕರು ಮತ್ತು ಹೋರಾಟಗಾರರ ಸಭೆಯಲ್ಲಿ ನನ್ನನ್ನು ಅಭಿನಂದಿಸಿರುವುದು ನನಗೆ ಅಪಾರ ಸಂತಸ ತಂದಿದೆ. ‘ಎದ್ದೇಳು ಕರ್ನಾಟಕ’ ಮಾಡಿರುವ ಕೆಲಸದ ಮಹತ್ವ ಈ ಸಭೆಗೆ ಬಂದು ಅರ್ಥವಾಗಿದೆ. ನಾನು ಪ್ರಾಮಾಣಿಕವಾಗಿ ಜನರ ದನಿಯನ್ನು ವಿಧಾನಸಭೆಯಲ್ಲಿ ಎತ್ತುವ ಕೆಲಸ ಮಾಡಲು ಉತ್ಸುಕನಾಗಿದ್ದೇನೆ” ಎಂದರು.

ಸಂಕಲ್ಪ ತೊಡುವ ಸಮಯ
ಅಭಿನಂದನಾ ಗೋಷ್ಠಿಯ ಸಮಾರೋಪದ ಮಾತುಗಳನ್ನಾಡಿದ ಗಣೇಶ್ ದೇವಿಯವರು “ಇದಿನ್ನೂ ನಮ್ಮ ಕೆಲಸದ ಮುಕ್ತಾಯ ಅಲ್ಲವಾದ್ದರಿಂದ ನಾನು ಸಮಾರೋಪದ ಮಾತನ್ನು ಆಡಲಾರೆ. ಸಮಾರೋಪವನ್ನು 2023ರ ಈ ದಿನವಲ್ಲ, 2024ರ ಇದೇ ದಿನ ಮೇ 26ರಂದು ಮಾಡೋಣ” ಎಂದು ಮಾರ್ಮಿಕವಾಗಿ ನುಡಿದರು. “ ಇದು ಸಮಾರೋಪ ಮಾಡುವ ಸಮಯವಲ್ಲ, ಸಂಕಲ್ಪ ತೊಡುವ ಸಮಯ. ನನಗೆ ವಯಸ್ಸಾಗಿದೆ, ಆದರೆ ನನ್ನಲ್ಲಿರುವ ಶಕ್ತಿಯನ್ನೆಲ್ಲಾ ಮುಂದಿನ ಒಂದು ವರ್ಷ ಇಡೀ ಭಾರತದಲ್ಲಿ ಬಿಜೆಪಿಯವರನ್ನು ಪರಾಭವಗೊಳಿಸುವ ಕೆಲಸಕ್ಕೆ ಮೀಸಲಿಡುತ್ತೇನೆ. ನಿಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತೇನೆ” ಎಂದು ಸಭೆಯ ಮುಂದೆ ಕರ್ತವ್ಯದ ಕರೆ ನೀಡಿದರು.

nudikarnataka.com

ಬಹಿರಂಗ ಪತ್ರ ಮಂಡನೆ
ಸರ್ಕಾರದ ಮುಂದೆ ಜನಸಾಮಾನ್ಯರ ನಿರೀಕ್ಷೆಗಳ ಮಂಡನೆ ಗೋಷ್ಠಿಯು ‘ಎದ್ದೇಳು ಕರ್ನಾಟಕ’ವು ಸರ್ಕಾರಕ್ಕೆ ಸಲ್ಲಿಸಲು ಸಿದ್ಧಪಡಿಸಿದ್ದ ‘ಬಹಿರಂಗ ಪತ್ರ’ದ ಮಂಡನೆಯ ಮೂಲಕ ಪ್ರಾರಂಭವಾಯಿತು. ನೂರ್ ಶ್ರೀಧರ್ ಮತ್ತು ಬಡಗಲಪುರ ನಾಗೇಂದ್ರ ಅವರು ಜಂಟಿಯಾಗಿ ಸರ್ಕಾರದ ಮುಂದೆ ಪತ್ರದ ಆಶಯವನ್ನು ಮುಂದಿಟ್ಟರು. ನೂರ್ ಶ್ರೀಧರ್ ಅವರು, ಜನಮಾನಸವನ್ನು ಸಜ್ಜುಗೊಳಿಸುವ ಹಾಗೂ ಜಾತ್ಯಾತೀತ ಓಟುಗಳನ್ನು ಸಂಘಟಿತಗೊಳಿಸುವ ಎರಡೂ ಕೆಲಸಗಳಲ್ಲಿ ‘ಎದ್ದೇಳು ಕರ್ನಾಟಕ’ ಕೆಲಸ ಮಾಡಿದ ಪರಿಯನ್ನು ಮುಂದಿಟ್ಟು, “ಬಿಜೆಪಿಯ ದುರಾಡಳಿತ ಕಣ್ಣ ಮುಂದಿದ್ದುದರಿಂದ ಈ ಸರ್ಕಾರವನ್ನು ಸೋಲಿಸಲೇಬೇಕು ಎಂದು ದಿಟ್ಟವಾಗಿ ಕರೆ ನೀಡಿದೆವು. ಅದೇ ಧೃಡತೆ ಜೊತೆ 2024ರಲ್ಲೂ ನಾವು ಜನರ ಬಳಿ ಹೋಗಬೇಕಾದರೆ ಕಾಂಗ್ರೆಸ್ ಆಡಿದಂತೆ ನಡೆದುಕೊಳ್ಳಬೇಕು. ಮಾತುಗಳಲ್ಲ ಅದರ ಕೆಲಸಗಳು ಮಾತನಾಡಬೇಕು” ಎಂದರು.

ಜನರ ಮಾತಿಗೆ ಕಿವಿಗೊಡಬೇಕು
ಬಡಗಲಪುರ ನಾಗೇಂದ್ರ ಅವರು ಜನರ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮಾಡಲೇಬೇಕಿರುವ ಮೂರು ಕೆಲಸಗಳೇನು ಎಂಬುದರತ್ತ ಗಮನ ಸೆಳೆದರು. “ಒಂದು, ಅದು ನೀಡಿರುವ ಗ್ಯಾರಂಟಿಗಳು ತಾತ್ಕಾಲಿಕ ಪರಿಹಾರಗಳೇ ಆದರೂ ಕೊಟ್ಟ ಮಾತಂತೆ ಅವನ್ನು ಜಾರಿ ಮಾಡಲೇಬೇಕು. ಎರಡು, ಬಿಜೆಪಿ ತಂದಿದ್ದ ಜನವಿರೋಧಿ ಕಾಯ್ದೆ ಮತ್ತು ಕ್ರಮಗಳನ್ನು ರದ್ದುಗೊಳಿಸಿ ಜನಹಿತ ಕಾಯ್ದೆಗಳನ್ನು ಜಾರಿಗೆ ತರಬೇಕು. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣವನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು. ಮೂರನೆಯದಾಗಿ ಜನರ ಮಾತಿಗೆ ಕಿವಿಗೊಡಬೇಕು. ಜನರು ಮುಂದಿಡುತ್ತಿರುವ ವಿವಿಧ ಹಕ್ಕೊತ್ತಾಯಗಳನ್ನು ಅವರನ್ನು ಕರೆದು ಕೇಳಿಸಿಕೊಳ್ಳಬೇಕು. ಜೊತೆಗೂಡಿ ಪರಿಹಾರ ಹುಡುಕಿ ಯುದ್ಧೋಪಾದಿಯಲ್ಲಿ ಜಾರಿ ಮಾಡಬೇಕು” ಎಂದು ಹೇಳಿದರು.

nudikarnataka.com

103 ಕ್ಷೇತ್ರಗಳಲ್ಲಿ ಮಹತ್ವದ ಕೆಲಸ ಮಾಡಿದ್ದೀರಿ
‘ಎದ್ದೇಳು ಕರ್ನಾಟಕ”ದ ಪತ್ರಕ್ಕೆ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಕ್ಯಾಬಿನೆಟ್ ಸಚಿವ ಸತೀಶ್ ಜಾರಕಿಹೊಳಿ ಅವರು “103 ಕ್ಷೇತ್ರಗಳಲ್ಲಿ ಮಹತ್ವದ ಕೆಲಸ ಮಾಡಿದ್ದೀರಿ, ಸೋಷಿಯಲ್ ಮಾಧ್ಯಮದ ಮೂಲಕ ಅರಿವು ಮೂಡಿಸಿದ್ದೀರಿ. ‘ಎದ್ದೇಳು ಕರ್ನಾಟಕ’ ಮತ್ತು ಇತರೆಲ್ಲಾ ಸಾಮಾಜಿಕ ಸಂಘಟನೆಗಳು ಮಾಡಿರುವ ಪ್ರಯತ್ನ ಈ ಗೆಲುವಿಗೆ ಮುಖ್ಯ ಕೊಡುಗೆ ನೀಡಿದೆ. ಇದಕ್ಕಾಗಿ ಧನ್ಯವಾದಗಳನ್ನು ಹೇಳಬಯಸುತ್ತೇನೆ. ನಮ್ಮ ಸರ್ಕಾರವು ಐದು ಗ್ಯಾರಂಟಿಗಳಿಗೆ ಮಾತ್ರವಲ್ಲದೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಇತರೆಲ್ಲ ಭರವಸೆಗಳಿಗೂ ಬದ್ಧವಾಗಿದೆ. ಸ್ವಲ್ಪ ಸಮಯ ಹಿಡಿಯಬಹುದು, ಆದರೆ ಖಂಡಿತ ಮಾಡುತ್ತದೆ. ಆದರೆ ನಿಮ್ಮ ಹೊಣೆಗಾರಿಕೆ ಇದ್ದೇ ಇರುತ್ತದೆ. ‘ಎದ್ದೇಳು ಕರ್ನಾಟಕ’ ಕರೆಯನ್ನು ಮಾರ್ಪಡಿಸಿ ‘ಎದ್ದೇಳು ಕಾಂಗ್ರೆಸ್’ ಎಂದು ಮಾಡಬೇಕು, ನಮ್ಮನ್ನು ಎಚ್ಚರಿಸುತ್ತಲೇ ಇರಬೇಕು” ಎಂದರು.

ಇಂದು ದೊರೆಸ್ವಾಮಿಯವರು ಇದ್ದಿದ್ದರೆ ಬಹಳ ಖುಷಿ ಪಟ್ಟಿರುತ್ತಿದ್ದರು
ದೆಹಲಿಯಲ್ಲಿ ನಡೆಯುತ್ತಿರುವ ಸಭೆಗಳ ಕಾರಣಕ್ಕೆ ಸಮಾವೇಶದಲ್ಲಿ ಭಾಗವಹಿಸಲು ಆಗದೇ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ.ಜಿ. ಪರಮೇಶ್ವರ್ ವಿಷಾದ ವ್ಯಕ್ತಪಡಿಸುತ್ತಾ ಲಿಖಿತ ಪತ್ರಗಳನ್ನು ಕಳುಹಿಸಿಕೊಟ್ಟಿದ್ದರು. ‘ಎದ್ದೇಳು ಕರ್ನಾಟಕ’ ಮಾಡಿದ ಕೆಲಸಗಳು ನಮ್ಮ ಗಮನದಲ್ಲಿವೆ ಎಂದು ಬರೆದಿದ್ದ ಮುಖ್ಯಮಂತ್ರಿಗಳು “ನಿಮಗೆ ಕಾಂಗ್ರೆಸ್ ನಿಂದ ನಿರೀಕ್ಷೆಗಳೂ ಇವೆ, ಕಾಂಗ್ರೆಸ್ ಮೇಲೆ ಟೀಕೆಗಳೂ ಇವೆ. ಅಂಥವರೆಲ್ಲರೂ ಕೂಡಿ ಈ ಬಾರಿ ಚುನಾವಣೆಯಲ್ಲಿ ಬಹಳ ವ್ಯತ್ಯಾಸವಾಗುವ ರೀತಿಯ ಕೆಲಸ ಮಾಡಿದ್ದೀರಿ. … ನನಗೆ ಗೊತ್ತು – ಇಂದು ದೊರೆಸ್ವಾಮಿಯವರು ಇದ್ದಿದ್ದರೆ ಬಹಳ ಖುಷಿ ಪಟ್ಟಿರುತ್ತಿದ್ದರು, ಸ್ವಲ್ಪ ಹೊಗಳಿರುತ್ತಿದ್ದರು, ಇಂತಿಂಥದ್ದು ಮಾಡಲೇಬೇಕು ಎಂದು ತಾಕೀತು ಸಹ ಮಾಡಿರುತ್ತಿದ್ದರು”; “ನಮ್ಮ ಸರ್ಕಾರದ ಬಗ್ಗೆ ಬಹಳ ಅಪಪ್ರಚಾರ ಪ್ರಾರಂಭವಾಗಿದೆ. ಇದನ್ನು ನಾವು ಎದುರಿಸಬೇಕು. ಇದರಲ್ಲೂ ನಿಮ್ಮ ಸಹಾಯಬೇಕು”; “ನಮ್ಮ ಸರ್ಕಾರ ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆ”; “ಎಲ್ಲರೂ ಸೇರಿ ಕರ್ನಾಟಕವನ್ನು ಕುವೆಂಪು ಅವರು ಬಯಸಿದ ರೀತಿಯ ಶಾಂತಿಯ ತೋಟವನ್ನಾಗಿ ಮಾಡಲು ಶ್ರಮಿಸೋಣ” ಎಂದು ಬರೆದಿದ್ದರು. ಸಿದ್ದರಾಮಯ್ಯ ಅವರ ಪತ್ರವನ್ನು ದಲಿತ ಚಳವಳಿಯ ಮುಂದಾಳು ಗುರುಪ್ರಸಾದ್ ಕೆರಗೋಡು ಅಚ್ಚುಕಟ್ಟಾಗಿ ಓದಿದರು.

ಈ ಚುನಾವಣೆಯಲ್ಲಿ ನಡೆದದ್ದು ಮೌಲ್ಯಗಳ ಹೋರಾಟ
ಡಾ.ಜಿ. ಪರಮೇಶ್ವರ್ ಅವರ ಪತ್ರವನ್ನು ಪ್ರೊ.ರಾಧಾಕೃಷ್ಣ ಅವರು ಸಭೆಯ ಮುಂದಿಟ್ಟರು. ಜಿ ಪರಮೇಶ್ವರ್ ಅವರು “ಈ ಚುನಾವಣೆಯಲ್ಲಿ ನಡೆದದ್ದು ಮೌಲ್ಯಗಳ ಹೋರಾಟ. ನಿಜದ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದ ಹೋರಾಟದಲ್ಲಿ ಎಲೆಮರೆಯ ಕಾಯಿಯಂತೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದವರು ‘ಎದ್ದೇಳು ಕರ್ನಾಟಕ’ದ ನೀವೆಲ್ಲರೂ. ನಿಮಗೆ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು”; “ನಿಮ್ಮಂತಹ ಸಮಾಜಮುಖಿ ಸಂಘಟನೆಯಿಂದ ನಾವು ಎಂದೆಂದಿಗೂ ‘ಎಚ್ಚರಿಕೆ’ ಮತ್ತು ‘ಮಾರ್ಗದರ್ಶನ’ವನ್ನು ಬಯಸುತ್ತೇವೆ ಎಂದು ಬರೆದಿದ್ದರು.

ಹೋರಾಟಗಾರರ ಮೇಲೆ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳುವ ಕೆಲಸ ಮಾಡಬೇಕು
ಕೊನೆಯಲ್ಲಿ ಸಮಾರೋಪದ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು “ನಾನು ಎದ್ದೇಳು ಕರ್ನಾಟಕದ ಒಬ್ಬ ಕಾರ್ಯಕರ್ತನಾಗಿ ಮಾಡಿದ ಕೆಲಸವನ್ನು ಮೊದಲು ಹಂಚಿಕೊಳ್ಳಬೇಕು” ಎಂದು ಕೊಪ್ಪಳ ಭಾಗದಲ್ಲಿ ನಡೆದ ಕೆಲಸವನ್ನು ವಿವರಿಸಿದರು. ಈ ವಯಸ್ಸಿನಲ್ಲೂ ಅಂಥ ಹಿರಿಯರು ಸಹ ಮಾಡಿರುವ ಕೆಲಸ ಅಭಿಮಾನ ಮೂಡಿಸಿತು.

“ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಾವು ಹೋರಾಟಗಳನ್ನು ಮಾಡಿದ್ದೇವೆ, ಆದರೆ ಆಗ ನಮಗೆ ಹೋರಾಡಲು ಅವಕಾಶ ಇತ್ತು, ನಾನಾಗ ಸರ್ಕಾರಿ ನೌಕರಿಯಲ್ಲಿದ್ದರೂ ನನ್ನ ಮೇಲೆ ಯಾವ ಕೇಸುಗಳೂ ಆಗಲಿಲ್ಲ. ಆದರೆ ಬಿಜೆಪಿ ಕಾಲಾವಧಿಯಲ್ಲಿ ಹೋರಾಟ ಮಾಡಿದವರ ಮೇಲೆಲ್ಲಾ ಕೇಸುಗಳನ್ನು ಹಾಕಲಾಗಿದೆ. ನನ್ನ ಮೇಲೆಯೇ ಎರಡು ಕೇಸುಗಳಿವೆ. ಈ ಸರ್ಕಾರ ಮೊದಲು ಹೋರಾಟಗಾರರ ಮೇಲೆ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳುವ ಕೆಲಸ ಮಾಡಬೇಕು” ಎಂದು ಒತ್ತಿ ಹೇಳಿದರು. “ಎದ್ದೇಳು ಕರ್ನಾಟಕ ಪ್ರಾರಂಭವಾಗಿರದಿದ್ದರೆ ನಾವೂ ಗೊಣಗಿಕೊಳ್ಳುತ್ತಾ ಮನೆಗಳಲ್ಲೇ ಕೂರುತ್ತಿದ್ದೆವೇನೋ…ಅದು ನಮ್ಮೆಲ್ಲರನ್ನೂ ಎದ್ದು ನಿಲ್ಲಿಸಿತು. ಈ ಕೆಲಸ ಮುಂದುವರೆಯಬೇಕು. 2024ರಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು” ಎಂದು ಅವರು ಘೋಷಿಸುವ ಮೂಲಕ ಸಭೆ ಮುಕ್ತಾಯವಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!