ಪ್ರಸ್ತುತ ಸಮಾಜನದಲ್ಲಿ ಗಂಡಸರಿಗೆ ಸಮಾನವಾಗಿ ಹೆಣ್ಣು ಮಕ್ಕಳು ಸಮಾನತೆಗಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ, ಇದಕ್ಕಾಗಿ ಹೆಣ್ಣು ಮಕ್ಕಳಲ್ಲಿ ಸಮಾನತೆಯ ಪ್ರಜ್ಞೆ ಮೂಡುವುದು ಅಗತ್ಯವೆಂದು ಬಿಜಾಪುರ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲ ಸಚಿವರಾದ ಆರ್. ಸುನಂದಮ್ಮ ತಿಳಿಸಿದರು.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ನಡೆದ ‘ಸಮಾನತೆಯೆಡೆಗೆ ನಮ್ಮ ನಡಿಗೆ’ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ಸಮಾಜದಲ್ಲಿ ಹೆಣ್ಣಿಗೊಂದು, ಗಂಡಿಗೊಂದು ಮಾನದಂಡಗಳಿವೆ, ಇದನ್ನು ಹೋಗಲಾಡಿಸಬೇಕಿದೆ. ಮನುಸ್ಮೃತಿಯಲ್ಲಿ ಮನುವು ಹೆಣ್ಣು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯೌವನದಲ್ಲಿ ಗಂಡನ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಜೀವಿಸಬೇಕೆಂಬ ಕಟ್ಟಳೆ ವಿಧಿಸಿದ್ಧಾನೆ. ಇದನ್ನು ಒಡೆದು ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಿ, ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.
ವೇದಿಕೆಯಲ್ಲಿ ಮಹಿಳಾಪರ, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಸಿ.ಐ.ಟಿ.ಯು ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ಸ್ವರ್ಣಮಾಲಾ ಸಿರ್ಸಿ, ಕೋಮಲ, ಮಹಿಳಾ ಮುನ್ನಡೆ ಪೂರ್ಣಿಮಾ, ಶಿಲ್ಪ ಸೇರಿದಂತೆ ಮತ್ತಿತರರಿದ್ದರು.




