Saturday, May 18, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರ ಅವಹೇಳನ : ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಾಜೀನಾಮೆಗೆ ಆಗ್ರಹ

ಮೈಸೂರು ರಂಗಾಯಣ ನಿರ್ದೇಶಕನಾಗಿ ನಿಯೋಜಿತವಾಗಿರುವ ಕೆಲಸವನ್ನು ಬಿಟ್ಟು ಒಕ್ಕಲಿಗ ಸಮಾಜವನ್ನು ಒಡೆಯುವ, ವಿಷವಿಕ್ಕುವ ಕೆಲಸ ಮಾಡುತ್ತಿರುವ ಅಡ್ಡಂಡ ಕಾರ್ಯಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ಸರ್ಕಾರವೇ ಆತನನ್ನು ವಜಾಗೊಳಿಸಬೇಕೆಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ ರಂಗಾಯಣದ ನಿರ್ದೇಶಕನಾಗಿ ಮುಂದುವರಿಯಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ, ಸಮಾಜದ ಐಕ್ಯತೆ ಮತ್ತು ಭಾವೈಕ್ಯತೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸದಿದ್ದರೆ ಜನರೇ ಮುಂದಾಗಿ ಆತನಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೀಳು ಮಟ್ಟದ ರಾಜಕಾರಣ
ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ  ಸ್ವಾಮೀಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಅಡ್ಡಂಡ ಕಾರ್ಯಪ್ಪ ಕೀಳು ರಾಜಕಾರಣ ಮಾಡುತ್ತಿದ್ದಾರೆ. ಒಕ್ಕಲಿಗ ನಾಯಕರುಗಳನ್ನು ಪ್ರಸ್ತಾಪಿಸಿ, ಮೂರು ಪಕ್ಷಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಾಯಕರ ಹೆಸರುಗಳನ್ನು ಎಳೆದು ತಂದಿದ್ದಾರೆ. ಇದನ್ನು ಮಾಡಲಿಕ್ಕೆ ವಿಧಾನ ಸೌಧದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಈತ ರಂಗಭೂಮಿಗೆ ಶಕ್ತಿ ತುಂಬ ಬೇಕಾದ ಈ ವ್ಯಕ್ತಿ. ಹುದ್ದೆಯ ಸ್ಥಾನಮಾನ ಮರೆತು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಈ ಕೆಲಸ ಮುಖ್ಯ ಎನ್ನುವುದಾದರೆ ಇರುವ ಹುದ್ದೆಗೆ ರಾಜೀನಾಮೆ ನೀಡಿ ವಿಧಾನಸೌಧದಲ್ಲಿ ಬಾಯಿ ಬಡಿದುಕೊಳ್ಳಲಿ, ಅದು ಬಿಟ್ಟು ಈ ರೀತಿ ಕುಲ್ಲಕವಾಗಿ ಮಾತನಾಡುವುದು ರಂಗಾಯಣಕ್ಕಾಗಲಿ ಒಟ್ಟಾರೆ ರಂಗಭೂಮಿಗಾಗಲಿ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

ಸಾರ್ವಜನಿಕ ಅಂಜಿಕೆ, ನಾಚಿಕೆಯೂ ಇಲ್ಲ
ಅಡ್ಡಂಡ ಕಾರ್ಯಪ್ಪನಿಗೆ ಕನಿಷ್ಠ ಸಾರ್ವಜನಿಕ ಅಂಜಿಕೆ, ನಾಚಿಕೆಯೂ ಇಲ್ಲ. ತಾನೇ ನಿರ್ದೆಶಕನಾಗಿರುವ ರಂಗಾಯಣದಲ್ಲಿ ತನ್ನದೇ ನಾಟಕವನ್ನು ಸರ್ಕಾರದ ಅನುದಾನದಲ್ಲಿ ಪ್ರಯೋಗ ಮಾಡುವ ಮೂಲಕ ಸರ್ಕಾರದ ಹಣವನ್ನು ಅಪವ್ಯಯ ಮಾಡುತ್ತಿದ್ದಾನೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. 03 ಮಂದಿಯನ್ನು ರಾಷ್ಟ್ರಕವಿಗಳೆಂದು ಸರ್ಕಾರವೇ ಗುರುತಿಸಿದೆ. ಇದರ ಜೊತೆಗೆ -ಹಲವು ಹತ್ತು ಮಂದಿ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಿದ್ದಾರೆ. ಈ ಎಲ್ಲರ ಸಾಹಿತ್ಯ ಕೃಷಿಯನ್ನು ಪಕ್ಕಕ್ಕೆ ತಳ್ಳಿ ತನ್ನದೇ ‘ ಕಪೋಲ ಕಲ್ಪಿತ’ ನಾಟಕವನ್ನು ಸಾರ್ವಜನಿಕ ಹಣವನ್ನು ಬಳಸಿ ಪ್ರದರ್ಶಿಸಿರುವುದನ್ನು ಪ್ರಜ್ಞಾವಂತರೆಲ್ಲ ಪ್ರಶ್ನಿಸಬೇಕಿದೆ ಎಂದರು.

ಒಕ್ಕಲಿಗರ ಸಮುದಾಯಕ್ಕೆ ಅಪಚಾರ
ಉರಿಗೌಡ, ನಂಜೇಗೌಡನ ಹೆಸರುಗಳನ್ನು ಮುಂದು ಮಾಡಿ ಸಾಮಾಜಿಕ ತಲ್ಲಣಗಳನ್ನು ಸೃಷ್ಟಿಸಿದ ಅಡ್ಡಂಡ ಕಾರ್ಯಪ್ಪ, ಒಕ್ಕಲಿಗ ಸಮುದಾಯಕ್ಕೆ ಅಪಚಾರ ಮಾಡಲು ಯತ್ನಿಸಿದ. ಜಾನಪದವನ್ನು ಚಾರಿತ್ರಿಕ ಸಾಕ್ಷ್ಯವನ್ನಾಗಿ ಪರಿವರ್ತಿಸಲು ಮಾಡಿದ ಪ್ರಯತ್ನಗಳು ವಿಫಲವಾದಾಗ ಹತಾಶೆಯಿಂದ ಜಾತಿನಿಂದನೆಗೆ ತೊಡಗಿದ್ದಾನೆ. ಈ ಎಲ್ಲಾ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸ್ವಾಮೀಜಿಯವರು ಸಂಬಂಧ ಪಟ್ಟವರನ್ನು ಕರೆಸಿ ಸತ್ಯಶೋಧನೆಗೆ ತೊಡಗಿದರು. ಚರಿತ್ರೆ ಮತ್ತು ಜಾನಪದಕ್ಕೆ ಇರುವ ವ್ಯತ್ಯಾಸಗಳನ್ನು ಮನವರಿಕೆ ಮಾಡಿಕೊಟ್ಟು ಸಂದಿಗ್ಧಗಳನ್ನು ದೂರ ಮಾಡಿದರು. ”ಕಲ್ಪನೆ ಸಾಹಿತ್ಯದ ಸ್ವತ್ತು, ಸತ್ಯ ಚರಿತ್ರೆಯ ಶೋಧ” ಇದನ್ನು ಅರ್ಥಮಾಡಿಕೊಳ್ಳದ ಅಡ್ಡಂಡ ಕಾರ್ಯಪ್ಪ ವ್ಯಕ್ತಿಗತ ತೇಜೋವಧೆಗೆ ಪ್ರಯತ್ನಿಸಿರುವುದು ಈತನ ಹತಾಶೆಯ ದ್ಯೋತಕವಾಗಿದೆ ಎಂದು ಟೀಕಿಸಿದರು.

ಈ ಹಿಂದೆಯೂ ಈತನ ಆಲೋಚನ ಕ್ರಮ ಹೀಗೆಯ ಇತ್ತು. ‘ಸೃಷ್ಟಿ’ ಎನ್ನುವ ತಂಡವನ್ನು ಕಟ್ಟಿಕೊಂಡು ರಂಗಭೂಮಿಯನ್ನು ಕಟ್ಟಿ ಬೆಳೆಸಲಾಗದೆ, ಸರ್ಕಾರದ ಮರ್ಜಿಗೆ ಇಳಿದ ಈತ, ಒಂದು ಕಾಲಘಟ್ಟದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕೆಂದು ಕೂಗೆಬ್ಬಿಸಿ ಅಖಂಡ ಕರ್ನಾಟಕದ ಅಸ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದ. ಈ ಎಲ್ಲಾ ವೈಫಲ್ಯಗಳನ್ನು ಮರೆಮಾಚಲು ಈಗ ಅಧಿಕಾರದ ಮರ್ಜಿಗನುಗುಣವಾಗಿ ಮಾತನಾಡಲು ತೊಡಗಿದ್ದಾರೆ, ಇನ್ನು ಮುಂದೆ ಒಕ್ಕಲಿಗರ ತೇಜೋವಧೆಗೆ ಪ್ರಯತ್ನಿಸಿದರೆ ಸಾಂಘಿಕ ಹೋರಾಟಕ್ಕಿಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಡಾ.ಶಂಕರಗೌಡ, ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ್, ಲೋಕೇಶ್ ಚಂದಗಾಲು, ಎಂ.ಕೆ.ಹರೀಶ್ ಕುಮಾರ್, ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ವಿಶ್ರಾಂತ ಪ್ರಾಚಾರ್ಯ ಡಾ.ಅನಿಲ್ ಕುಮಾರ್, ನಾಗರೇವಕ್ಕ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!