Thursday, November 19, 2026

ಪ್ರಾಯೋಗಿಕ ಆವೃತ್ತಿ

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಿದ್ದೇನೆ : ಶಾಸಕ ಡಿ. ಸಿ. ತಮ್ಮಣ್ಣ

ವರದಿ : ಪ್ರಭು ವಿ.ಎಸ್.

ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಮತ್ತು ಜ್ಞಾನವನ್ನು ನೀಡಲು ನಾನು ಕ್ಷೇತ್ರದಲ್ಲಿ ಶ್ರಮಿಸುತ್ತಿದ್ದು, ಅದಕ್ಕಾಗಿ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಿದ್ದೇನೆ ಎಂದು ಶಾಸಕ ಡಿ ಸಿ ತಮ್ಮಣ್ಣ ಹೇಳಿದರು.

ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ 16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾ ಗಾಂಧಿ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯನ್ನು ಕಟ್ಟಿಸಲು ಹಲವು ಎಡರು ತೊಡರುಗಳನ್ನು ದಾಟಿದ್ದೇನೆ. ಮಂತ್ರಿಯೊಬ್ಬರಿಗೆ ಸವಾಲು ಹಾಕಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ಕಟ್ಟಿಸಿದ್ದೇನೆ ಎಂದು ಹೇಳಿದರು.

ಆನಂದದಾಯಕವಾದ ಮನಸ್ಸು ನಾಗರಿಕರಲ್ಲಿ ಕಡಿಮೆಯಾಗುತ್ತಿದೆ. ಗಂಡು ಮಕ್ಕಳ ಮೇಲೆ ಯಾವ ತಂದೆ ತಾಯಿಗೂ ಹಿಡಿತಾ ಇಲ್ಲ. ಹೆಣ್ಣು ಮಕ್ಕಳು ದೇಶದ ಸಂಪತ್ತು. ಶಾಲಾ ಕಾಲೇಜುಗಳಲ್ಲಿ ಗಂಡು ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಿದೆ. ಮನೆಯೇ ಮೊದಲ ಪಾಠಶಾಲೆ ಆಗಬೇಕಿದೆ. ತಾಯಿಯೇ ಮೊದಲ ಗುರು. ಶಿಕ್ಷಕರು ಒಳ್ಳೆಯ ಶಿಕ್ಷಣವನ್ನು ಕೊಡುತ್ತಾರೆ, ಅದಕ್ಕೆ ಪೂರಕವಾದ ವಾತಾವರಣವನ್ನು ನಾನು ಕಲ್ಪಿಸಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಶಾಲೆಯನ್ನು ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದಾರೆ. ಅದನ್ನು ನನಸು ಮಾಡುವ ಪ್ರಜ್ಞೆ ನಿಮ್ಮದು, ಪಂಚರತ್ನದ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಲಾಗಿದೆ ಎಂದರು.

ಕೆಸ್ತೂರಿನಲ್ಲಿ ಸ್ವಸಜಿತವಾದ ಐಟಿಐ ಕಾಲೇಜನ್ನು ಸ್ಥಾಪಿಸಿ ಉದ್ಘಾಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆಸ್ತೂರು ಮತ್ತು ಭಾರತೀಯ ನಗರದಲ್ಲಿ ಉದ್ಯಮಶೀಲತೆ ಕೌಶಲ್ಯ ಕೇಂದ್ರಗಳು ಸ್ಥಾಪಿಸಿ ಅಲ್ಲೇ ಅವರಿಗೆ ಉದ್ಯೋಗ ಕೊಡುವ ವ್ಯವಸ್ಥೆ ಮಾಡಲಾಗುವುದು.

ಕಳೆದ 18 ವರ್ಷಗಳಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ.‌ ಸುಳ್ಳುಗಳನ್ನು ಹೇಳಿಕೊಂಡು ರಾಷ್ಟ್ರೀಯ ಪಕ್ಷಗಳು ತಿರುಗುತ್ತವೆ.‌ ಅಭಿವೃದ್ಧಿ ಮಾಡುವ ಯೋಗ್ಯ ವ್ಯಕ್ತಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ.‌ ಹಿಂದೆ ಬಡತನದೊಂದಿಗೆ ಸ್ವಾಭಿಮಾನ, ಆತ್ಮಭಿಮಾನ ಇತ್ತು. ಆದರೆ ಈಗ ಏನು ಕೊಟ್ಟರು ಕೈ ಚಾಚುವ ಪರಿಸ್ಥಿತಿ ಬಂದಿದೆ , ನೀಡುವ ಕೈಯಾಗಿದ ರೈತರು ಈಗ ಬೇಡುವ ಕೈಯಾಗಿದೆ. ಮುಂದಿನ 50 ವರ್ಷಕ್ಕೆ ಬೇಕಾಗುವಷ್ಟು ಸೌಲಭ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ಜೆಡಿಎಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ.

ನಾನು ರಾಜಕೀಯದಲ್ಲಿ ಬಾಚಲಿಲ್ಲ ದೋಚಲಿಲ್ಲ ಜನ ಸೇವೆಗೆ ನನ್ನಲ್ಲಿರುವುದೆಲ್ಲವನ್ನು ಕಳೆದುಕೊಂಡಿದ್ದೇನೆ.‌ 16 ಕೋಟಿ ವೆಚ್ಚದಲ್ಲಿ ಐಷಾರಾಮಿ ಹೋಟೆಲ್ ನಂತೆ ಇಂದಿರಾಗಾಂಧಿ ವಸತಿ ಶಾಲೆಯನ್ನು ನಿರ್ಮಿಸಲಾಗಿದೆ. 50 ವಿದ್ಯಾರ್ಥಿಗಳಿಂದ ಪ್ರಾರಂಭವಾದ ವಸತಿ ಶಾಲೆಯಲ್ಲಿ ಪ್ರಸ್ತುತ 250 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಶೇ 100 ರಷ್ಟು ಫಲಿತಾಂಶ ಪಡೆಯುತ್ತಿದೆ ಎಂದರು.

ಕಾರ್ಯಕ್ರಮದ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ ಹೂತಕೆರೆ ಗ್ರಾ ಪಂ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಎ ಟಿ ನಾರಾಯಣ, ಗ್ರಾಂ ಪಂ ಮಾಜಿ ಅಧ್ಯಕ್ಷ ಶಂಕರ್, ಮುಖಂಡರಾದ ರಂಗಸ್ವಾಮಿ, ಕೆ.ಟಿ. ರಾಮಣ್ಣ, ಜಗದೀಶ್, ರಮೇಶ್, ಶ್ರೀಧರ, ಕೃಷ್ಣಪ್ಪ, ಗಂಗರಾಜು, ಪ್ರಾಂಶುಪಾಲರಾದ ರವೀಂದ್ರಬಾಬು, ಸುರೇಶ್ ಸೇರಿದಂತೆ ಇತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ