Sunday, November 22, 2026

ಪ್ರಾಯೋಗಿಕ ಆವೃತ್ತಿ

ಕವಿ ಸದ್ದಾಂ ಕಂಡಂತೆ ‘ಎದೆಯ ಹಣತೆ’ ; ಮಂಡ್ಯದಲ್ಲಿ ಮೋಡಿ ಮಾಡಿದ ಮಾಯಾಮೃಗ

-ಸದ್ದಾಂ ತಗ್ಗಹಳ್ಳಿ

ಸದ್ದಾಂ ತಗ್ಗಹಳ್ಳಿ

‘ನಾ ಮಂಕ’ ಅಂದರೆ ನಾವು ಮಂಡ್ಯ ಕಲಾವಿದರು ಮತ್ತು ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು ಇವರು ಜಾಗೃತ ಕರ್ನಾಟಕ, ಕರ್ನಾಟಕ ಜನಶಕ್ತಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಚಿತ್ರಕೂಟ, ನೆಲದನಿ ಬಳಗ, ಪರಿವರ್ತನಾ, ಅರುಣೋದಯ ಕಲಾತಂಡ ಮುಂತಾದ ಅನೇಕ ಸಂಘಟನೆಗಳು ಗಂಡು ಮೆಟ್ಟಿದ ನಾಡು, ಸಕ್ಕರೆ ನಾಡಿನಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯದ ಗಂಧವನ್ನು ಪಸರಿಸಲು ಮುಂದಾಗಿವೆ.

ಮೊದಲಿಗೆ ಕೆ.ವಿ.ಶಂಕರಗೌಡರ 110 ನೇ ಹುಟ್ಟುಹಬ್ಬದ ಅಂಗವಾಗಿ ಎರಡು ನಾಟಕಗಳನ್ನು ಶಂಕರಗೌಡರಿಗೆ ಅರ್ಪಿಸುವುದಾಗಿ ಎಲ್ಲರೊಳಗೊಂದಾಗು ವಿನಯ್ ಕುಮಾರ್ ಘೋಷಿಸಿದರು.

ಪ್ರಸ್ತುತ ಜಗತ್ತಿನಲ್ಲಿ ಕಥೆ, ಕಾದಂಬರಿ, ಕವನಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಅದರಂತೆ ಸಾಹಿತ್ಯದ ರಸದೌತಣವನ್ನು ಉಣಬಡಿಸಲು ಮುಂದಾಗಿರುವ ಮಂಡ್ಯದ ಹಲವು ಸಂಘಟನೆಗಳು ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಪೂರ್ಣಚಂದ್ರ ತೇಜಸ್ವಿ, ಭಾನು ಮುಷ್ತಾಕರ ಕಥೆಗಳನ್ನಾಧರಿಸಿದ ನಾಟಕಗಳನ್ನು ಮಂಡ್ಯದ ಸಾರ್ವಜನಿಕರ ಮುಂದೆ ಪ್ರದರ್ಶಿಸಿದ್ದು ಸಂತಸದ ಸಂಗತಿಯಾಗಿದೆ.

ನಾಡು ಕಂಡಂತಹ ಶ್ರೇಷ್ಠ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪು ಸುಪುತ್ರರಾದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ರವರ ‘ಮಾಯಾಮೃಗ’ ಕಥೆಯನ್ನಾಧರಿಸಿದ ಶ್ರೀರಂಜಿತ್ ಶೆಟ್ಟಿ ಕುಕ್ಕುಡೆ ರವರ ನಿರ್ದೇಶನದಲ್ಲಿ ಮೂಡಿಬಂದಂತಹ ನಾಟಕವು ನಮ್ಮ ಚಿಂತನೆಗಳಾಗಲಿ! ನಮ್ಮ ವರ್ತನೆಗಳಾಗಲಿ! ನಮ್ಮ ಬದುಕಿನ ಹಾದಿ ಸೃಷ್ಠಿ ಮಾಡುತ್ತವೆ. ದೆವ್ವ ಪಿಶಾಚಿಗಳು ಮುಂತಾದ ಕೆಟ್ಟ ಭಾವನೆಗಳು ಅವು ನಮ್ಮ ಮುಂದೆ ಇರುವುದಿಲ್ಲ, ಬದಲಾಗಿ ಅವು ನಮ್ಮ ತಲೆಯಲ್ಲಿರುತ್ತವೆ ಎಂಬುದನ್ನು ಪ್ರಚುರ ಪಡಿಸುತ್ತದೆ. ಜೀವನದ ಕೆಲವು ಸನ್ಮಾರ್ಗವನ್ನು ರೂಪಿಸಬೇಕಾದರೆ ನಮ್ಮ ಆಲೋಚನೆ ನಮ್ಮ ಕಾರ್ಯ ಪ್ರಗತಿಗಳು ಸರಿಯಾದ ರೀತಿಯಲ್ಲಿ ಇರಬೇಕು ಎಂಬುದನ್ನು ತಿಳಿಸುತ್ತದೆ.

ಸಮಾಜದಲ್ಲಿ ಹೆಣ್ಣಿಗಿರುವ ಗೌರವ, ಸಮಾನತೆ, ವರ್ಗ ಮುಂತಾದವುಗಳು ಹಾಗೂ ಆಕೆಯ ಕಷ್ಟದ ಹಾದಿಯನ್ನು ತೋರುವ ಮತ್ತು ಇನ್ನಿತರ ವಿಚಾರಗಳನ್ನು ಎತ್ತಿ ಹಿಡಿದಿರುವುದು ಬಾನು ಮುಷ್ತಾಕ್ ರವರಿಂದ ಬರೆಯಲ್ಪಟ್ಟ “ಎದೆಯ ಹಣತೆ” ಕಥೆಯು ನಮ್ಮ ಕನ್ನಡ ಸಾಹಿತ್ಯ ಸಾಗರಕ್ಕೆ ಬೂಕರ್ ಪ್ರಶಸ್ತಿಯ ಕಿರೀಟವನ್ನು ತಂದು ಕನ್ನಡದ ಗರಿಮೆಯನ್ನು ಇನ್ನೂ ಹೆಚ್ಚಿಸಿದೆ.

ನಾಟಕವು ಒಂದು ಹೆಣ್ಣು ತನ್ನ ಜೀವಿತಾವಧಿಯಲ್ಲಿ ಹಲವು ತಲ್ಲಣಗಳಿಂದ ಕೂಡಿರುತ್ತಾಳೆ ಎಂಬುದನ್ನು ಎತ್ತಿ ತೋರಿಸುತ್ತದೆ. ಬಾಲ್ಯ, ಯೌವ್ವನ, ಮದುವೆ, ಸಂಸಾರ, ಮಕ್ಕಳು ಮುಂತಾದ ಅಂಶಗಳು ಅವಳದ್ದಾಗಿರುತ್ತವೆ. ಕೆಲವೊಮ್ಮೆ ತವರಿನ ಪ್ರೀತಿ, ಮಮತೆ ಪಡೆಯಲು ಸೋಲುತ್ತಾಳೆ. ಛಲ ಬಿಡದೆ ಬದುಕ ಬಂಡಿಯ ಸಾಗಿಸಲು ಮುಂದಾಗುತ್ತಾಳೆ. ಅಂತಹದ್ದೇ ಒಂದು ಹೆಣ್ಣಿನ ಬಗೆಗಿನ ವಿಚಾರಗಳನ್ನು ಪ್ರಚುರಪಡಿಸುತ್ತದೆ. ಈ ‘ಎದೆಯ ಹಣತೆ’. ಕಡೆಗಣಿಸಿದ ನೂರಾರು ಜೀವಗಳಿಗೆ ಬದುಕುವ ಬದಲು ಕಡೆಗಣಿಸುವ ಕೆಲವು ಜೀವಗಳಿಗೋಸ್ಕರ ಬದುಕುವುದು ಉತ್ತಮ ಎನ್ನುವುದು ಕೂಗಿ ಹೇಳುತ್ತದೆ ಈ ‘ಎದೆಯ ಹಣತೆ’.

ಎದೆಯ ಹಣತೆ ಕಥೆಯನ್ನು ನಾಟಕವಾಗಿಸಿದ ನಿರ್ದೆಶಕ ಡಾ.ಎಂ. ಗಣೇಶ್ ರವರು ಮಾತನಾಡಿ ಮಂಡ್ಯ ರಂಗಭೂಮಿಗೂ ನೀನಾಸಂ ತಂಡಗಳಿಗೂ ಅವಿನಾಭಾವ ಸಂಬಂಧವಿದೆ. ಯಾವ ಸಂದರ್ಭದಲ್ಲಿಯೂ ಯಾವುದೇ ತಂಡದ ರಂಗಕಲಾವಿದರನ್ನು ತಬ್ಬಲಿಗಳಾಗಲಿಕ್ಕೆ ಬಿಡದೇ ಸದಾ ಪೋಷಿಸಿಕೊಂಡು ರಂಗಭೂಮಿಯ ಚಟುವಟಿಕೆಯನ್ನು ಜೀವಂತವಾಗಿರಿಸಿರುವುದರಲ್ಲಿ ಮಂಡ್ಯ ರಂಗಪ್ರೆಕ್ಷಕರ ಪಾತ್ರ ರಾಜ್ಯದಲ್ಲೇ ತುಂಬಾ ವಿಶಿಷ್ಟವಾದುದು ಎಂದರು.

ನಿರ್ದೇಶನವನ್ನು ಮಾಡಿದಂತಹ ಡಾ.ಎಂ ಗಣೇಶ್ ಹೆಗ್ಗೋಡು ಹಾಗೂ ವಿನ್ಯಾಸವನ್ನು ಮಾಡಿದಂತ ಸಲ್ಮಾ ದಂಡಿನ್ ರವರಿಗೆ ಅಭಿನಂದಿಸುತ್ತಾ! ಹಾಗೂ ಇತರ ಎಲ್ಲಾ ಪಾತ್ರಗಳು ಪರಕಾಯ ಪ್ರವೇಶವನ್ನೇ ಮಾಡಿದ್ದವು ಎಂದರೆ ತಪ್ಪಾಗಲಾರದು. ಇನ್ನೂ ಹೆಚ್ಚಿನ ನಾಟಕ ಪ್ರದರ್ಶನಗಳು ಮೂಡಿಬರಲಿ, ಎಲ್ಲಾ ಪಾತ್ರಗಳಿಗೆ ಜೀವ ತುಂಬಲಿ ಹಾಗೂ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಶ್ರೀಮಂತ ಗೊಳಿಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

(ಲೇಖಕರು: ಕವಿ, ಉಪನ್ಯಾಸಕ)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ